ಚಿಂಚೋಳಿ: ತಾಲೂಕಿನ ಚಿಮ್ಮನಚೋಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯನ್ನು ಉನ್ನತೀಕರಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಎಂದು ಸರ್ಕಾರ ಮಂಜೂರಿಗೊಳಿಸಬೇಕೆಂದು ಒತ್ತಾಯಿಸಿ ಚಿಮ್ಮನಚೋಡ ಗ್ರಾಮಸ್ಥರು ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ರಸ್ತೆತಡೆ ನಡೆಸಿ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿದರು.
ಚಿಮ್ಮನಚೋಡ ಗ್ರಾಪಂ ಮಾಜಿ ಅಧ್ಯಕ್ಷ ಶರಣರೆಡ್ಡಿ ಪೀರೆಡ್ಡಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಗ್ರಾಮವು ಹತ್ತು ಸಾವಿರ ಜನಸಂಖ್ಯೆ ಹೊಂದಿದೆ. ಜಿಲ್ಲಾ ಪಂಚಾಯಿತಿ, ತಾಪಂ, ಗ್ರಾಪಂ ಕೇಂದ್ರ ಸ್ಥಾನ ಹೊಂದಿದೆ. ರೈತ ಸಂಪರ್ಕ ಕೇಂದ್ರ, ಸಾರ್ವಜನಿಕ ಆಸ್ಪತ್ರೆ, ಪಶು ಆಸ್ಪತ್ರೆ ವಿದ್ಯುತ್ ವಿತರಣಾ ಘಟಕ, ಸರ್ಕಾರಿ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯವನ್ನು ಹೊಂದಿದೆ. ಚಿಮ್ಮನಚೋಡ ಗ್ರಾಮವು ಚಿಂಚೋಳಿ-ಹುಮನಾಬಾದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವುದರಿಂದ ಉತ್ತಮ ಸಂಪರ್ಕ ಹೊಂದಿಕೊಂಡಿರುತ್ತದೆ. ಆದರೆ ಸರ್ಕಾರ ನಮ್ಮ ಗ್ರಾಮಕ್ಕೆ ತಾರತಮ್ಯ ಧೋರಣೆ ತೋರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಚಿಮ್ಮನಚೋಡ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯನ್ನು 1980ರಲ್ಲಿ ಪ್ರಾರಂಭಿಸಲಾಗಿದೆ. ಸುತ್ತಲಿನ 40 ಹಳ್ಳಿಗಳ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಶಿಕ್ಷಣ ಪಡೆದುಕೊಳ್ಳುತ್ತಾರೆ. ಆದರೆ ಕೆಲವು ವರ್ಷಗಳ ಹಿಂದೆ ಪ್ರಾರಂಭಿಸಿದ ಸರ್ಕಾರಿ ಪ್ರೌಢ ಶಾಲೆಗಳಾದ ದೇಗಲಮಡಿ, ಐನೋಳಿ, ಗಡಿಕೇಶ್ವಾರ, ಭೂಯ್ನಾರ (ಕೆ) ಗ್ರಾಮದ ಸರ್ಕಾರಿ ಪ್ರೌಢ ಶಾಲೆಗಳನ್ನು ಉನ್ನತೀಕರಿಸಿದ ಪದವಿ ಪೂರ್ವ ಮಹಾವಿದ್ಯಾಲಯ ಕಾಲೇಜುಗಳೆಂದು ಸರ್ಕಾರ ಆದೇಶಿಸಿದ್ದು, ಚಿಮ್ಮನ ಚೋಡ ಗ್ರಾಮವನ್ನು ಕಡೆಗಾಣಿಸಿದ್ದು ಅಸಮಾಧಾನ ಮೂಡಿಸಿದೆ ಎಂದರು.
ಶಾಸಕ ಡಾ| ಅವಿನಾಶ ಜಾಧವ ಮತ್ತು ಕಲಬುರಗಿ ಸಂಸದ ಡಾ| ಉಮೇಶ ಜಾಧವ ಅವರಿಗೆ ಅನೇಕ ಸಲ ಕಾಲೇಜು ಮಂಜೂರಿ ಮಾಡುವಂತೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಾಪಂ ಮಾಜಿ ಸದಸ್ಯ ಮಹಮ್ಮದ ಹುಸೇನ್ ನಾಯಕೊಡಿ ಅಕ್ರೋಶ ವ್ಯಕ್ತಪಡಿಸಿದರು.
ಚಿಮ್ಮನಚೋಡ ಗ್ರಾಮವು ಕೇಂದ್ರ ಸ್ಥಾನವಾಗಿರುವುದರಿಂದ ಹೊಸದಾಗಿ ಕಾಲೇಜು ಮಂಜೂರಿ ಮಾಡಿದರೆ ಹಸರಗುಂಡಗಿ, ಕನಕಪುರ, ಸಾಲೇಬಿರನಳ್ಳಿ, ಐನಾಪುರ ಸರ್ಕಾರಿ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎನ್ನುವ ಮನವಿ ಪತ್ರವನ್ನು ಐನಾಪುರ ನಾಡಕಚೇರಿ ಉಪ ತಹಶೀಲ್ದಾರ್ ರಮೇಶಕುಮಾರ ಕೋಳಿ ಅವರಿಗೆ ಸಲ್ಲಿಸಲಾಯಿತು.
ಮುಖಂಡರಾದ ಸಂಜೀವಕುಮಾರರೆಡ್ಡಿ, ಮೋದಿನ ನಾಯಕೋಡಿ, ಶರಣರೆಡ್ಡಿ ಪೀರೆಡ್ಡಿ, ಸಿರಾಜುದ್ದೀನ್ ದುಂಬಾಳಿ, ಜಗನ್ನಾಥ ತೆಲಕಾಪಳ್ಳಿ, ಶಿವಕುಮಾರ ಹಿರೇಮಠ, ಗಫೂರ ಎಲಕಪಳ್ಳಿ, ರವಿ ಮೋತಕಪಳ್ಳಿ, ಗೌತಮ ಬುದ್ಧ, ಜಗನ್ನಾಥ ಹೊಸಮನಿ, ಅರವಿಂದ ಪಟರೆಡ್ಡಿ ಮತ್ತಿತರರು ಭಾಗವಹಿಸಿದ್ದರು.