ಬೆಂಗಳೂರು: ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕದ ಎಲ್ಲ 259 ಕೈಲಾಸ ಮಾನಸ ಸರೋವರ ಯಾತ್ರಿಗಳೂ ಸುರಕ್ಷಿತ ಸ್ಥಳದಲ್ಲಿದ್ದು, ಬುಧವಾರ ತಮ್ಮ ಊರುಗಳಿಗೆ ಹಿಂತಿರುಗುವ ಸಿದ್ಧತೆಯಲ್ಲಿದ್ದಾರೆ. ಯಾತ್ರಿಕರೆಲ್ಲರೂ ವಿವಿಧ ತಂಡಗಳಲ್ಲಿ ದೆಹಲಿ, ಕಠ್ಮಂಡು, ಸಿಮಿಕೋಟ್ ಮತ್ತಿತರ ಕಡೆಗಳಲ್ಲಿ ಸುರಕ್ಷಿತವಾಗಿದ್ದಾರೆ. ವಿಮಾನ, ರೈಲುಗಳ ಮೂಲಕ ಬಂದು ತಲುಪಲಿದ್ದಾರೆ. ಈ ಪೈಕಿ ಜಿಗಣಿಯಿಂದ ತೆರಳಿದ್ದ 35 ಜನರ ತಂಡ ಬುಧವಾರ ರಾತ್ರಿಯೇ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
“ಸ್ವಲ್ಪದರಲ್ಲೇ ಬಚಾವ್’: ಬೆಂಗಳೂರಿಗೆ ಬಂದಿಳಿದ ಆ ತಂಡದ ನಾಗೇಶ್ “ಉದಯವಾಣಿ’ಯೊಂದಿಗೆ ಮಾತನಾಡಿ, “15 ದಿನಗಳ ಹಿಂದೆಯೇ ನಾವು ಜಿಗಣಿಯಿಂದ ವೈಷ್ಣವಿದೇವಿ ದರ್ಶನಕ್ಕೆ ತೆರಳಿದ್ದೆವು. ಅಮರನಾಥ ಯಾತ್ರೆಗೆ ತೆರಳುವ ಪ್ಲಾನ್ ಇತ್ತು. ಆದರೆ, ಅಲ್ಲಿ ಸಾಕಷ್ಟು ಮಳೆಯಾಗುತ್ತಿದೆ ಎಂಬ
ಮಾಹಿತಿ ಬಂತು. ಹಾಗಾಗಿ, ಆ ಪ್ರವಾಸ ಮೊಟಕುಗೊಳಿಸಿ, ಅಮೃತಸರದಿಂದ ವಿಮಾನದಲ್ಲಿ ಬಂದಿಳಿದೆವು’ ಎಂದು ಹೇಳಿದರು.
“ನನ್ನ ಅಣ್ಣ ಸೋಮಪ್ರಸಾದ್ ಮತ್ತು ಅತ್ತಿಗೆ ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿದ್ದರು. ಈಗ ಅವರು ಸಿಮಿಕೋಟ್‌ನಲ್ಲಿ ಸುರಕ್ಷಿತವಾಗಿದ್ದಾರೆ. ದೂರವಾಣಿ ಮೂಲಕ ಮಾತನಾಡಿದೆ. ಗುರುವಾರ ಬೆಂಗಳೂರಿಗೆ ಹಿಂತಿರುಗಲಿದ್ದಾರೆ’ ಎಂದು ಪ್ರಭು ಪ್ರಸಾದ್ ನಿಟ್ಟುಸಿರುಬಿಟ್ಟರು.
ಯಾರ್ಯಾರು ಎಲ್ಲೆಲ್ಲಿದ್ದಾರೆ?: “ಸಂಕಷ್ಟದಲ್ಲಿ ಸಿಲುಕಿರುವ ಬಹುತೇಕ ಎಲ್ಲರನ್ನೂ ಬುಧವಾರ ಸಂಪರ್ಕಿಸಿದ್ದೇವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಇನ್ನು ಕೆಲವರು ಮಾನಸ ಸರೋವರ ಯಾತ್ರೆಯಿಂದ ವೈಷ್ಣವಿದೇವಿ ದರ್ಶನ ಪ್ರವಾಸಕ್ಕೆ ತೆರಳಿದ್ದಾರೆ. ಸಂಧ್ಯಾ ಅವರ ನೇತೃತ್ವದಲ್ಲಿ ನೂರು ಜನರ ಒಂದು ತಂಡವು ಸಿಮಿಕೋಟ್‌ನ ಸುರಕ್ಷಿತ ಜಾಗದಲ್ಲಿದೆ. ಬೆಂಗಳೂರಿನ ಜೆ.ಪಿ. ನಗರದ ಅಣ್ಣಪ್ಪ ಸೇರಿದಂತೆ 80 ಜನರ ತಂಡ ವೈಷ್ಣವಿದೇವಿ ದರ್ಶನಕ್ಕೆ ಪ್ರಯಾಣ ಬೆಳೆಸಿದ್ದಾರೆ.
ರಾಮನಗರದ ರೇವಮ್ಮ ಮತ್ತು ಸಿದ್ದರೇವಯ್ಯ ದೆಹಲಿಯಲ್ಲಿದ್ದಾರೆ. ನಗರದ ವಿನಾಯಕ ಭಟ್ ನೇತೃತ್ವದ 7 ಜನರ ತಂಡ ಕಠ್ಮಂಡು ವಿನಲ್ಲಿದೆ. ಮೈಸೂರಿನ ಛಾಯಾ ದೇವಿ ಸೇರಿ 15 ಜನರ ತಂಡ ನೇಪಾಳ ದಾಟಿ ಪ್ರವಾಸಕ್ಕೆ ತೆರಳಿದ್ದಾರೆ’ ಎಂದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಿದರು.
ಹವಾಮಾನ ವೈಪರಿತ್ಯ ದಿಂದ ನೇಪಾಳದ ಸಿಮಿಕೋಟ್‌ನಲ್ಲಿ ಭಾರಿ ಮಳೆಯಿಂದ ಕರ್ನಾಟಕ ಮೂಲದ 259 ಯಾತ್ರಿಗಳು ಸಂಕಷ್ಟಕ್ಕೆ ಸಿಲುಕಿದ್ದರು. ಯುದ್ಧವಿಮಾನಗಳ ಮೂಲಕ ಅವರೆಲ್ಲರನ್ನೂ ಸುರಕ್ಷಿತ ಸ್ಥಳಗಳಿಗೆ ಕರೆತರಲಾಯಿತು.