ಹುಬ್ಬಳ್ಳಿ: ಇಲ್ಲಿನ ಈದ್ಗಾ ಮೈದಾನದಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕು ಹಾಗೂ ಮೂರು ದಿನಗಳಲ್ಲಿ ಸ್ಪಷ್ಟ ಹೇಳಿಕೆ ನೀಡಬೇಕೆಂದು ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ ಬುಧವಾರ ಮಹಾಪೌರರು ಹಾಗೂ ಪಾಲಿಕೆ ಆಯುಕ್ತರಿಗೆ ಮರು ಮನವಿ ಸಲ್ಲಿಸಿದರು.
ಈದ್ಗಾ ಮೈದಾನದಲ್ಲಿ ಕಳೆದ ಕೆಲವು ವರ್ಷಗಳಿಂದ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂದು ಮನವಿ ಸಲ್ಲಿಸುತ್ತಿದ್ದರೂ ಇದುವರೆಗೆ ಮಹಾನಗರ ಪಾಲಿಕೆಯಿಂದ ಯಾವುದೇ ಅಭಿಪ್ರಾಯ ವ್ಯಕ್ತವಾಗಿಲ್ಲ. ಈ ಕುರಿತು ಪಾಲಿಕೆ ಆಯುಕ್ತರಿಗೆ, ಮಹಾಪೌರರಿಗೆ ಸೇರಿದಂತೆ ಹಲವರಿಗೆ ವಿವಿಧ ಹಿಂದೂಪರ ಸಂಘಟನೆಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಇದೀಗ ಮತ್ತೇ ಮನವಿ ಸಲ್ಲಿಸುವ ಮೂಲಕ ಮಹಾನಗರ ಪಾಲಿಕೆಗೆ ಮೂರು ದಿನಗಳ ಗಡುವು ನೀಡಲಾಗಿದೆ. ಅಷ್ಟರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ನಮಗೆ ಸ್ಪಷ್ಟತೆ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ಹೋರಾಟದ ರೂಪರೇಷೆ ಸಿದ್ಧಪಡಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಸಮಿತಿ, ಹಿಂದೂ ಜಾಗರ ವೇದಿಕೆ, ಶ್ರೀರಾಮ ಸೇನೆ ಹಾಗೂ ವಿವಿಧ ಗಣೇಶ ಉತ್ಸವ ಮಂಡಳಿಗಳಿಂದ ಮನವಿ ಸಲ್ಲಿಸಲಾಯಿತು. ಸಮಿತಿ ಸಂಚಾಲಕ ಹನಮಂತಸಾ ನಿರಂಜನ ಮಾತನಾಡಿದರು. ಸದಸ್ಯರಾದ ವಿಶ್ವನಾಥ ಕುಲಕರ್ಣಿ, ಸಂತೋಷ ಕಠಾರೆ, ರಾಘವೇಂದ್ರ ಕಠಾರೆ, ರಾಜಶ್ರೀ ಜಡಿ, ಸಾಗರ ಪವಾರ, ಅಭಿಷೇಕ ನಿರಂಜನ ಮೊದಲಾದವರಿದ್ದರು.
ಪಾಲಿಕೆ ಆಯುಕ್ತ ಡಾ|ಬಿ.ಗೋಪಾಲಕೃಷ್ಣ ಪ್ರತಿಕ್ರಿಯಿಸಿ, ಈದ್ಗಾ ಮೈದಾನ ಪಾಲಿಕೆ ಆಸ್ತಿಯಾಗಿದೆ. ಗಣೇಶ ಆಚರಣೆ ಅವಕಾಶ ಕೇಳಿದ್ದಾರೆ. ಪರಿಸ್ಥಿತಿ ಅರಿತು ಪಾಲಿಕೆ ಎಲ್ಲ ಚುನಾಯಿತ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ವಿಚಾರವಾಗಿ ಯಾವುದೇ ಒತ್ತಡವಿಲ್ಲ. ಇದು ಕರ್ತವ್ಯದ ಒಂದು ಭಾಗವಾಗಿದೆ ಎಂದರು.
ಪಾಲಿಕೆ ಆಯುಕ್ತರು ಹಾಗೂ ಸರ್ವ ಸದಸ್ಯರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಂಡು ನಂತರ ತಿಳಿಸಲಾಗುವುದು ಎಂದು ಮನವಿ ಸ್ವೀಕರಿಸಿದ ಮಹಾಪೌರ ಈರೇಶ ಅಂಚಟಗೇರಿ ಪ್ರತಿಭಟನಾಕಾರರಿಗೆ ತಿಳಿಸಿದರು.