ನವದೆಹಲಿ: ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಿಗೆ ಇಂದು ಹೆಚ್ಚುವರಿಯಾಗಿ 16.5 ಲಕ್ಷ ವಯಲ್ಸ್ ರೆಮ್ಡೆಸಿವಿರ್ ಚುಚ್ಚುಮದ್ದನ್ನು ಹಂಚಿಕೆ ಮಾಡಿದ್ದು ಕರ್ನಾಟಕಕ್ಕೆ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ.
ಇದು ಮುಂದಿನ ವಾರದ ಅಂದರೆ ಮೇ 3ರಿಂದ 9ರವರೆಗಿನ ಅವಧಿಯ ಬಳಕೆಗೆಗಾಗಿ. ಇದರಿಂದಾಗಿ ರಾಜ್ಯಕ್ಕೆ ಇದುವರೆಗೆ ಹಂಚಿಕೆಯಾದ ರೆಮ್ಡೆಸಿವರ್ ಪ್ರಮಾಣ 3,01,300 ವಯಲ್ಸಿಗೆ ಏರಿಕೆಯಾದಂತಾಗಿದೆ.
ಪತ್ರಿಕಾ ಹೇಳಿಕೆಯೊಂದರಲ್ಲಿ ಈ ವಿಷಯ ತಿಳಿಸಿರುವ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ರಾಜ್ಯಕ್ಕೆ ಏಪ್ರಿಲ್ 21ರಿಂದ ಮೇ 2ರವರೆಗಿನ ಬಳಕೆಗಾಗಿ 1,39,300 ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗಿತ್ತು. ಮುಂದಿನ ವಾರದ (ಸೋಮವಾರದಿಂದ ಭಾನುವಾರದವರೆಗೆ) ಬಳಕೆಗಾಗಿ 1.62 ಲಕ್ಷ ವಯಲ್ಸ್ ನಿಗದಿಪಡಿಸಲಾಗಿದೆ ಎಂದರು.
ಆಮದು ಮಾಡಿಕೊಳ್ಳಲಾಗುತ್ತಿರುವ ರೆಮ್ಡೆಸಿವರ್ ಪೈಕಿ 75 ಸಾವಿರ ವಯಲ್ಸ್ ಈಗಾಗಲೇ ಭಾರತ ತಲುಪಿದೆ. ಹಾಗೆಯೇ ಭಾರತದಲ್ಲಿಯೂ ರೆಮ್ಡೆಸಿವರ್ ಉತ್ಪಾದನೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಲಭ್ಯತೆಯನ್ನು ನೋಡಿಕೊಂಡು ಇನ್ನೂ ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗುವುದು ಸಚಿವರು ಭರವಸೆ ನೀಡಿದರು.
ಕರ್ನಾಟಕದ ಆಮ್ಲಜನಕ ಪಾಲನ್ನು (ಪ್ರತಿದಿನ) ಸದ್ಯದ 802 ಮೆಟ್ರಿಕ್ ಟನ್ನಿನಿಂದ 865 ಮೆಟ್ರಿಕ್ ಟನ್ನಿಗೆ ಏರಿಸಲಾಗಿದೆ. ಇದನ್ನು ಇನ್ನಷ್ಟು ಹೆಚ್ಚಿಸುವಂತೆ ರಾಜ್ಯವು ಕೇಂದ್ರ ವಾಣಿಜ್ಯ ಇಲಾಖೆಯನ್ನು ಕೋರಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ನಾನೂ ಚರ್ಚಿಸಿದ್ದೇನೆ. ಕೋವಿಡ್ ನಿರ್ವಹಣೆ ಬಗ್ಗೆ ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದೆ. ಇಂದು ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರೊಂದಿಗೂ ನಾನು ಮಾತಾಡಿದ್ದೇನೆ. ಪ್ರಮುಖವಾಗಿ ಹೆಚ್ಚುವರಿ ಆಮ್ಲಜನಕ ಪೂರೈಕೆ ಬಗ್ಗೆ ಚರ್ಚಿಸಿದ್ದೇವೆ. ಕೋವಿಡ್ ವಿರುದ್ಧದ ಈ ಸಮರದಲ್ಲಿ ರಾಜ್ಯಕ್ಕೆ ಏನೆಲ್ಲ ನೆರವು ಬೇಕೋ ಅದನ್ನೆಲ್ಲ ಕೇಂದ್ರವು ಪ್ರಾಮಾಣಿಕ ಪ್ರಯತ್ನ ಮಾಡುವುದು ಎಂದು ಸದಾನಂದ ಗೌಡ ಹೇಳಿದರು.
ಅದೇ ರೀತಿ, ಇನ್ನೊಂದು ಪ್ರಮುಖ ಔಷಧ ‘ತೊಸಿಲಿಜುಮಾಬ್’ನ್ನು (Tocilizumab) ಸಿಪ್ಲಾ ಕಂಪನಿ ಮೂಲಕ ಸ್ವಿಜರ್ಲ್ಯಾಂಡಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಹೀಗೆ ಆಮದು ಮಾಡಿಕೊಳ್ಳಲಾದ 9500 ವಯಲ್ಸ್ ‘ತೊಸಿಲಿಜುಮಾಬ್’ನ್ನು ಕೇಂದ್ರದ ವೈದ್ಯಕೀಯ ಸಂಸ್ಥೆಗಳು ಹಾಗೂ ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ. ಈ ಪೈಕಿ ಕರ್ನಾಟಕಕ್ಕೆ 855 ವಯಲ್ಸ್ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ಫಾರ್ಮಾ ಸಚಿವರು ತಿಳಿಸಿದರು.
ಈ ಮಧ್ಯೆ ಕರ್ನಾಟಕದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ ಇಲಾಖೆ) ಜಾವಿದ್ ಅಖ್ತರ್ ಕೇಂದ್ರ ವಾಣಿಜ್ಯ ಇಲಾಖೆಗೆ ಪತ್ರವೊಂದನ್ನು ಬರೆದು ರಾಜ್ಯದ ಆಮ್ಲಜನಕದ ಪಾಲನ್ನು ಹೆಚ್ಚಿಸುವಂತೆ ಕೋರಿದ್ದಾರೆ. ರಾಜ್ಯದಲ್ಲಿ ಮೇ 5ರ ವೇಳೆಗೆ ಸಕ್ರೀಯ ಕೋವಿಡ್ ಪ್ರಕರಣಗಳು 3.95 ಲಕ್ಷಕ್ಕೆ ಏರಿಕೆಯಾಗಲಿದೆ. ಶೇಕಡಾ 3ರಷ್ಟು ಕೋವಿಡ್ ಪೀಡಿತರನ್ನು ತೀವ್ರನಿಗಾ ಘಟಕದಲ್ಲಿ ದಾಖಲಿಸಬೇಕಾಗುತ್ತದೆ. ಹಾಗೆಯೇ ಶೇಕಡಾ 17 ರಷ್ಟು ಜನರಿಗೆ ಆಮ್ಲಜನಕದ ಅವಶ್ಯಕತೆ ಉಂಟಾಗಲಿದೆ. ಇದರಿಂದಾಗಿ ಮೇ 5ರ ವೇಳೆಗೆ ರಾಜ್ಯದ ಆಮ್ಲಜನಕದ ಅವಶ್ಯಕತೆ ಪ್ರತಿದಿನ ಕನಿಷ್ಠಪಕ್ಷ 1162 ಮೆಟ್ರಿಕ್ ಟನ್ನಿಗೆ ಏರಿಕೆಯಾಗಲಿದ್ದು ಇದನ್ನು ಪೂರೈಸುವಂತೆ ಅವರು ಕೋರಿದ್ದಾರೆ.