ಮುಂಬೈ: ಇಂಜಿನ್‌ನ ಕವರ್ ಇಲ್ಲದೆಯೇ ವಿಮಾನ ಹಾರಿರುವ ಘಟನೆ ಬುಧವಾರ ಮಹಾರಾಷ್ಟ್ರದಲ್ಲಿ ನಡೆದಿದೆ.
70 ಪ್ರಯಾಣಿಕರನ್ನು ಹೊತ್ತಿದ್ದ ದಿ ಅಲೈಯನ್ಸ್ ಏರ್ ವಿಮಾನ ಮುಂಬೈನಿಂದ ಗುಜರಾತ್‌ನ ಭುಜ್‌ಗೆ ಸುರಕ್ಷಿತವಾಗಿ ಪ್ರಯಾಣ ನಡೆಸಿದೆ.
4 ವರ್ಷಗಳ ಹಳೆಯ ಎಟಿಆರ್72-600 ವಿಮಾನ ಬೆಳಗ್ಗೆ 6.30ರ ಸಮಯಕ್ಕೆ ರನ್‌ವೇ ತಲುಪುವಾಗ ಅದರಲ್ಲಿ ಇಂಜಿನ್ ಕವರ್ ಇತ್ತು. ಆದರೆ ರನ್‌ವೇನಲ್ಲಿ ಸಂಚರಿಸುವಾಗಲೇ ಅದು ಕಳಚಿಬಿದ್ದಿದೆ. ಈ ಬಗ್ಗೆ ಮುಂಬೈನ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ವಿಮಾನ ಪೈಲೆಟ್‌ಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ವಿಮಾನ ನಿಯಂತ್ರಕರು ನಿಯಂತ್ರಣದ ವೇಳೆ ಇಂಜಿನ್ ಕವರ್‌ನ್ನು ತೆಗೆದಿರುತ್ತಾರೆ. ಹಾಗೆ ಮಾಡಿದ ನಂತರ ಅದನ್ನು ವಾಪಸು ಹಾಕುವಲ್ಲಿ ವಿಫಲವಾಗಿರಬಹುದು. ಅದನ್ನು ಗಮನಿಸದೆ ಪೈಲೆಟ್ ವಿಮಾನ ಹಾರಾಟ ಆರಂಭಿಸಿರಬಹುದು ಎಂದು ನಾಗರಿಕ ವಿಮಾನ ಮಹಾನಿರ್ದೇಶಕರಾಗಿರುವ ಅನಿಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಸಿಗದ ತುರ್ತು ಆರೋಗ್ಯ ವಾಹನ ; ಉಸಿರಾಟದ ಸಮಸ್ಯೆಯಿಂದ 45 ದಿನದ ಮಗು ಸಾವು
ತನಿಖೆಗೆ ಆದೇಶ:
ಈ ರೀತಿ ಇಂಜಿನ್ ಭಾಗ ಗಾಳಿಗೆ ಪ್ರದರ್ಶನಗೊಳ್ಳುವುದರಿಂದ ಇಂಜಿನ್ ಭಾಗಗಳಿಗೆ ತಾಂತ್ರಿಕ ಸಮಸ್ಯೆ ಉಂಟಾಗಬಹುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ(ಡಿಜಿಸಿಎ) ಮೂಲಗಳು ತಿಳಿಸಿದೆ. ಹಾಗೂ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಕ್ಕೂ ಡಿಜಿಸಿಎ ಆದೇಶಿಸಿದೆ.