Advertisement
ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ವಿಶೇಷ ತುರ್ತು ಸಭೆಯಲ್ಲಿ ಕೃಷಿ ಮತ್ತು ಕೈಗಾರಿಕೆ, ಆರೋಗ್ಯ ಮತ್ತು ಶಿಕ್ಷಣ, ಸಾಮಾಜಿಕ ನ್ಯಾಯ, ಹಣಕಾಸು ಮತ್ತು ಯೋಜನಾ ಹಾಗೂ ಸಾಮಾನ್ಯ ಸ್ಥಾಯಿ ಸಮಿತಿಗಳವರು ಪಟ್ಟಿ ಮಾಡಿರುವ ಕಾಮಗಾರಿಗಳಿಗೆ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎಲ್ಲಾ ಸದಸ್ಯರೂ ಯಾವ್ಯಾವ ಕಾಮಗಾರಿಗಳನ್ನು ಸೇರ್ಪಡೆ ಮಾಡಬೇಕು ಎಂಬ ಪತ್ರವನ್ನು 2 ದಿನಗಳೊಳಗೆ ಸಲ್ಲಿಸುವಂತೆ ತಿಳಿಸಲಾಯಿತು.
Related Articles
Advertisement
ತಿ.ನರಸೀಪುರ ತಾಲೂಕು ಸೋಸಲೆ ಹೋಬಳಿಯ ರೈತ ಸಂಪರ್ಕ ಕೇಂದ್ರದ ಆವರಣವನ್ನು ರಸ್ತೆಯ ಮಟ್ಟಕ್ಕೆ ಎತ್ತರಿಸುವುದು ಮತ್ತು ಕಾಂಪೌಂಡ್ ಎತ್ತರಿಸುವ ಕಾಮಗಾರಿಗೆ 4 ಲಕ್ಷ, ತಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ, , ತಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಗೋದಾಮು ನಿರ್ಮಾಣಕ್ಕೆ 5 ಲಕ್ಷ, ಹುಣಸೂರು ತಾಲೂಕು ಕೃಷಿ ಇಲಾಖೆ ಕಟ್ಟಡ ದುರಸ್ತಿಗೆ 2 ಲಕ್ಷ ರೂ. ಸೇರಿದಂತೆ 11 ಕಾಮಗಾರಿಗಳಿಗೆ 44 ಲಕ್ಷ ರೂ. ಹಂಚಿಕೆಗೆ ಅನುಮೋದನೆ ನೀಡಲಾಯಿತು.
ರೇಷ್ಮೆ ಇಲಾಖೆ ಏರ್ಪಡಿಸುವ ವಸ್ತುಪ್ರದರ್ಶನಕ್ಕೆ ನೆಲ ಬಾಡಿಗೆ ಪಾವತಿಸಲು 2 ಲಕ್ಷ ರೂ., ಪಶು ಸಂಗೋಪನಾ ಇಲಾಖೆಯಿಂದ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪಶು ಚಿಕಿತ್ಸಾಲಯಗಳ ಕಟ್ಟಡ ದುರಸ್ತಿಮ ಸುಣ್ಣ ಬಣ್ಣ ಹೊಡೆಸುವುದು, ಶೌಚಾಲಯ, ಕಾಂಪೌಂಡ್ ನಿರ್ಮಾಣ ಸೇರಿದಂತೆ 28 ಕಾಮಗಾರಿಗಳಿಗೆ 60 ಲಕ್ಷ ರೂ., ಕೃಷಿ ಮಾರಾಟ ಇಲಾಖೆಯಿಂದ ಮಾರುಕಟ್ಟೆಗಳಲ್ಲಿ ಮೂಲ ಭೂತ ಸೌಕರ್ಯ ಕಲ್ಪಿಸಲು ಹಂಚಿಕೆಯಾಗಿರುವ 25 ಲಕ್ಷ ರೂ. ಅನುದಾನದಲ್ಲಿ ಸಂತೆ ಸರಗೂರು ಎಪಿಎಂಸಿ ವ್ಯಾಪ್ತಿಯ ಕಂದೇಗಾಲ ಗ್ರಾಮದ ಗ್ರಾಮೀಣ ಸಂತೆಗೆ ಕಾಂಪೌಂಡ್ ನಿರ್ಮಾಣ,
ತರಕಾರಿ ಗೋದಾಮು ನಿರ್ಮಾಣ, ಮುಖ್ಯ ದ್ವಾರದ ಕಾಂಪೌಂಡ್ ಹಾಗೂ ಗೇಟ್ ನಿರ್ಮಾಣ ಕಾಮಗಾರಿಗಳಿಗೆ ತಲಾ 5 ಲಕ್ಷ ರೂ.ಗಳಂತೆ 15 ಲಕ್ಷ, ರತ್ನಪುರಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸೋಲಾರ್ ದೀಪ ಅಳವಡಿಕೆಗೆ 5 ಲಕ್ಷ, ಕೆ.ಆರ್.ನಗರ ಎಪಿಎಂಸಿ ಪ್ರಾಂಗಣದಲ್ಲಿ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಕಾಮಗಾರಿಗೆ 5 ಲಕ್ಷ ರೂ. ಹಂಚಿಕೆ ಮಾಡಲು ಅನುಮೋದನೆ ನೀಡಲಾಯಿತು.
ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯಿಂದ ಆಶ್ರಯ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ಹಂಚಿಕೆಗೆ ಅನುಮೋದನೆ ನೀಡಲಾಯಿತು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯಿಂದ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಪ್ರೌಢಶಾಲೆಗಳಿಗೆ 1065 ಡೆಸ್ಕ್ಗಳನ್ನು ಖರೀದಿಸಲು, ಪೀಠೊಪರಣಕ್ಕೆ ಪೂರಕವಾಗಿ ಅಗತ್ಯವಿರುವ ವಿಜ್ಞಾನ ಮತ್ತು ಗಣಿತ ಕಿಟ್ ಮತ್ತು ಸಾಮಾಜಿಕ ವಿಜ್ಞಾನ ಚಾರ್ಟ್ಸ್ ವಿತರಣೆ ಮಾಡಲು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ 57 ಶಾಲೆಗಳ ಕಟ್ಟಡ ದುರಸ್ತಿಗೆ 1.67 ಕೋಟಿ ಅಂದಾಜು ವೆಚ್ಚಕ್ಕೆ ಅನುಮೋದನೆ ನೀಡಲಾಯಿತು.
ಅಧ್ಯಕ್ಷರ ಕೊಠಡಿ ನವೀಕರಣ: ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಸಲುವಾಗಿ ಲಭ್ಯವಿರುವ 1 ಕೋಟಿ ಅನುದಾನದಲ್ಲಿ ಅನುದಾನದಲ್ಲಿ ಅಧ್ಯಕ್ಷರ ಕೊಠಡಿಯ ತುರ್ತು ನವೀಕರಣ ಕಾಮಗಾರಿ ಹೊರತುಪಡಿಸಿ ಬೇರಾವುದೇ ಕಾಮಗಾರಿ ಕೈಗೊಂಡಿಲ್ಲ. ಸಾಮಾನ್ಯ ಸಭೆಯ ಅನುಮೋದನೆ ನಂತರವೇ ಕಾಮಗಾರಿ ಆರಂಭಿಸಲಾಗುವುದು ಎಂದು ಜಿಪಂ ಸಿಇಒ ಕೆ.ಜ್ಯೋತಿ ತಿಳಿಸಿದರು. ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್ ಸಭೆಯಲ್ಲಿ ಉಪಸ್ಥಿತರಿದ್ದರು.
ಯಾವ ತಾಲೂಕಿಗೆ ಎಷ್ಟು ಅನುದಾನ: ಹಣಕಾಸು, ಯೋಜನೆ ಮತ್ತು ಲೆಕ್ಕ ಪರಿಶೋಧನಾ ಸ್ಥಾಯಿ ಸಮಿತಿಯಿಂದ ಸಣ್ಣ ಕೆರೆಗಳ ಅಭಿವೃದ್ಧಿ ಅನುದಾನವಾಗಿ ಮೈಸೂರು ತಾಲೂಕಿಗೆ 3 ಲಕ್ಷ ರೂ. ತಿ.ನರಸೀಪುರ ತಾಲೂಕು 3.22 ಲಕ್ಷ, ನಂಜನಗೂಡು 1.17 ಲಕ್ಷ, ಕೆ.ಆರ್.ನಗರ 1.71 ಲಕ್ಷ, ಹುಣಸೂರು 3 ಲಕ್ಷ, ಪಿರಿಯಾಪಟ್ಟಣ 1.08 ಲಕ್ಷ, ಎಚ್.ಡಿ.ಕೋಟೆ ತಾಲೂಕಿಗೆ 5.48 ಲಕ್ಷ ಸೇರಿದಂತೆ ಒಟ್ಟು 57.58 ಲಕ್ಷ ರೂ. ಹಂಚಿಕೆ ಮಾಡಲಾಗಿದೆ.
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಎಸ್‌ಸಿಪಿ, ಟಿಎಸ್‌ಪಿ ಹಾಗೂ ಸಾಮನ್ಯ ಅನುದಾನದಡಿ ಎಚ್.ಡಿ.ಕೋಟೆ ತಾಲೂಕಿನಲ್ಲಿ 746.55 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ 87.07 ಲಕ್ಷ, ಹುಣಸೂರು ತಾಲೂಕಿನ 836.70 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ 97.58 ಲಕ್ಷ, ಕೆ.ಆರ್.ನಗರ ತಾಲೂಕಿನಲ್ಲಿ 596.70 ಕಿ.ಮೀ ರಸ್ತೆ ಅಭಿವೃದ್ಧಿಗೆ 69.50 ಲಕ್ಷ, ಪಿರಿಯಾಪಟ್ಟಣ ತಾಲೂಕಿನಲ್ಲಿ 586.65 ಕಿ.ಮೀ ರಸ್ತೆಗೆ 68.42 ಲಕ್ಷ,
ಮೈಸೂರು ತಾಲೂಕಿನ 572.20 ಕಿ.ಮೀ ರಸ್ತೆಗೆ 66.73 ಲಕ್ಷ, ನಂಜನಗೂಡು ತಾಲೂಕಿನ 764.80 ಕಿಮೀ ರಸ್ತೆಗೆ 89.20 ಲಕ್ಷ, ತಿ.ನರಸೀಪುರ ತಾಲೂಕಿನ 612.15 ಕಿ.ಮೀ ರಸ್ತೆ ಅಭಿವೃದ್ಧಿಗೆ 71.40 ಲಕ್ಷ ಸೇರಿದಂತೆ ಒಟ್ಟಾರೆ ಜಿಲ್ಲೆಯ 4715.75 ಕಿ.ಮೀ ಉದ್ದದ ರಸ್ತೆ ಅಭಿವೃದ್ಧಿಗೆ 5.50 ಕೋಟಿ ಅನುದಾನ ಹಂಚಿಕೆಗೆ ಸಾಮಾನ್ಯ ಸಭೆ ಒಪ್ಪಿಗೆ ದೊರೆಯಿತು. ಇದರ ಜೊತೆಗೆ 2019-20ನೇ ಸಾಲಿಗೆ ಜಿಲ್ಲೆಗೆ ಅಭಿವೃದ್ಧಿ ಅನುದಾನವಾಗಿ 6.40 ಕೋಟಿ ಹಂಚಿಕೆಯಾಗಿದೆ ಎಂದು ಜಿಪಂ ಸಿಇಒ ಮಾಹಿತಿ ನೀಡಿದರು.