ಲಕ್ನೋ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸಾಗಿದ್ದು, ಉತ್ತರ ಪ್ರದೇಶದ ಎನ್‌ಡಿಎ ಮೈತ್ರಿ ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಬಿಜೆಪಿಯ ರಾಜ್ಯ ನಾಯಕರು ಸೊಕ್ಕಿನ ವರ್ತನೆ ತೋರುತ್ತಿದ್ದಾರೆ ಎಂದು ಆರೋಪಿಸಿರುವ ಮಿತ್ರ ಪಕ್ಷಗಳಾದ ಅಪ್ನಾದಳ ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷಗಳು ಶನಿವಾರ ಪ್ರಧಾನಿ ಅವರ ಕಾರ್ಯಕ್ರಮದಿಂದ ದೂರ ಉಳಿದಿವೆ.
ರಾಜ್ಯ ಬಿಜೆಪಿ ನಾಯಕರು ಸೊಕ್ಕಿನ ವರ್ತನೆ ತೋರುತ್ತಿದ್ದಾರೆ.ಕೇಂದ್ರ ಸಚಿವ ಅನುಪ್ರಿಯಾ ಪಟೇಲ್ ಅವರನ್ನು ಕಡೆಗಣಿಸಲಾಗುತ್ತಿದೆ. ಅವರ ಇಲಾಖೆಯ ಕಾರ್ಯಕ್ರಮಗಳಿಗೆ ಅವರನ್ನು ಕರೆಯುತ್ತಿಲ್ಲ ಎಂದು ಅಪ್ನಾದಳ ಅಸಮಾಧಾನ ಹೊರ ಹಾಕಿದೆ.
ಈ ನಾಯಕರ ವರ್ತನೆ ಸಮಾಜದ ತಳಮಟ್ಟದ ಜನರಿಗೆ ತೀವ್ರವಾಗಿ ಅವಮಾನ ಮಾಡುವಂತಿದೆ, ಪ್ರಧಾನಿ ನರೇಂದ್ರ ಮೋದಿ ಅವರು ತಕ್ಷಣ ಮಧ್ಯ ಪ್ರವೇಶಿಸಿ ಬಗೆಹರಿಸಲಿ ಎಂದು ಅಪ್ನಾ ದಳ ಹೇಳಿದೆ.
ಇನ್ನೊಂದು ಮಿತ್ರ ಪಕ್ಷ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಮಹಾರಾಜ ಸುಹೇಲ್ ದೇವ್ ಅವರ ಚಿತ್ರವಿರುವ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮದಿಂದ ದೂರ ಉಳಿದಿದೆ.
ರಾಜ್ಯದ ಸಚಿವರಾಗಿರುವ ಓಂ ಪ್ರಕಾಶ್ ರಾಜ್‌ಭರ್ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಉದ್ದೇಶ ಪೂರ್ವಕವಾಗಿ ಕೈಬಿಡಲಾಗಿದೆ ಎಂದು ಎಸ್‌ಬಿಎಸ್‌ಪಿ ಹೇಳಿದೆ.
ಅಪ್ನಾದಳ ಇಬ್ಬರು ಸಂಸದರನ್ನು ಮತ್ತು 403 ಸದಸ್ಯ ಬಲದ ವಿಧಾನಸಭೆಯಲ್ಲಿ 9 ಶಾಸಕರನ್ನು ಹೊಂದಿದೆ. ಎಸ್‌ಬಿಎಸ್‌ಪಿ ನಾಲ್ವರು ಶಾಸಕರನ್ನು ಹೊಂದಿದೆ.