Advertisement

ಮತದಾರರ ಪಟ್ಟಿಗೆ ಹೆಸರು ಸೇರಿಸಲು 12ರವರೆಗೂ ಅವಕಾಶ

11:30 AM Jan 05, 2018 | |

ಬೆಂಗಳೂರು: ಭಾರತೀಯ ಚುನಾವಣಾ ಆಯೋಗದ ಆದೇಶದ ಮೇರೆಗೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ಪರಿಷ್ಕರಣೆ ಅವಧಿಯನ್ನು ಜ.12ರವರೆಗೆ ವಿಸ್ತರಿಸಿದ್ದು, ಪಾಲಿಕೆ ವ್ಯಾಪ್ತಿಯ ಅಂತಿಮ ಮತದಾರರ ಪಟ್ಟಿ ಫೆ.20ರಂದು ಪ್ರಕಟಗೊಳ್ಳಲಿದೆ.

Advertisement

ಈ ಮೊದಲು ಆಕ್ಷೇಪಣೆ ಸಲ್ಲಿಕೆ, ಹೆಸರು ಸೇರ್ಪಡೆ ಮತ್ತು ಪರಿಷ್ಕರಣೆಗೆ ಡಿ.29 ಕೊನೆಯ ದಿನವಾಗಿತ್ತು. ಪ್ರಸ್ತುತ ಚುನಾವಣೆ ಆಯೋಗದ ಸೂಚನೆ ಮೇರೆಗೆ ಅವಧಿ ವಿಸ್ತರಿಸಲಾಗಿದೆ. 2018ರ ಜನವರಿ 1ಕ್ಕೆ ಅನ್ವಯವಾಗುವಂತೆ ಮತದಾರರ ಪಟ್ಟಿ ಪರಿಷ್ಕರಣೆಗೊಳ್ಳಲಿದ್ದು, ಇದರಿಂದ ಜ.1ಕ್ಕೆ 18 ವರ್ಷ ತುಂಬುವವರು ಕೂಡ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಹರಾಗಿರುತ್ತರೆ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರಿಷ್ಕರಣೆಗಾಗಿ ಲಕ್ಷ ಅರ್ಜಿ: 2017ರ ನವೆಂಬರ್‌ 2ರಿಂದ 2018ರ ಜ.3ರವರೆಗೆ ನಡೆದ ವಿಶೇಷ ಪರಿಷ್ಕರಣಾ ಪ್ರಕ್ರಿಯೆಯಲ್ಲಿ 1,36,563 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ ಸಂಬಂಧಿಸಿದ 95,219 ಅರ್ಜಿಗಳಿವೆ. ಚುನಾವಣೆ ಹೊಸ್ತಿಲಲ್ಲಿ ಇರುವುದರಿಂದ ಮತದಾನ ಹಕ್ಕು ಪಡೆಯಲು ಇದೊಂದು ಅವಕಾಶ ಎಂದು ಅವರು ಹೇಳಿದರು. 

ಮನೆ ಮನೆಗೆ ಭೇಟಿ: ಈ ಅವಧಿಯಲ್ಲಿ ಚುನಾವಣೆ ಕರ್ತವ್ಯದಲ್ಲಿ ನಿರತರಾದ ಅಧಿಕಾರಿಗಳು ಮತ್ತು ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ಭೇಟಿ ನೀಡಿ, ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಅರ್ಹ ಮತದಾರರ ಸೇರ್ಪಡೆಗೆ ಹೆಸರು ನೋಂದಣಿ, ಪರಿಶೀಲನೆ ನಡೆಸಲಿದ್ದಾರೆ. ಸುಮಾರು 40 ಸಾವಿರ ಸಿಬ್ಬಂದಿ ಚುನಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುತ್ತಾರೆ. 8,284 ಮತಗಟ್ಟೆಗಳನ್ನು ತೆರೆಯಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ಆಯುಕ್ತ (ಚುನಾವಣೆ) ನಟೇಶ್‌ ಮತ್ತಿತರರು ಇದ್ದರು. 

ಡಿಜಿಟಲ್‌ ಮ್ಯಾಪ್‌ನಲ್ಲಿ ಮತಗಟ್ಟೆ ಮಾಹಿತಿ: ಮತಗಟ್ಟೆಗಳ ಮಾಹಿತಿ ಶೀಘ್ರವೇ ಡಿಜಿಟಲ್‌ ರೂಪದಲ್ಲಿ ಮತದಾರರಿಗೆ ಲಭ್ಯವಾಗಲಿದೆ. ಎಲ್ಲ 28 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟಾರೆ 8,524 ಮತಗಟ್ಟೆಗಳನ್ನು ತೆರೆಯಲಾಗುವುದು.

Advertisement

ಮತದಾರರ ಅನುಕೂಲಕ್ಕಾಗಿ ಈ ಮತಟ್ಟೆಗಳ ಮಾಹಿತಿಯನ್ನು ಡಿಜಿಟಲ್‌ ನಕ್ಷೆ ಮೂಲಕ ನೀಡಲಾಗುವುದು. ಈ ಸಂಬಂಧ ಡಿಜಿಟಲ್‌ ನಕ್ಷೆ ರೂಪಿಸಲಾಗುತ್ತಿದೆ. ಯಾವ ಮತಗಟ್ಟೆ ಎಲ್ಲಿದೆ? ಹೇಗೆ ಹೋಗುವುದು? ಮತ್ತಿತರ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ ಎಂದು ಆಯುಕ್ತ ಮಂಜುನಾಥ ಪ್ರಸಾದ್‌ ತಿಳಿಸಿದರು.

ಪಟ್ಟಿಯಲ್ಲಿ ಹೆಸರು ಇರಲೇಬೇಕು: “ಒಂದು ವೇಳೆ ಮತದಾರರ ಗುರುತಿನ ಚೀಟಿ ಇದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಮತದಾನಕ್ಕೆ ಅವಕಾಶ ಇರುವುದಿಲ್ಲ,’ ಎಂದು ಆಯುಕ್ತರು ಸ್ಪಷ್ಟಪಡಿಸಿದರು. ಈ ಹಿಂದೆಯೇ ನಗರದ ಒಂದೆಡೆ ಬಾಡಿಗೆಗೆ ಇದ್ದು, ಆ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿಯನ್ನೂ ಹೊಂದಿರುತ್ತಾರೆ.

ನಂತರ ಆ ವ್ಯಕ್ತಿ ಅಲ್ಲಿಂದ ಬೇರೆ ಕಡೆಗೆ ಹೋಗಿರಬಹುದು. ಆಗ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಹಳೆಯ ವಿಳಾಸದಲ್ಲಿಲ್ಲದ ವ್ಯಕ್ತಿಯ ಹೆಸರು ಪಟ್ಟಿಯಿಂದ ತೆಗೆದುಹಾಕಲಾಗಿರುತ್ತದೆ. ಆದ್ದರಿಂದ ಮತದಾರರ ಗುರುತಿನ ಚೀಟಿ ಇದ್ದರೂ, ಪಟ್ಟಿಯಲ್ಲಿ ತಮ್ಮ ಹೆಸರು ಇರುವುದು ಖಾತ್ರಿಪಡಿಸಿಕೊಳ್ಳಬೇಕು,’ ಎಂದು ತಿಳಿಸಿದರು.

ಎಲ್ಲೆಲ್ಲಿ ಸೇರ್ಪಡೆ, ಮಾರ್ಪಾಡಿಗೆ ಅವಕಾಶ?: ಮತದಾರರ ನೋಂದಣಾಧಿಕಾರಿಗಳ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ, ಎಲ್ಲ 198 ವಾರ್ಡ್‌ಗಳ ಕಚೇರಿ, 101 “ಬೆಂಗಳೂರು ಒನ್‌’ ಕೇಂದ್ರಗಳು, ಬಿಬಿಎಂಪಿ ಕಚೇರಿ ವ್ಯಾಪ್ತಿಯ ಎಲ್ಲ ಸಕಾಲ ಕೇಂದ್ರಗಳು ಮತ್ತು ನಾಗರಿಕ ಸೇವಾ ಕೇಂದ್ರಗಳಲ್ಲಿ ಮತದಾರರ ಮಾರ್ಪಾಡುಗಳನ್ನು ಮಾಡಲು ಅವಕಾಶ ಇರುತ್ತದೆ. ಅಷ್ಟೇ ಅಲ್ಲ, ವೆಬ್‌ಸೈಟ್‌:www.ceokarnataka.kar.nic.in ಗೆ ಭೇಟಿ ನೀಡಿ ಆನ್‌ಲೈನ್‌ ಮೂಲಕವೂ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಆಯುಕ್ತರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next