ಲಕ್ನೋ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಮೈತ್ರಿ ಇರುತ್ತದೆ ಮತ್ತು ಎಲ್ಲವನ್ನೂ ಶೀಘ್ರದಲ್ಲೇ ಅಂತಿಮ ಮಾಡಲಾಗುವುದು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಬುಧವಾರ ಹೇಳಿಕೆ ಕೊಟ್ಟಿದ್ದಾರೆ.
ಕಾಂಗ್ರೆಸ್ ನ ರಾಜಕೀಯ ಬಲ ಇರುವ, ಗಾಂಧಿ ಕುಟುಂಬದ ಕ್ಷೇತ್ರಗಳು ಎಂದು ಪರಿಗಣಿಸಲ್ಪಟ್ಟಿರುವ ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಗೈರುಹಾಜರಾಗಿರುವ ಬಗ್ಗೆ ಕೇಳಿದಾಗ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು, “ಎಲ್ಲವೂ ಚೆನ್ನಾಗಿದೆ, ಚೆನ್ನಾಗಿಯೇ ಕೊನೆಗೊಳ್ಳುತ್ತದೆ, ಯಾವುದೇ ವಿವಾದವಿಲ್ಲ’ ಎಂದಿದ್ದಾರೆ.
ಇಂಡಿಯಾ ಮೈತ್ರಿಕೂಟದಿಂದ ಒಂದೊಂದೇ ಪಕ್ಷಗಳು ಹೊರ ಹೋದ ಬಳಿಕ ಹಲವು ದಿನಗಳಿಂದ ಅಖಿಲೇಶ್ ಯಾದವ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಕಾಂಗ್ರೆಸ್ ನಡುವಿನ ಮೈತ್ರಿ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿ ಮೈತ್ರಿ ಮಾಡಿಕೊಂಡೆ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜಕೀಯವಾಗಿ ನಿರ್ಣಾಯಕವಾಗಿರುವ ಉತ್ತರಪ್ರದೇಶದಲ್ಲಿ ಬಿಜೆಪಿಯೊಂದಿಗೆ ಸೆಣಸುವುದು ಸವಾಲಿನ ಪ್ರಶ್ನೆಯಾದ ಕಾರಣ ಮೈತ್ರಿ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್ 17-19 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದ್ದು ಎಸ್ ಪಿ ಯಾವ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಸೀಟು ಹಂಚಿಕೆ ವಿಚಾರ ಕೊನೆಗೊಂಡ ಬಳಿಕವೇ ರಾಹುಲ್ ಗಾಂಧಿ ಅವರ ಯಾತ್ರೆಯಲ್ಲಿ ಭಾಗಿಯಾಗುವುದಾಗಿ ಅಖಿಲೇಶ್ ಹೇಳಿಕೆ ನೀಡಿದ್ದರು.
ಪ್ರಿಯಾಂಕಾ ಗಾಂಧಿ ಮಧ್ಯಪ್ರವೇಶಿಸಿ ಅಖಿಲೇಶ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಉಭಯ ಪಕ್ಷಗಳ ನಡುವಿನ ಬಿಕ್ಕಟ್ಟು ಕೊನೆಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಿಯಾಂಕಾ ಅವರು ತಾಯಿ ಸೋನಿಯಾ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ರಾಯ್ ಬರೇಲಿಯಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ.