Advertisement

ತುದಿಗಾಲಿನಲ್ಲಿ ಭಾರತ: 1ನೇ ಹಂತದ ಲಸಿಕೆ ನೀಡುವಿಕೆಗೆ ಎಲ್ಲ ರಾಜ್ಯಗಳೂ ಸನ್ನದ್ಧ

01:27 AM Jan 06, 2021 | Team Udayavani |

ಹೊಸದಿಲ್ಲಿ: ದೇಶ ಎದುರು ನೋಡುತ್ತಿದ್ದ ಲಸಿಕೆ, ಮುಂದಿನವಾರದಿಂದ ಫ‌ಲಾನುಭವಿಗಳ ದೇಹ ಸೇರಲಿದೆ. ಮೊದಲ ಹಂತದಲ್ಲಿ 3 ಕೋಟಿ ಭಾರತೀಯರಿಗೆ ಲಸಿಕೆ ಭಾಗ್ಯ ಸಿಗಲಿದೆ. ಹೆಲ್ತ್‌ ಕೇರ್‌ ಸಿಬಂದಿ, ಮುಂಚೂಣಿ ಕಾರ್ಯಕರ್ತರು, 50 ವರ್ಷಕ್ಕಿಂತ ಮೇಲ್ಪಟ್ಟವರು, ಅನಾರೋಗ್ಯಪೀಡಿತರಿಗೆ ಲಸಿಕೆ ಸಿಗಲಿದೆ. ಮೊದಲ ಹಂತದ ಮಹೂರ್ತಕ್ಕೆ ಯಾವ್ಯಾವ ರಾಜ್ಯಗಳು ಹೇಗೆ ಸಜ್ಜಾಗಿವೆ ಎನ್ನುವುದರ ಕ್ಷಿಪ್ರನೋಟ ಇಲ್ಲಿದೆ…

Advertisement

ಮಹಾರಾಷ್ಟ್ರ 7,58,000 ಕೊರೊನಾ ಯೋಧರಿಗೆ ಲಸಿಕೆ ನೀಡಲಿದ್ದು, ಕೋವಿನ್‌ ಆ್ಯಪ್‌ಗೆ ಇವರ ವಿವರ ಅಪ್‌ಲೋಡ್‌ ಮಾಡಿದೆ. ರಾಜಸ್ಥಾನದಲ್ಲಿ 19 ಕಡೆಗಳಲ್ಲಿ ಡ್ರೈ ರನ್‌ ನಡೆದಿದ್ದು, ಎಲ್ಲ ಕೇಂದ್ರಗಳಲ್ಲೂ ಸುರಕ್ಷಿತ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಅಸ್ಸಾಂ ಈಗಾಗಲೇ 1,50,00 ಕೊರೊನಾ ಯೋಧರ ವಿವರ ನಮೂದಿಸಿದೆ.

ಪಂಜಾಬ್‌ 1,60,000 ಮುಂಚೂಣಿ ಕಾರ್ಯಕರ್ತರ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದೆ. ಛತ್ತೀಸಗ ಢದಲ್ಲಿ 2,54,000, ಉತ್ತರಾಖಂಡ 94,000 ಆರೋಗ್ಯ ಸಿಬಂದಿಯ ಹೆಸರು ನೋಂದಾಯಿಸಿದೆ. ಮೊದಲ ಹಂತದಲ್ಲಿ 4.50 ಲಕ್ಷ ಸಿಬ್ಬಂದಿಗೆ ಲಸಿಕೆ ನೀಡಲು ಮುಂದಾಗಿರುವ ಮ.ಪ್ರ., ಕೇಂದ್ರದ ಸೂಚನೆ ಎದುರು ನೋಡುತ್ತಿದೆ. ಹರಿಯಾಣ 19 ಸಾವಿರ ಲಸಿಕಾ ಕೇಂದ್ರಗಳನ್ನು ಸಜ್ಜುಗೊಳಿಸಿದ್ದು, 5,145 ವೈದ್ಯರು ಲಸಿಕೆ ನೀಡಲು ತರಬೇತಿಗೊಂಡಿದ್ದಾರೆ. ಬಿಹಾರವು 4.39 ಲಕ್ಷ ಆರೋಗ್ಯ ಸಿಬಂದಿಗೆ ಲಸಿಕೆ ನೀಡುತ್ತಿದೆ.

ಉಳಿದಂತೆ ಜಾರ್ಖಂಡ್‌ 2.50 ಲಕ್ಷ, ತ.ನಾಡು 6 ಲಕ್ಷ, ಆಂಧ್ರಪ್ರದೇಶ 1.70 ಲಕ್ಷ, ತೆಲಂಗಾಣ 5 ಲಕ್ಷ, ಉ.ಪ್ರ. 9 ಲಕ್ಷ ಆರೋಗ್ಯ ಯೋಧರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಿದೆ. ಏತನ್ಮಧ್ಯೆ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಲಸಿಕೆ ಸಂಗ್ರಾಹಕ ಬಾಕ್ಸ್‌ಗಳನ್ನು ಸೈಕಲ್‌ನಲ್ಲಿ ಸಾಗಿಸಿರುವುದು ವ್ಯಾಕ್ಸಿನ್‌ನ ಸುರಕ್ಷಿತ ಸಾಗಣೆ ಬಗ್ಗೆಯೇ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ನಗರದ‌ ಚೌಕಾಘಾಟ್‌ನ ಮಹಿಳಾ ಆಸ್ಪತ್ರೆಗೆ ಸಿಬಂದಿ ಸೈಕಲ್‌ನಲ್ಲಿ ಲಸಿಕೆ ಪೆಟ್ಟಿಗೆಗಳನ್ನು ಸಾಗಿಸುವ ದೃಶ್ಯಾವಳಿಗಳು ಚರ್ಚೆಗೀಡಾಗಿವೆ.

6 ತಿಂಗಳಲ್ಲೇ ಕನಿಷ್ಠ ಸೋಂಕು!
ಭಾರತದಲ್ಲಿ ಮಂಗಳವಾರ ಒಂದೇ ದಿನ 16,375 ಮಂದಿಗೆ ಪಾಸಿ ಟಿವ್‌ ದೃಢಪಟ್ಟಿದ್ದು, 271 ಮಂದಿ ಸಾವನ್ನಪ್ಪಿದ್ದಾರೆ. ಕಳೆದ 6 ತಿಂಗಳುಗ ಳಲ್ಲೇ ಇದು ಅತ್ಯಂತ ಕನಿಷ್ಠ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,36,036 ಇದ್ದು, ಸತತ 15 ದಿನಗಳಿಂದ 3 ಲಕ್ಷದೊಳಗೆ “ಸಕ್ರಿಯ ಸರಾಸರಿ’ ದಾಖಲಾಗುತ್ತಿದೆ.ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇ.96.32, ಮರಣ ಪ್ರಮಾಣ ಶೇ.1.45ರಷ್ಟಿದೆ.

Advertisement

ಅಂಡಮಾನ್‌ ನೋ ಕೇಸ್‌!: ಮಂಗಳವಾರ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಯಾವುದೇ ಕೊರೊನಾ ಪ್ರಕರಣ ದಾಖಲಾಗಿಲ್ಲ! ದ್ವೀಪದಲ್ಲಿ ಇದುವರೆಗೆ 4,898 ಮಂದಿಗೆ ಸೋಂಕು ತಗಲಿದ್ದು, 62 ಮಂದಿ ಸಾವನ್ನಪ್ಪಿದ್ದಾರೆ. 38 ಸಕ್ರಿಯ ಪ್ರಕರಣಗಳಿವೆ.

ಭಾರತಕ್ಕೆ ಬಿಲ್‌ಗೇಟ್ಸ್‌ ಪ್ರಶಂಸೆ
ಭಾರತದಲ್ಲಿ 2 ಲಸಿಕೆಗಳ ತುರ್ತು ಬಳಕೆಗೆ ಒಪ್ಪಿಗೆ ನೀಡಿರುವುದು ಗಣ್ಯರ ಪ್ರಶಂಸೆಗೆ ಪಾತ್ರವಾಗಿದೆ. “ವೈಜ್ಞಾನಿಕ ಆವಿಷ್ಕಾರಗಳಲ್ಲಿ ಭಾರತದ ನಾಯಕತ್ವ ಅದ್ಭುತವಾಗಿದೆ. ಕೊರೊನಾ ಮುಕ್ತಗೊಳಿಸಲು ಜಗತ್ತು ಪಣತೊಡುತ್ತಿರುವಾಗ, ಭಾರತದ ಲಸಿಕೆ ತಯಾರಿಕೆ ಸಾಮರ್ಥ್ಯವೂ ಉತ್ತಮವಾಗಿದೆ’ ಎಂದು ಬಿಲ್‌ಗೇಟ್ಸ್‌ ಶ್ಲಾ ಸಿದ್ದಾರೆ.

20 ಮಂದಿಗೆ ರೂಪಾಂತರಿ
ಮತ್ತೆ 20 ಮಂದಿ ಭಾರತೀಯರಲ್ಲಿ ರೂಪಾಂತರಿ ಕೊರೊನಾ ದೃಢ ಪ ಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 58 ತಲುಪಿದೆ. ನವೆಂಬರ್‌ ಅಂತ್ಯದಿಂದ ಇಂಗ್ಲೆಂಡಿನಿಂದ ಮರಳಿದ 33 ಸಾವಿರ ಪ್ರಯಾಣಿ ಕರನ್ನು ಪತ್ತೆಹಚ್ಚುವಲ್ಲಿ ಕೇಂದ್ರ ಸರಕಾರ ಸಫ‌ಲವಾಗಿದ್ದು, ಎಲ್ಲರಿಗೂ ಆರ್‌ಟಿ- ಪಿಸಿಆರ್‌ ಟೆಸ್ಟ್‌ ನಡೆಸಲಾಗಿದೆ.

ಆಕ್ಸಿಜನ್‌ ಸೌಲಭ್ಯಕ್ಕೆ ಪಿಎಂ ಕೇರ್ಸ್‌ ಹಣ
ಪಿಎಂ- ಕೇರ್ಸ್‌ ನಿಧಿಯಿಂದ 201 ಕೋಟಿ ರೂ. ಹಣವನ್ನು ದೇಶದ 162 ಕೇಂದ್ರಗಳಲ್ಲಿ ಪಿಎಸ್‌ಎ ಮೆಡಿಕಲ್‌ ಆಕ್ಸಿಜನ್‌ ಸೌಲಭ್ಯ ಒದಗಿಸಲು ವಿನಿಯೋಗಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಫೆಬ್ರವರಿ ಮಧ್ಯದವರೆಗೆ ಇಂಗ್ಲೆಂಡ್‌ ಲಾಕ್‌ಡೌನ್‌
ರೂಪಾಂತರಿ ಕೊರೊನಾದ ವ್ಯಾಪಕ ಪ್ರಸರಣಕ್ಕೆ ತಬ್ಬಿಬ್ಟಾಗಿರುವ ಇಂಗ್ಲೆಂಡಿನಲ್ಲಿ ಫೆಬ್ರವರಿ ಮಧ್ಯದವರೆಗೆ 3ನೇ ಹಂತದ ಲಾಕ್‌ಡೌನ್‌ ಘೋಷಿಸಲಾಗಿದೆ. “ಮುಂದಿನ ಕೆಲವು ವಾರಗಳು ನಮ್ಮ ಪಾಲಿಗೆ ಅತ್ಯಂತ ಕಠಿನ. ಮನೆಯೊಳಗೇ ಇರಿ, ಅನಿವಾರ್ಯ ಕಾರಣಕ್ಕಷ್ಟೇ ಹೊರಗೆ ಬನ್ನಿ’ ಎಂದು ಜನರಿಗೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next