ನವದೆಹಲಿ:ದೇಶದಲ್ಲಿ ಅಂದಾಜು ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಿದ್ದು, ಇದರಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಸಂಖ್ಯೆ ಹೆಚ್ಚಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಇದರಲ್ಲಿ ಸೇರಿರುವುದಾಗಿ ವಿವರಿಸಿದೆ.
ಒಟ್ಟಾರೆಯಾಗಿ ಶೇ.62ರಷ್ಟು ವಿದ್ಯಾರ್ಥಿನಿಯರು ಕಾಲ್ನಡಿಗೆಯಲ್ಲಿ ಶಾಲೆಗೆ ತೆರಳುತ್ತಿದ್ದು, ಹುಡುಗರ ಸಂಖ್ಯೆ ಶೇ.57.9ರಷ್ಟು, ಸಾರ್ವಜನಿಕ ಸಾರಿಗೆ ಶೇ.12.4ರಷ್ಟು ಹಾಗೂ ಸೈಕಲ್ ಶೇ.11.3ರಷ್ಟು ಎಂದು ರಾಷ್ಟ್ರೀಯ ಅಂಕಿಸಂಖ್ಯೆ ಸಂಸ್ಥೆ(ಎನ್ ಎಸ್ ಒ)ಯ ನೂತನ ವರದಿ ತಿಳಿಸಿದೆ.
ಶೈಕ್ಷಣಿಕ ಸಂಸ್ಥೆಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸಾರಿಗೆಯಲ್ಲಿ ನಿರಂತರವಾಗಿ ಪ್ರಯಾಣ ದರ ಕಡಿತದ ಸೌಲಭ್ಯ ಸಿಗುತ್ತದೆ. ಸುಮಾರು ಶೇ.48.3ರಷ್ಟು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯ್ತಿ ಪಡೆಯುತ್ತಾರೆ. ಇದರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ.51.3ರಷ್ಟು ಹಾಗೂ ನಗರ ಪ್ರದೇಶದಲ್ಲಿ ಶೇ.42.7ರಷ್ಟು ರಿಯಾಯ್ತಿ ಸೌಲಭ್ಯ ಪಡೆದುಕೊಂಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಅರಬ್ ನಾಡಿನಲ್ಲಿ ಇಂದಿನಿಂದ 53 ದಿನಗಳ ಐಪಿಎಲ್ ಅಬ್ಬರ
ಈ ಅಂಕಿಅಂಶದಲ್ಲಿ ವಿದ್ಯಾರ್ಥಿಗಳ ಮನೆ ಮತ್ತು ಶಾಲೆಗಳ ನಡುವೆ ಇರುವ ದೂರವನ್ನು ಕೂಡಾ ಪರಿಗಣಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.92.7ರಷ್ಟು ವಿದ್ಯಾರ್ಥಿಗಳ ಮನೆಯ ಪ್ರದೇಶದ ಒಂದು ಕಿಲೋ ಮೀಟರ್ ಅಂತರದಲ್ಲಿ ಪ್ರಾಥಮಿಕ ಶಾಲೆಗಳು ಇದ್ದಿರುವುದು ಕಂಡು ಬಂದಿದೆ. ನಗರ ಪ್ರದೇಶದಲ್ಲಿ ಶೇ.87.2ರಷ್ಟು ಎಂದು ವರದಿ ವಿವರಿಸಿದೆ.
ಶೇ.68ರಷ್ಟು ಗ್ರಾಮೀಣ ಪ್ರದೇಶದ ಮನೆಗಳು ಮತ್ತು ಶೇ.80ರಷ್ಟು ನಗರಪ್ರದೇಶದ ಮನೆಗಳಿಗೆ 1 ಕಿಲೋ ಮೀಟರ್ ಅಂತರದಲ್ಲಿ ಹಿರಿಯ ಪ್ರಾಥಮಿಕ ಶಾಲೆಗಳಿದೆ ಎಂದು ವರದಿ ತಿಳಿಸಿದೆ.