Advertisement

ಆರ್‌ಟಿಇ ಮಕ್ಕಳ ಪ್ರವೇಶಕ್ಕೆ ಅವಕಾಶ ಕಲ್ಪಿಸಿ

01:24 PM Jun 03, 2018 | |

ಮೈಸೂರು: ಆರ್‌ಟಿಇ ಕಾಯ್ದೆ ಅಡಿಯಲ್ಲಿ ಮಕ್ಕಳ ಶಾಲಾ ಪ್ರವೇಶಾತಿಗೆ ಅವಕಾಶ ನೀಡದೆ ಡೊನೇಷನ್‌ ದಂಧೆಯಲ್ಲಿ ತೊಡಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ನಗರದ ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

Advertisement

ನ್ಯಾಯ ಒದಗಿಸಿ: ಡೊನೇಷನ್‌ ದಂಧೆಯಲ್ಲಿ ತೊಡಗಿರುವ ನಗರದ ಬಹುತೇಕ ಖಾಸಗಿ ಶಾಲೆಗಳು ಆರ್‌ಟಿಇ ಅಡಿಯಲ್ಲಿ ಮಕ್ಕಳಿಗೆ ಸೀಟು ನೀಡದೆ ವಂಚಿಸುವ ಮೂಲಕ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿವೆ. ಖಾಸಗಿ ಶಾಲಾ ಆಡಳಿತ ಮಂಡಳಿಗಳ ಈ ನಡೆಯಿಂದ ಪೋಷಕರು ಗೊಂದಲಕ್ಕೆ ಸಿಲುಕಿದ್ದು, ಇಂತಹ ಶಾಲೆಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ನ್ಯಾಯ ಕೊಡಿಸಬೇಕು.

ಆ ಮೂಲಕ ಆರ್‌ಟಿಇ ಕಾಯ್ದೆಯಡಿ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ದಸಂಸ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಜಿಲ್ಲೆಯ 141 ಖಾಸಗಿ ಅಲ್ಪಸಂಖ್ಯಾತ ಶಾಲೆಗಳಲ್ಲಿ ಅಲ್ಪಸಂಖ್ಯಾತರಿಗೆ ಕಾನೂನು ಪ್ರಕಾರ ಶೇ.75 ಮೀಸಲಾಗಿ ನೀಡುತ್ತಿಲ್ಲ. ಆರ್‌ಟಿಇ ಮೀಸಲಾತಿ ಪಟ್ಟಿ ಪ್ರಕಟಿಸಿರುವಂತೆ ಮಕ್ಕಳನ್ನು ಸೇರಿಸಿಕೊಳ್ಳಬೇಕೆಂದು ಇಲಾಖೆ ಸೂಚನೆ ನೀಡಿದರೂ,

ಶಾಲಾ ಆಡಳಿತ ಮಂಡಳಿಯವರು ದಾಖಲೆ ಪರಿಶೀಲಿಸಿ ಹಾಗೂ ಡೇರಾ ಸಭೆ ನಡೆಸಿದ ಬಳಿಕವಷ್ಟೇ ಪ್ರವೇಶ ನೀಡುವುದಾಗಿ ತಿಳಿಸುತ್ತಾರೆ. ಶಾಲಾ ಆಡಳಿತ ಮಂಡಳಿ ಹಾಗೂ ಇಲಾಖೆ ಅಧಿಕಾರಿಗಳ ಮಕ್ಕಳು ಹಾಗೂ ಪೋಷಕರು ತೊಂದರೆ ಎದುರಿಸುವಂತಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. 

ಮಕ್ಕಳ ಸ್ಥಿತಿ ಅತಂತ್ರ: ನಗರದ ಕೂರ್ಗಳ್ಳಿಯ ಎಕ್ಸೆಲ್‌ ಪಬ್ಲಿಕ್‌ ಶಾಲೆ, ಕೌಟಿಲ್ಯ ವಿದ್ಯಾಲಯ, ಜ್ಞಾನಸರೋವರ ಇಂಟರ್‌ ನ್ಯಾಷನಲ್‌ ಶಾಲೆ, ಡೆಲ್ಲಿ ಪಬ್ಲಿಕ್‌ ಶಾಲೆ, ನಂಜನಗೂಡಿನ ಸಮುದ್ರ ಶಾಲೆ, ಶ್ರೀಕಂಠೇಶ್ವರ ಶಿಕ್ಷಣ ಸಂಸ್ಥೆ ಸೇರಿದಂತೆ ಬಹುತೇಕ ಶಾಲೆಗಳು ಆರ್‌ಟಿಇ ಅಡಿಯಲ್ಲಿ ಸೀಟು ಪಡೆದ ಮಕ್ಕಳ ಭವಿಷ್ಯವನ್ನು ಅತಂತ್ರದ ಸ್ಥಿತಿಯಲ್ಲಿರಿಸಿವೆ. 

Advertisement

ಡೇರಾ ಸಭೆ ನಡೆಸಿ: ಎರಡನೇ ಸುತ್ತಿನ ಆಯ್ಕೆ ಪ್ರಕ್ರಿಯೆ ಪ್ರಕಟವಾಗಿದ್ದರೂ ಮೇಲಿನ ಶಿಕ್ಷಣ ಸಂಸ್ಥೆಗಳು ಜಿಲ್ಲಾಧಿಕಾರಿಗಳು ಹಾಗೂ ಡಿಡಿಪಿಐ ನೇತೃತ್ವದಲ್ಲಿ ಡೇರಾ ಸಭೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿದ್ದು, ಡೇರಾ ಸಭೆ ನಡೆಯುವರೆಗೂ ಮಕ್ಕಳ ಗತಿಯೇನು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸುವ ಮೂಲಕ ಆಯ್ಕೆ ಪಟ್ಟಿಯಂತೆ ನೇಮಕಾತಿ ಮಾಡಿಕೊಳ್ಳಲು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದು ಒತ್ತಾಯಿಸಿದರು. 

ಪ್ರತಿಭಟನೆಯಲ್ಲಿ$ದಲಿತ ಸಂಘರ್ಷ ಸಮಿತಿ ಉಪವಿಭಾಗೀಯ ಸಂಚಾಲಕ ಯಡದೊರೆ ಮಹದೇವಯ್ಯ, ಜನಸಂಗ್ರಮ ಪರಿಷತ್‌ ವಿಭಾಗೀಯ ಅಧ್ಯಕ್ಷ ನಗರ್ಲೆ ವಿಜಯ್‌ಕುಮಾರ್‌, ಮೂಡಹಳ್ಳಿ ಮಹದೇವ್‌, ಅಲತ್ತೂರು ಶಿವರಾಜು, ಬೊಮ್ಮನಹಳ್ಳಿ ಮಹದೇವು, ಗೋವಿಂದರಾಜು, ಬೊಕ್ಕಳ್ಳಿ ಮಹದೇವಸ್ವಾಮಿ, ಕೂರ್ಗಳ್ಳಿ ರಾಘವೇಂದ್ರ, ಗೋಪಾಲ್‌, ಚೋರನಹಳ್ಳಿ ಕಾರ್ತಿಕ್‌ ಮತ್ತಿತರರು ಭಾಗವಹಿಸಿದ್ದರು. 

ಆರ್‌ಟಿಇ ಪ್ರವೇಶಾತಿಗೆ ಸಂಬಂಧಿಸಿ ಆರು ದೂರು ದಾಖಲಾಗಿವೆ. ದೂರುಗಳಲ್ಲಿ ಕೆಲ ಪೋಷಕರು ಪುಸ್ತಕ ನೀಡಿಲ್ಲ. ಪ್ರವೇಶ ನೀಡುತ್ತಿಲ್ಲ. ಕೆಲ ಶಿಕ್ಷಣ ಸಂಸ್ಥೆಗಳು ಆರ್‌ಟಿಇ ಪ್ರವೇಶ ನೀಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಹೀಗಾಗಿ ಜಿಲ್ಲಾ ಶಿಕ್ಷಣ ನಿಯಂತ್ರಣ ಮಂಡಳಿ(ಡೇರಾ) ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜೂ.6ರಂದು ಸಭೆ ಕರೆದಿರುವುದಾಗಿ ಎಲ್ಲಾ ಶಾಲೆಗಳಿಗೂ ನೋಟಿಸ್‌ ನೀಡಲಾಗಿದೆ. ಸಭೆ ಬಳಿಕ ಜಿಲ್ಲಾಧಿಕಾರಿಗಳೇ ಕಾನೂನು ಕ್ರಮ ಕೈಗೊಳ್ಳುವರು. 
-ಮಮತಾ, ಡಿಡಿಪಿಐ

Advertisement

Udayavani is now on Telegram. Click here to join our channel and stay updated with the latest news.

Next