Advertisement
ಈ ಮೈತ್ರಿಯಿಂದ ಹೆಚ್ಚೇನೂ ಲಾಭವಾಗುವುದಿಲ್ಲ ಎಂಬ ಅನಿಸಿಕೆ ಕೆಲವರಲ್ಲಿದ್ದರೆ, ಲಾಭ ಮಾಡಿಕೊಳ್ಳುವುದು ನಮಗೆ ಬಿಟ್ಟ ವಿಚಾರ ಎಂಬ ಉಮೇದಿನಲ್ಲಿ ಮತ್ತಷ್ಟು ನಾಯಕರಿದ್ದಾರೆ. ಒಟ್ಟಾರೆ “ಮೈತ್ರಿ’ಯ ಲಾಭ-ನಷ್ಟದ ಲೆಕ್ಕಾಚಾರಗಳು ಶುರುವಾಗಿದ್ದು, ಇದಕ್ಕಾಗಿ ಮೇಲ್ಮಟ್ಟದ ನಾಯಕರು ಯಾವ ರೀತಿಯ ತೀರ್ಮಾನ ಮಾಡುತ್ತಾರೆ ಎಂಬುದನ್ನು ಕೆಳಮಟ್ಟದ ನಾಯಕರು, ಕಾರ್ಯಕರ್ತರು ಕಾದು ನೋಡುವಂತಾಗಿದೆ. ಏನೂ ಅರಿಯದವರಂತೆ ಎಲ್ಲಕ್ಕೂ ವರಿಷ್ಠರತ್ತ ಬೆರಳು ಮಾಡಿ ಸುಮ್ಮನಾಗುವುದು ಕ್ಷೇಮ ಎನ್ನುವುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ.ಕಳೆದ ವಿಧಾನಸಭೆ ಚುನಾವಣೆ ವೇಳೆ ಹಳೇ ಮೈಸೂರು ಭಾಗದಲ್ಲಿ ಪಕ್ಷದ ಬೇರು ಗಟ್ಟಿಗೊಳಿಸುವಂತೆ ಬಿಜೆಪಿ ವರಿಷ್ಠರೇ ಸೂಚಿಸಿದ್ದರು. ಇದರಿಂದಾಗಿ ಜೆಡಿಎಸ್ ಹೀನಾಯ ಸೋಲು ಕಂಡಿತ್ತು. ಕಾಂಗ್ರೆಸ್‌ಗೆ ಹೆಚ್ಚು ಲಾಭ ಆಗಿತ್ತು. ಇದಕ್ಕೀಗ ಪಶ್ಚಾತ್ತಾಪಪಟ್ಟುಕೊಂಡಿರುವ ಉಭಯ ಪಕ್ಷಗಳೂ ಪರಸ್ಪರ ಕೈ ಹಿಡಿದು ಮೇಲೇಳುವ ಪ್ರಯತ್ನಕ್ಕೆ ಕೈಹಾಕಿವೆ.
ಮಂಡ್ಯದಲ್ಲಿ ಸ್ವತಂತ್ರವಾಗಿ ಗೆದ್ದರೂ ಬಿಜೆಪಿಗೆ ಬೆಂಬಲ ಸೂಚಿಸಿದ್ದ ಸುಮಲತಾರ ಸ್ಥಾನ ಏನಾಗಲಿದೆ? ಹಾಸನವನ್ನು ಜೆಡಿಎಸ್‌ಗೆ ಬಿಟ್ಟು ಕೊಟ್ಟರೆ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸುತ್ತಾರೋ? ಮತ್ತೆ ಪ್ರಜ್ವಲ್ ರೇವಣ್ಣ ಕಣಕ್ಕಿಳಿಯುತ್ತಾರೋ? ಹೊಸ ಮುಖಕ್ಕೆ ಮಣೆ ಹಾಕುತ್ತಾರೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ತುಮಕೂರಿನಲ್ಲಿ ಬಸವರಾಜು ಸ್ಪರ್ಧಿಸುವುದಿಲ್ಲ ಎಂದಿರುವುದರಿಂದ ಮಾಜಿ ಸಚಿವ ವಿ.ಸೋಮಣ್ಣ ಆಕಾಂಕ್ಷಿಯಾಗಿದ್ದಾರೆ. ಹಳೆಯ ವರಸೆಯಂತೆ ದೇವೇಗೌಡರೇ ಸ್ಪರ್ಧಿಸಿದರೆ ಸೋಮಣ್ಣರ ಆಸೆಗೆ ಮತ್ತೆ ತಣ್ಣೀರು ಬೀಳುವ ಸಂಭವವಿದೆ. ಕೋಲಾರದಲ್ಲಿ ಬಿಜೆಪಿ ಸಂಸದ ಮುನಿಸ್ವಾಮಿಗೆ ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಹೀಗಾಗಿ ಬಚ್ಚೇಗೌಡರು ಪ್ರತಿನಿಧಿಸುತ್ತಿದ್ದ ಚಿಕ್ಕಬಳ್ಳಾಪುರಕ್ಕೆ ಮುನಿಸ್ವಾಮಿ ಸ್ಥಳಾಂತರಗೊಳ್ಳುವರೇ? ಚಾಮರಾಜನಗರದಿಂದ ಶ್ರೀನಿವಾಸಪ್ರಸಾದ್ ಬಿಟ್ಟರೆ ಬೇರಾರು ಸ್ಪರ್ಧಿಸುತ್ತಾರೆ ಎಂಬುದೂ ಅಸ್ಪಷ್ಟ. ಹೀಗೆ ಅನೇಕ ಕಡೆಗಳಲ್ಲಿ ಹಾಲಿ ಸಂಸದರು ಕ್ಷೇತ್ರ ಬಿಟ್ಟುಕೊಡಬೇಕಾಗಿ ಬಂದರೆ ತ್ಯಾಗ ಮಾಡುವರೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಗೊಂದಲದಲ್ಲಿ ಯಡಿಯೂರಪ್ಪ
ಈ ಮಧ್ಯೆ ದಿಲ್ಲಿ ತಲುಪಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮೈತ್ರಿ ಕುರಿತು ಯಾವುದೇ ಸ್ಪಷ್ಟ ಚಿತ್ರಣವಿಲ್ಲವೆಂದು ಹೇಳುವ ಮೂಲಕ ಅವರ ಹೇಳಿಕೆ ಸಾಕಷ್ಟು ಗೊಂದಲ ಮೂಡಿಸಿದೆ. ಇದಕ್ಕೂ ಮುನ್ನ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮೈತ್ರಿ ಸಾಧ್ಯತೆ ಹೆಚ್ಚಿದೆ ಎಂದು ಹೇಳಿಕೆ ನೀಡಿದ್ದರು. ಇಂದಿನ ಹೇಳಿಕೆ ಅಚ್ಚರಿ ಹಾಗೂ ಗೊಂದಲ ಸೃಷ್ಟಿಸಿದೆ.
Related Articles
ಭಿನ್ನ ಮನಸ್ಕರಾಗಿರುವ ಒಕ್ಕಲಿಗ ಹಾಗೂ ವೀರಶೈವ-ಲಿಂಗಾಯತರ ಉಪಪಂಗಡಗಳ ಮತಗಳು ಈ ಮೈತ್ರಿಯಿಂದ ಒಗ್ಗೂಡಬಹುದು ಎಂಬ ರಾಜಕೀಯ ಸೂತ್ರವನ್ನು ಬಿಜೆಪಿ ಹೆಣೆದಿದೆ. ಈ ಭಾಗದ ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ತನ್ನ ತೆಕ್ಕೆಗೆ ತೆಗೆದುಕೊಂಡರೆ ಸ್ಥಳೀಯವಾಗಿ ಬಿಜೆಪಿಯ ಹಿಡಿತ ಗಟ್ಟಿಯಾಗಲಿದೆ. ಮುಂದಿನ ಚುನಾವಣೆಗಳಲ್ಲಿ ಇದು ಪಕ್ಷಕ್ಕೆ ಲಾಭವಾಗಲಿದೆ ಎಂಬುದೂ ರಹಸ್ಯವೂ ಮೈತ್ರಿಯ ಹಿಂದೆ ಅಡಗಿದೆ.
Advertisement