ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಉದ್ದೇಶದಿಂದ ನಗರದ ಕೆಲವೇ ಠಾಣೆಗಳಿಗೆ ಮಾತ್ರ ಪಿಂಕ್ ಹೊಯ್ಸಳ ವಾಹನಗಳನ್ನು ನೀಡಿದ್ದು, ಸದ್ಯದಲ್ಲೇ ನಗರದ ಎಲ್ಲ ಪೊಲೀಸ್ ಠಾಣೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಹಿರಿಯ ಪೊಲೀಸ್ ಅ ಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರದಲ್ಲಿ 110 ಪೊಲೀಸ್ ಠಾಣೆಗಳಿವೆ.
ಈಗಾಗಲೇ ಪೊಲೀಸ್ ಇಲಾಖೆ ವಿವಿಧ ಠಾಣೆಗಳಿಗೆ 51 ಪಿಂಕ್ ಹೊಯ್ಸಳ ವಾಹನಗಳನ್ನು ನೀಡಿದೆ. ಇದರ ಮುಖ್ಯ ಉದ್ದೇಶ ಮಹಿಳೆಯರನ್ನು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಯದಂತೆ ತಡೆಯುವುದಾಗಿದೆ. ಆದಷ್ಟು ಬೇಗ ನಗರದ ಎಲ್ಲ ಪೊಲೀಸ್ ಠಾಣೆಗಳಿಗೂ ಪಿಂಕ್ ಹೊಯ್ಸಳ ವಾಹನವನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅನ್ನೋ ಭಯವಾ?
“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಏಕೆ ಹಿಂಜರಿಯುತ್ತಿದ್ದೀರಿ? ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ಬರುತ್ತದೆ ಎಂಬ ಭಯವಾ? ಅಂತಹ ಯಾವುದೇ ಭಯ ಬೇಡ. ಮುಂದಿನ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ.
ಯಾವ ಪಕ್ಷ ಅಧಿಕಾರಕ್ಕೆ ಬಂದರೇನು, ಮೊದಲು ಕಾನೂನು ಸುವ್ಯವಸ್ಥೆ ಕಾಪಾಡುವುದನ್ನು ಕಲಿತುಕೊಳ್ಳಿ. ನಿಮಗೆ ಸೌಲಭ್ಯ ಕೊಡುವುದು ಸರ್ಕಾರವೇ ಹೊರತು ಪಕ್ಷದ ಮುಖಂಡರಲ್ಲ. ಜನಸ್ನೇಹಿ ಪೊಲೀಸರಂತೆ ನಡೆದುಕೊಳ್ಳಿ,’ ಎಂದು ಪೊಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.