Advertisement

ಅಂಬಲತ್ತರದಲ್ಲಿ ಪತ್ತೆಯಾದ ನೋಟುಗಳೆಲ್ಲವೂ ಖೋಟಾ ನೋಟು : ಕರ್ನಾಟಕದಲ್ಲಿ ಮುದ್ರಣ ಶಂಕೆ

12:45 AM Mar 23, 2024 | Team Udayavani |

ಕಾಸರಗೋಡು: ಅಂಬಲತ್ತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಪತ್ತೆಯಾದ 2000 ರೂ. ಮುಖಬೆಲೆಯ ನೋಟುಗಳೆಲ್ಲವೂ ಖೋಟಾನೋಟುಗಳಾಗಿವೆ ಎಂದು ತನಿಖೆಯಿಂದ ಸ್ಪಷ್ಟಗೊಂಡಿದೆ.

Advertisement

ಹೀಗೆ ಒಟ್ಟು 6.96 ಕೋಟಿ ರೂ. ಖೋಟಾನೋಟುಗಳು ಪತ್ತೆ ಯಾಗಿದ್ದು ಅದಕ್ಕೆ ಸಂಬಂಧಿಸಿ ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ಈ ಮನೆಯಿಂದ 7.25 ಕೋಟಿ ರೂ. ಪತ್ತೆಯಾಗಿದೆ ಎಂದು ಆರಂಭಿಕ ಹಂತದಲ್ಲಿ ಪೊಲೀಸರು ತಿಳಿಸಿದ್ದರೂ ಅವುಗಳನ್ನು ಯಂತ್ರದಲ್ಲಿ ಎಣಿಕೆ ಮಾಡಿದಾಗ ಎಲ್ಲವೂ ಖೋಟಾ ನೋಟು ಎಂಬುದು ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೇಶದಲ್ಲಿ 2000 ರೂ. ಮುಖ ಬೆಲೆಯ ನೋಟುಗಳನ್ನು ಅಸಿಂಧು ಗೊಳಿಸಿದ್ದರೂ ಆರ್‌ಬಿಐ ಅದನ್ನು ಈಗಲೂ ಸ್ವೀಕರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಖೋಟಾನೋಟುಗಳನ್ನು ಮುದ್ರಿಸಿ ಅಸಲಿ ನೋಟು ಎಂದು ನಂಬಿಸಿ ವಿತರಿಸುವ ವ್ಯವಹಾರದಲ್ಲಿ ಈ ಅವ್ಯವಹಾರದವರು ತೊಡಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಈ ನೋಟುಗಳನ್ನು ಕರ್ನಾಟಕ ದಲ್ಲಿ ಮುದ್ರಿಸಿ ಇಲ್ಲಿಗೆ ತಲುಪಿಸಲಾಗಿದೆ ಎಂಬ ಬಲವಾದ ಶಂಕೆಯನ್ನೂ ಪೊಲೀಸರು ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಈ ವರೆಗೂ ಯಾರನ್ನೂ ಆರೋಪಿಯನ್ನಾಗಿ ಸೇರಿಸಲಾಗಿಲ್ಲ ಮತ್ತು ಬಂಧಿಸಲಾಗಿಲ್ಲ. ತನಿಖೆ ಪೂರ್ಣಗೊಂಡು ಸ್ಪಷ್ಟ ಪುರಾವೆಗಳು ಲಭಿಸಿದ ಬಳಿಕವಷ್ಟೇ ಬಂಧನ ಇತ್ಯಾದಿ ಕ್ರಮಗಳು ಮುಂದೆ ನಡೆಯಲಿದೆ. ಈ ಖೋಟಾನೋಟು ವ್ಯವಹಾರದಲ್ಲಿ ಭಾಗಿ ಎಂದು ಹೇಳಲಾಗುತ್ತಿರುವ ಇಬ್ಬರು ವ್ಯಕ್ತಿಗಳು ತಲೆಮರೆಸಿಕೊಂಡಿದ್ದಾರೆ. ಅವರ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಆಗಿದೆ. ಅವರ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಪೊಲೀಸರು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಬಂಧಿಸಿ ಸಮಗ್ರ ವಿಚಾರಣೆಗೊಳಪಡಿಸಿದ ಬಳಿಕವಷ್ಟೇ ಈ ಖೋಟಾನೋಟು ವ್ಯವಹಾರ ಕುರಿತಾದ ಸಂಪೂರ್ಣ ಮಾಹಿತಿಗಳು ಲಭಿಸಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.

ಪುತ್ತೂರು ನಿವಾಸಿ ಮೂಲಕ ಈ ನೋಟುಗಳನ್ನು ಇಲ್ಲಿಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೋಟುಗಳನ್ನು ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯಲ್ಲಿ ಬಚ್ಚಿಡಲಾಗಿತ್ತು. ಈ ಖೋಟಾನೋಟುಗಳನ್ನು ವಿದೇಶದಲ್ಲಿ ಮುದ್ರಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next