Advertisement

30ರಂದು ಆಶ್ರಯ ನಿವೇಶನ ಹಂಚಿಕೆ: ದರ್ಶನಾಪುರ

03:35 PM Aug 27, 2022 | Team Udayavani |

ಶಹಾಪುರ: ಅರ್ಹ ನಿರಾಶ್ರಿತ ಕುಟುಂಬಕ್ಕೆ ನಿವೇಶನಗಳನ್ನು ಆ. 30ರಂದು ನಗರಸಭೆ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಲಾಟರಿ ಮೂಲಕ ಪಾರದರ್ಶಕವಾಗಿ ಹಂಚಿಕೆ ಮಾಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳಿಸಗರ ಭಾಗದ ಸರ್ವೇ ನಂಬರ್‌ 125ರಲ್ಲಿ ಒಟ್ಟು 481 ನಿವೇಶನಗಳಿದ್ದು, ಅರ್ಹತೆ ಹೊಂದಿದವರಿಗೆ ಮಾತ್ರ ಹಂಚಿಕೆ ಮಾಡಲಾಗುತ್ತಿದೆ. ಲಾಟರಿ ವೇಳೆ ಅನರ್ಹತೆ ಇದ್ದವರಿಗೆ ನಿವೇಶನ ಹಂಚಿಕೆಯಾದರೆ ತಕ್ಷಣಕ್ಕೆ ಆ ಕುರಿತು ಸಮರ್ಪಕ ಮಾಹಿತಿಯೊಂದಿಗೆ ದೂರು ನೀಡಿದರೆ ಅಧಿಕಾರಿಗಳ ತಂಡ ಪರಿಶೀಲಿಸಿ ಅರ್ಹತೆ ಇಲ್ಲದಿದ್ದರೆ ಹಂಚಿಕೆಯಾದ ನಿವೇಶನ ರದ್ದು ಪಡಿಸುವ ಅಧಿಕಾರ ಹೊಂದಿದೆ. ಆ ನಿಟ್ಟಿನಲ್ಲಿ ಈಗಾಗಲೇ ನಿವೇಶನಕ್ಕೆ ಸುಮಾರು 3 ಸಾವಿರ ಅರ್ಜಿಗಳು ಬಂದಿದ್ದು, ಅದರಲ್ಲಿ ಪರಿಶೀಲಿಸಲಾಗಿ 2 ಸಾವಿರ ಅರ್ಜಿಗಳು ತಿರಸ್ಕೃತಗೊಳಿಸಲಾಗಿದೆ. ಸುಮಾರು ಒಂದು ಸಾವಿರ ಅರ್ಜಿಗಳು ನಿವೇಶನ ಪಡೆಯಲು ಅರ್ಹತೆ ಹೊಂದಿವೆ. ಅದರಲ್ಲಿ ಕನ್ಯಾಕೋಳೂರ, ಫಿಲ್ಟರ್‌ ಬೆಡ್‌ ಮತ್ತು ಹಳಿಸಗರ ಭಾಗದ ಮಲ್ಲಯ್ಯನ ಮಡ್ಡಿ ಸೇರಿದಂತೆ ಒಟ್ಟು 650 ನಿವೇಶನಗಳಿದ್ದು, ಹಂಚಿಕೆ ಮಾಡಲಾಗುವುದು. ಇನ್ನುಳಿದವರಿಗೆ ಮುಂದಿನ ಆಶ್ರಯ ನಿವೇಶನಗಳಲ್ಲಿ ಆಶ್ರಯ ಕಲ್ಪಿಸಲಾಗುವುದು. ಅಲ್ಲದೇ ಇನ್ನೂ 774 ಆಶ್ರಯ ನಿವೇಶನಗಳ ಮಂಜೂರಾತಿ ತರಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದವರಿಗೂ ನಿವೇಶನ ನೀಡಲಾಗುವುದು ಎಂದರು.

ಅಲ್ಲದೇ ಮಲ್ಲಯ್ಯನ ಮಡ್ಡಿ ಭಾಗದಲ್ಲಿ ನಿರ್ಮಿಸಲಾದ ಆಶ್ರಯ ನಿವೇಶನಗಳಿಗೆ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ವಿದ್ಯುತ್‌ ಸರಬರಾಜು ವ್ಯವಸ್ಥೆಗೆ ಈಗಾಗಲೇ ಟೆಂಡರ್‌ ಕರೆಯಲಾಗಿದೆ. ಇಷ್ಟರಲ್ಲೇ ಕಾಮಗಾರಿ ಆರಂಭವಾಗಲಿದೆ. ಮೂಲ ಸೌಲಭ್ಯ ಕಲ್ಪಿಸುವುದರೊಂದಿಗೆ ಮನೆ ಕಟ್ಟಲೂ ಮಂಜೂರಾತಿ ಪಡೆಯಲಾಗಿದ್ದು, ನಿವೇಶನ ಹಂಚಿಕೆ ನಂತರ ಆಯಾ ನಿವೇಶನಗಳಲ್ಲಿ ಮನೆಯೂ ನಿರ್ಮಿಸುವ ಯೋಜನೆ ಸಹ ಸಿದ್ಧವಾಗಿದ್ದು, ಪರಿಪೂರ್ಣ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದರು. ಆಶ್ರಯ ಕಮಿಟಿ ಅಧ್ಯಕ್ಷ ವಸಂತಕುಮಾರ ಸುರಪುರಕರ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next