Advertisement

ಚಾ.ನಗರ: ದ್ವಿತೀಯ ಪರೀಕ್ಷೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜು

05:54 PM Jun 16, 2020 | keerthan |

ಚಾಮರಾಜನಗರ: 2019-20ನೇ ಸಾಲಿನ ದ್ವಿತೀಯ ಪಿಯುಸಿಯ ಇಂಗ್ಲಿಷ್ ಭಾಷಾ ವಿಷಯದ ಪರೀಕ್ಷೆ ಜೂನ್ 18ರಂದು ನಡೆಯಲಿದ್ದು, ಜಿಲ್ಲೆಯಲ್ಲಿ 6,535 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ.

Advertisement

ಅಂದು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ ನಡೆಯಲಿದೆ. ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. ಚಾಮರಾಜನಗರ ಪಟ್ಟಣದಲ್ಲಿ 4, ಗುಂಡ್ಲುಪೇಟೆ ಪಟ್ಟಣದಲ್ಲಿ 3, ಯಳಂದೂರಿನಲ್ಲಿ 2, ಕೊಳ್ಳೇಗಾಲದಲ್ಲಿ 5, ಹನೂರಿನಲ್ಲಿ 1 ಹಾಗೂ ರಾಮಾಪುರದಲ್ಲಿ 1 ಪರೀಕ್ಷಾ ಕೇಂದ್ರಗಳಿವೆ.  ಒಟ್ಟು 314 ಕೊಠಡಿಗಳಲ್ಲಿ ಪರೀಕ್ಷೆ ನಡೆಯಲಿದೆ. ಹನೂರು ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಅತಿ ಹೆಚ್ಚಿನ ವಿದ್ಯಾರ್ಥಿಗಳು ಅಂದರೆ 655 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ.

ಲಾಕ್‌ಡೌನ್ ಕಾರಣದಿಂದಾಗಿ ಜಿಲ್ಲೆಯಿಂದ 13 ಮಕ್ಕಳು ಹೊರ ಜಿಲ್ಲೆಗಳಲ್ಲಿ ಉಳಿದಿದ್ದರು. ಅವರು ಅಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. 7 ಮಕ್ಕಳು ಅಂತಾರಾಜ್ಯದಲ್ಲಿದ್ದಾರೆ. ಓರ್ವ ವಿದ್ಯಾರ್ಥಿ ಕೇರಳ, 6 ವಿದ್ಯಾರ್ಥಿಗಳು ತಮಿಳುನಾಡಿನಲ್ಲಿ ಉಳಿದಿದ್ದರು. ಅವರಿಗೆ ಇ ಪಾಸ್ ಜಿಲ್ಲಾಧಿಕಾರಿಯವರಿಂದ ನೀಡಲಾಗಿದೆ. ಅಂದು ಸ್ವಂತ ವಾಹನದಲ್ಲಿ ಬಂದು ಪರೀಕ್ಷೆ ಬರೆಯಲಿದ್ದಾರೆ.

ಹೊರ ಜಿಲ್ಲೆಯ 233 ಮಂದಿ: ಹೊರ ಜಿಲ್ಲೆಗಳ 233 ಮಕ್ಕಳು ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಇವರು ಲಾಕ್‌ಡೌನ್‌ನಿಂದಾಗಿ ನಮ್ಮ ಜಿಲ್ಲೆಯಲ್ಲಿ ಉಳಿದಿದ್ದಾರೆ. ಹಾಗಾಗಿ ಇವರಿಗೆ ಇಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ.

ಪ್ರತಿ ಕೊಠಡಿಯಲ್ಲಿ ನಿಯಮದ ಪ್ರಕಾರ ಕನಿಷ್ಠ 12 ಮಂದಿ ಮತ್ತು ಕೊಠಡಿ ದೊಡ್ಡದಿದ್ದರೆ ಗರಿಷ್ಠ 24 ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಒಂದು ಡೆಸ್ಕ್ ನಲ್ಲಿ ಇಬ್ಬರು ಪರೀಕ್ಷೆ ಬರೆಯಬಹುದು. ಒಂದರಿಂದ ಇನ್ನೊಂದು ಡೆಸ್ಕ್ ಗೆ 2 ರಿಂದ 3 ಅಡಿ ಅಂತರವಿರುತ್ತದೆ.

Advertisement

ಜಿಲ್ಲೆಯ ಎಲ್ಲ 16 ಪರೀಕ್ಷಾ ಕೇಂದ್ರಗಳ ಎಲ್ಲ ಕೊಠಡಿಗಳನ್ನು, ಮಂಗಳವಾರ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿಗಳಿಂದ ಸ್ಯಾನಿಟೈಸ್ ಮಾಡಲಾಗಿದೆ.  ಚಾಮರಾಜನಗರ ಪ್ರಾಂಶುಪಾಲರ ಸಂಘದಿಂದ ಎಲ್ಲ ಮಕ್ಕಳಿಗೂ ಉಚಿತವಾಗಿ ಮಾಸ್ಕ್ ಗಳನ್ನು ನೀಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿ ಮತ್ತು ಕಾರ್ಯ ನಿರ್ವಹಿಸುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ

ಪ್ರತಿ ಕೇಂದ್ರದಲ್ಲೂ ಸ್ಯಾನಿಟೈಸರ್ ಅಲ್ಲದೇ ಹ್ಯಾಂಡ್‌ವಾಶ್ ಇಡಲಾಗಿದೆ.  ಆರೋಗ್ಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಥರ್ಮಲ್ ಸ್ಕ್ರ್ಯಾನರ್ ಮೂಲಕ ವಿದ್ಯಾರ್ಥಿಗಳ ದೇಹದ ಉಷ್ಣಾಂಶ ಪರೀಕ್ಷೆ ಮಾಡಲಾಗುವುದು. ಆರೋಗ್ಯವಂತರಿಗಿಂತ ಹೆಚ್ಚಿನ ಉಷ್ಣಾಂಶ ಇರುವವರನ್ನು, ಸಾಮಾನ್ಯ ನೆಗಡಿ, ಕೆಮ್ಮು ಲಕ್ಷಣ ಇರುವವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುವುದು.

ಒಂದು ವೇಳೆ ವಿದ್ಯಾರ್ಥಿಯ ಪರೀಕ್ಷೆ ವೇಳೆ ಕೋವಿಡ್ ಶಂಕೆ ಬಂದರೆ ಅವರನ್ನು ಪರೀಕ್ಷೆಗೆ ಕೂರಿಸುವುದಿಲ್ಲ. ಅಂಥವರನ್ನು ಮುಂದಿನ ಸೆಪ್ಲಿಮೆಂಟರಿ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದ ವಿದ್ಯಾರ್ಥಿ ಎಂದೇ ಪರಿಗಣಿಸಲಾಗುವುದು.

ಬಸ್‌ಗಳ ವ್ಯವಸ್ಥೆ: 16 ಮಾರ್ಗ ನಕ್ಷೆ ತಯಾರಿಸಿ ಕೆಎಸ್‌ಆರ್‌ಟಿಸಿಗೆ ನೀಡಲಾಗಿದೆ. ಕಾಲೇಜಿನ ಪ್ರಾಂಶುಪಾಲರಿಗೆ ವಿದ್ಯಾರ್ಥಿಗಳಿಗೆ, ದೂರವಾಣಿ ಮೂಲಕ ಬಸ್ ಬರುವ ಸಮಯ ನೀಡಲಾಗಿದೆ. ಒಂದೊಂದು ಬಸ್‌ ಗೂ ಉಪನ್ಯಾಸಕರನ್ನು ರೂಟ್ ಆಫೀಸರ್ ಆಗಿ ನೇಮಕ ಮಾಡಲಾಗಿದೆ. ಬಸ್‌ಗಳು ಪರೀಕ್ಷಾ ಕೇಂದ್ರಕ್ಕೆ ಬೆಳಿಗ್ಗೆ 9.30ಕ್ಕೆ ಬಂದು ತಲುಪುವಂತೆ ವ್ಯವಸ್ಥೆ ಮಾಡಲಾಗಿದೆ. ಶೇ. 50ರಷ್ಟು ವಿದ್ಯಾರ್ಥಿಗಳು ಬಸ್‌ನಲ್ಲಿ ಬಂದರೆ, ಶೇ. 50ರಷ್ಟು ವಿದ್ಯಾರ್ಥಿಗಳು ಪೋಷಕರ ಸ್ವಂತ ವಾಹನಗಳಲ್ಲಿ ಬರುವ ನಿರೀಕ್ಷೆಯಿದೆ. ಪ್ರತಿ ಪರೀಕ್ಷಾ ಕೇಂದ್ರದ ನೋಡಲ್ ಅಧಿಕಾರಿಯಾಗಿ, ಇತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೇಮಕ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿಯವರು, ಜಿಲ್ಲೆಯಲ್ಲಿ ಸುರಕ್ಷಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಮುಂಜಾಗ್ರತೆ ವಹಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಯಾವುದೇ ಲೋಪ ಹಾಗೂ ಗೊಂದಲಕ್ಕೆ ಅವಕಾಶವಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಸಹಾಯವಾಣಿ 0822 224556 ಅಥವಾ ಮೊಬೈಲ್ ಸಂಖ್ಯೆ 6363 091829 ಕ್ಕೆ ಕರೆ ಮಾಡಬಹುದು ಎಂದಿದ್ದಾರೆ

 

ಕೆ.ಎಸ್. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next