Advertisement

ಎಚ್‌ಡಿಕೆ ವಿರುದ್ಧ ಸರಕಾರಿ ಜಮೀನು ಒತ್ತುವರಿ ಆರೋಪ

08:20 PM Mar 16, 2023 | Team Udayavani |

ಬೆಂಗಳೂರು: ಸರಕಾರಿ ಆಸ್ತಿಗಳನ್ನು ರಕ್ಷಿಸಲು ರಾಜ್ಯ ಸರಕಾರಕ್ಕೆ ಕಾಳಜಿ ಮತ್ತು ನಿಜವಾಗಿಯೂ ಆಸಕ್ತಿ ಇದೆಯೇ? ಇದ್ದರೆ ಅದಕ್ಕೆ ಯಾವ ಹೆಜ್ಜೆಗಳನ್ನು ಇಡುತ್ತೀರಿ ಎಂಬ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್‌ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

Advertisement

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ ಶಾಸಕ ಎಚ್‌.ಡಿ. ಕುಮಾರಸ್ವಾಮಿ, ಅವರ ಸಂಬಂಧಿ ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಮತ್ತಿತರರು ಸರಕಾರಿ ಜಮೀನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾ| ಬಿ. ವೀರಪ್ಪ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಪೀಠ ಲೋಕಾಯುಕ್ತ ಆದೇಶ ನೀಡಿ 9 ವರ್ಷಗಳಾದರೂ ಒತ್ತುವರಿ ಜಮೀನು ವಶಪಡಿಸಿಕೊಳ್ಳಲು ಯಾಕೆ ಮುಂದಾಗಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ. ನಾವದಗಿ, ಸರಕಾರದ ಒಂದಿಂಚು ಭೂಮಿಯೂ ಒತ್ತುವರಿಯಾಗಲು ಬಿಡುವುದಿಲ್ಲ. ಈ ಪ್ರಕರಣದಲ್ಲಿ ಸರಕಾರದ ಉನ್ನತ ಅಧಿಕಾರಿಗಳು ನ್ಯಾಯಾಲಯದ ಅದೇಶ ಪಾಲಿಸಲು ಕಟಿಬದ್ಧರಾಗಿದ್ದಾರೆ ಎಂದು ಭರವಸೆ ನೀಡಿದರು.

ಅದಕ್ಕೆ, ಸರಕಾರಿ ಆಸ್ತಿಗಳ ರಕ್ಷಿಸಲು ರಾಜ್ಯ ಸರಕಾರಕ್ಕೆ ಕಾಳಜಿ ಮತ್ತು ನಿಜವಾಗಿಯೂ ಆಸಕ್ತಿ ಇದೆಯೇ? ಇದ್ದರೆ ಅದಕ್ಕೆ ಯಾವ ಹೆಜ್ಜೆಗಳನ್ನಿಡುತ್ತೀರಿ ಎಂಬ ಬಗ್ಗೆ ತಿಳಿಯಲು ನ್ಯಾಯಾಲಯ ಕಾತರದಿಂದಿದೆ. ಹಾಗಾಗಿ ಹೈಕೋರ್ಟ್‌ ಆದೇಶ ಜಾರಿಗೆ ಸಂಬಂಧಿಸಿ ನೀವು ಏನು ಹೆಜ್ಜೆ ಇಡುತ್ತೀರಿ ಎಂಬ ಬಗ್ಗೆ ವಸ್ತುಸ್ಥಿತಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಚಾರಣೆಯನ್ನು ಮುಂದೂಡಿತು.
ದೂರುದಾರರ ಪರ ಹಿರಿಯ ವಕೀಲ ಎಸ್‌. ಬಸವರಾಜ್‌ ವಾದ ಮಂಡಿಸಿದರು. ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್‌.ಆರ್‌. ಹಿರೇಮಠ ಅವರೂ ಹಾಜರಿದ್ದರು.

Advertisement

ಪ್ರಕರಣವೇನು?
ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿ ಕೇತಗಾನಹಳ್ಳಿಯ ವಿವಿಧ ಸರ್ವೇ ನಂಬರ್‌ಗಳಲ್ಲಿ 14 ಎಕರೆಗೂ ಹೆಚ್ಚು ಸರಕಾರಿ ಜಮೀನನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಜಿ ಸಂಸದ ದಿ.ಜಿ. ಮಾದೇಗೌಡ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರಿನ ಬಗ್ಗೆ ತನಿಖೆ ನಡೆಸಬೇಕು ಎಂದು ಲೋಕಾಯುಕ್ತರು ಕಂದಾಯ ಇಲಾಖೆಗೆ 2014ರಲ್ಲಿ ಆದೇಶಿಸಿದ್ದರು. ಈ ಆದೇಶವನ್ನು ಹೈಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಆದರೆ ಈ ಆದೇಶ ಇನ್ನೂ ಪಾಲನೆಯಾಗಿಲ್ಲ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ.

ಸಿಎಸ್‌ಗೆ ಮುಕ್ತ ಅವಕಾಶ ಕೊಡಿ
ರಾಜ್ಯ ಸರಕಾರದದ ಮುಖ್ಯ ಕಾರ್ಯದರ್ಶಿ ಪ್ರಾಮಾಣಿಕ ಮಹಿಳಾ ಅಧಿಕಾರಿಯಾಗಿದ್ದಾರೆ. ಅಂತಹವರು ಮುಕ್ತವಾಗಿ ತಮ್ಮ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು ಎಂದು ಸರಕಾರಕ್ಕೆ ಹೈಕೋರ್ಟ್‌ ಕಿವಿಮಾತು ಹೇಳಿತು. ನ್ಯಾಯಾಲಯದ ಆದೇಶದಂತೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಗುರುವಾರ ಖುದ್ದು ವಿಚಾರಣೆಗೆ ಹಾಜರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next