ಬೆಂಗಳೂರು: “ಸರ್ಕಾರ ರಚನೆ ಸಂಬಂಧ ಜೆಡಿಎಸ್ ಪಕ್ಷ, ಕಾಂಗ್ರೆಸ್ ಜತೆ ಮಾಡಿಕೊಂಡಿರುವ ಮೈತ್ರಿ ವಿಧಾನಸೌಧಕ್ಕಷ್ಟೇ ಸೀಮಿತ. ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಮೈತ್ರಿ ಸರ್ಕಾರಕ್ಕೆ ಧಕ್ಕೆಯುಂಟು ಮಾಡಲು ನಾನಿಲ್ಲಿಗೆ ಬಂದಿಲ್ಲ. ಆದರೆ, ಕ್ಷೇತ್ರದಲ್ಲಿ ಜೆಡಿಎಸ್ ಉಳಿಸುವುದು ನನ್ನ ಜವಾಬ್ದಾರಿ,’ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.
ಇದು ಧರ್ಮ ಹಾಗೂ ಅಧರ್ಮದ ನಡುವಿನ ಹೋರಾಟ. ಚುನಾವಣೆ ಮುಂದಕ್ಕೆ ಹೋಗಲು ಯಾರು ಕಾರಣ ಎಂಬುದು ಎಲ್ಲರಿಗೂ ತಿಳಿದಿದೆ. 1600 ಕಡತಗಳನ್ನು ಮನೆಯಲ್ಲಿಟ್ಟುಕೊಂಡಿದ್ದಕ್ಕೆ ಕಾಂಗ್ರೆಸ್ ಸರ್ಕಾರವೇ ಮುನಿರತ್ನ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಕ್ಷೇತ್ರದಲ್ಲಿ ಪಾಲಿಕೆ ಸದಸ್ಯೆಯರ ಮೇಲೆ ಶಾಸಕರು ದೌರ್ಜನ್ಯ ನಡೆಸುತ್ತಿದ್ದು, ಯಾವುದೇ ಕಳಂಕವಿಲ್ಲದ ರಾಮಚಂದ್ರ ಅವರಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
“ಜಾಲಹಳ್ಳಿ ಗ್ರಾಮದಲ್ಲಿ ಪ್ರಚಾರದ ವೇಳೆ ಮಾತನಾಡಿದ ದೇವೆಗೌಡರು, ಗುರುವಾರ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಅಪ್ಪ-ಮಗನನ್ನು ಮುಗಿಸಲು ಬಂದಿದ್ದೇನೆ ಎಂದಿದ್ದಾರೆ. ನಾನಿನ್ನೂ ಬದುಕಿದ್ದೇನೆ. ಹೋರಾಡುವ ಶಕ್ತಿ ನನ್ನಲ್ಲಿನ್ನೂ ಇದೆ. ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಜನರ ಆಶೀರ್ವಾದದಿಂದಲೇ 37 ಸ್ಥಾನ ಪಡೆದಿದ್ದೇವೆ,’ ಎಂದು ಬಿಎಸ್‌ವೈಗೆ ತಿರುಗೇಟು ನೀಡಿದರು.
“ನಮ್ಮ ಕುಟುಂಬದಿಂದ ಯಾವ ಸರ್ಕಾರಿ ಜಮೀನೂ ಕಬಳಿಕೆಯಾಗಿಲ್ಲ. ರಾಮಚಂದ್ರ ಅವರು ಬಿಜೆಪಿಯನ್ನು ತೊರೆದು ಜೆಡಿಎಸ್ ಸೇರಿದ್ದು, ಅವರ ವಿರುದ್ಧ ಯಾವುದೇ ಕಳಂಕವಿಲ್ಲ. ಬಿಜೆಪಿ ಅಭ್ಯರ್ಥಿ ವಿರುದ್ಧ ಎಷ್ಟು ಪ್ರಕರಣಗಳಿವೆ ಎಂಬುದನ್ನು ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲೇ ವಿವರವಾಗಿ ತಿಳಿಸಿದ್ದಾರೆ. ಹೀಗಾಗಿ ಮತ ನೀಡುವ ಮೊದಲು ವ್ಯಕ್ತಿಯ ಚಾರಿತ್ರ್ಯ ಗಮನಿಸಿ,’ ಎಂದು ಹೇಳಿದರು.
ಮಗ ತಪ್ಪು ಮಾಡಿದರೂ ಹೋರಾಡುವೆ: ನಾನು ಸದಾ ಬಡವರ ಪರವಾಗಿದ್ದು, ದೇವರ ಕೃಪೆಯಿಂದ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಒಂದೊಮ್ಮೆ ನನ್ನ ಮಗ ತಪ್ಪು ಮಾಡಿದರೂ ನಾನು ಹೋರಾಟ ಮಾಡುತ್ತೇನೆ. ಬಡವರಿಗೆ ದ್ರೋಹ ಮಾಡುವುದಾದರೆ, ಬಡವರ ಮನೆ ಒಡೆಯುವುದಾದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಾ ಎಂದು ಹೇಳುತ್ತೇನೆ. ಬಡವರು ಬೀದಿಯಲ್ಲಿ ಕುಳಿತು ಕಣ್ಣೀರು ಹಾಕುವುದನ್ನು ನೋಡಲು ಸಾಧ್ಯವಿಲ್ಲ ಎಂದು ದೇವೆಗೌಡರು ಹೇಳಿದರು.