ಅಹಮ್ಮದಾಬಾದ್: ಕಳೆದ ಒಂದು ವರ್ಷದಿಂದ ಕೊಲೆ, ಸುಲಿಗೆ ಸೇರಿದಂತೆ ನಟೋರಿಯಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಕುಖ್ಯಾತ ಕ್ರಿಮಿನಲ್ ವೊಬ್ಬನನ್ನು ಗುಜರಾತ್ ನ ಭಯೋತ್ಪಾದನ ನಿಗ್ರಹ ದಳ ದಟ್ಟ ಅರಣ್ಯದೊಳಗೆ ಕಾರ್ಯಾಚರಣೆ ನಡೆಸುವ ಮೂಲಕ ಸೆರೆ ಹಿಡಿದಿದೆ. ಅದರಲ್ಲೂ ವಿಶೇಷವಾಗಿದ್ದೇನೆಂದರೆ ಹೀಗೆ ದಟ್ಟ ಕಾಡೊಳಗೆ ಕಾರ್ಯಾಚರಣೆ ನಡೆಸಿದ್ದು ನಾಲ್ವರು ದಿಟ್ಟ ಮಹಿಳಾ ಪೊಲೀಸರು!
ಕುಖ್ಯಾತ ಡಾನ್ ಜುಸಬ್ ಅಲ್ಲಾರಖ್ ಸಾಂಡ್ (40ವರ್ಷ)ಎಂಬಾತನನ್ನು ಎಕೆ 47 ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರ ಬಳಸಿ ಎಟಿಎಸ್ ನ ನಾಲ್ವರು ಸಿಬ್ಬಂದಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜುನಾಗಢ್ ಮೂಲದ ಜುಸಬ್ ಮೇಲೆ ಕೊಲೆ, ಸುಲಿಗೆ, ಪೊಲೀಸರ ಮೇಲೆ ಗುಂಡಿನ ದಾಳಿ ಸೇರಿದಂತೆ 23 ಗಂಭೀರ ಪ್ರಕರಣಗಳು ದಾಖಲಾಗಿದ್ದವು.
ಭಾನುವಾರ ನಸುಕಿನ ವೇಳೆ ದೇವ್ ಧಾರಿ ಸಮೀಪದ ಬೋಟಾಡ್ ಅರಣ್ಯದೊಳಗೆ ನಾಲ್ವರು ಮಹಿಳಾ ಸಿಂಗಂಗಳು ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಕುಖ್ಯಾತ ಡಾನ್ ನನ್ನು ಸಿಐಡಿ ಕ್ರೈಂ ಬ್ರ್ಯಾಂಚ್ ಗೆ ಒಪ್ಪಿಸಿದ್ದು, ತನಿಖೆ ಮುಂದುವರಿದಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಯಾರು ಆ ಮಹಿಳಾ ಸಿಂಗಂಗಳು…
ಈ ಕಾರ್ಯಾಚರಣೆಯಲ್ಲಿ ಎಟಿಎಸ್ ನ ಐವರು ಅಧಿಕಾರಿಗಳು ಪಾಲ್ಗೊಂಡಿದ್ದರು. ಇದರಲ್ಲಿ ನಾಲ್ವರು ಮಹಿಳೆಯರು. ಸ್ಯಾನ್ ಟೋಕ್ ಓಡೇಡ್ರಾ, ನಿಟ್ಮಿಕಾ ಗೋಹಿಲ್, ಅರೌನಾ ಗಾಮೆಠಿ ಮತ್ತು ಸಿಮ್ಮಿ ಮಾಲ್ ಸೇರಿದಂತೆ ನಾಲ್ವರು ಮಹಿಳಾ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
2012ರಲ್ಲಿ ನಿವೇಶನ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ದೇವಾಲಯದ ಪುರೋಹಿತರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ಜುಸಬ್ ನನ್ನು ಜುನಾಗಢ್ ಪೊಲೀಸರು ಬಂಧಿಸಿದ್ದರು. 2016ರಲ್ಲಿ ಪೆರೋಲ್ ಮೇಲೆ ಹೊರಬಂದಿದ್ದ ಜುಸಬ್ ಮತ್ತೆ ಕೊಲೆ, ಸುಲಿಗೆ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.