Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು. ಅನೇಕ ವರ್ಷಗಳ ಬೇಡಿಕೆ ಈಗ ತೀವ್ರ ರೂಪ ಪಡೆದುಕೊಂಡಿದೆ. ಈ ಸಂಬಂಧ ಚರ್ಚಿಸಲು ಸರ್ವಧರ್ಮ ಸಭೆಯನ್ನು ಆಗಸ್ಟ್ 8ರಂದು ಆಯೋಜಿಸಿದ್ದೇವೆ. ಇದರಲ್ಲಿ ವಿವಿಧ ಮಠಾಧೀಶರು, ಸಂಸ್ಕೃತಿ ಚಿಂತಕರು, ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದರು.
Related Articles
Advertisement
ರಚನೆಯ ದೃಷ್ಟಿ, ನಂಬಿಕೆ, ಆಚರಣೆಯಿಂದ ಲಿಂಗಾಯತ ಪ್ರತ್ಯೇಕ ಧರ್ಮವಾಗಿದೆ. ವರ್ಣಾಶ್ರಮ ಹಾಗೂ ದೇವಸ್ಥಾನದ ಕಲ್ಪನೆ ಇಲ್ಲ. ವೇದ, ಶಾಸ್ತ್ರ ಹಾಗೂ ಪುರಾಣವೂ ಇಲ್ಲಿಲ್ಲ. ಪುನರ್ಜನ್ಮದಲ್ಲಿ ನಂಬಿಕೆಯೂ ಇಲ್ಲ. ಹುಟ್ಟು, ಸಾವು ಮತ್ತು ಮದುವೆಗೆ ಸಂಬಂಧಿಸಿದ ಅಚರಣೆ ಹಿಂದು ಧರ್ಮಕ್ಕೆ ವಿರುದ್ಧವಾಗಿದೆ ಎಂದು ವಿವರಿಸಿದರು.
ವೈದಿಕರದ್ದು ಅಗ್ನಿ ಪ್ರಧಾನ ಸಂಸ್ಕೃತಿಯಾದರೆ, ಲಿಂಗಾಯತ ಸೇರಿದಂತೆ ವೈದಿಕೇತರರದ್ದು ಜಲ ಪ್ರಧಾನ ಸಂಸ್ಕೃತಿಯಾಗಿದೆ. ಭಾವನಾತ್ಮಕ ಕಾರಣಕ್ಕೆ ಮತ್ತು ಕಲುಷಿತವಾಗಿರುವ ದೇಶದ ಸಾಮಾಜಿಕ ವಾತಾವರಣ ಸರಿಪಡಿಸಲು ಲಿಂಗಾಯತ ಪ್ರತ್ಯೇಕ ಧರ್ಮದ ಅಗತ್ಯವಿದೆ ಎಂದರು. ಹಿರಿಯ ನಟ ಜಿ.ಕೆ.ಗೋವಿಂದ್ ರಾವ್, ಪತ್ರಕರ್ತ ಅಗ್ನಿ ಶ್ರೀಧರ್, ಲಕ್ಷ್ಮೀನಾರಾಯಣ ನಾಗಾವರ ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.
ಹಿಂದುಸ್ಥಾನಿ ಎನ್ನುಲು ಹೆಮ್ಮೆಯಿದೆ. ಆದರೆ, ಹಿಂದುಧರ್ಮೀಯ ಎನ್ನಲು ಮುಜುಗರ, ಸಂಕೋಚವಾಗುತ್ತದೆ. ಹಿಂದೂ ಎನ್ನುವುದು ಧರ್ಮವಾಗಿ ಕಾಣುತ್ತಿಲ್ಲ. ಹಿಂದೂ ಧರ್ಮ ಎನ್ನುವುದು ಭ್ರಮೆ. ಲಿಂಗಾಯತ ಬದಲಿಗೆ ಶರಣರ ಧರ್ಮ ಎಂದು ಕರೆಯಬೇಕಿತ್ತು. ಪ್ರತ್ಯೇಕ ಧರ್ಮದಿಂದ ಭಾರತೀಯತೆಗೆ ಯಾವುದೇ ಧಕ್ಕೆ ಇಲ್ಲ.-ಅಗ್ನಿ ಶ್ರೀಧರ್, ಪತ್ರಕರ್ತ ನಾವೆಲ್ಲರೂ ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ಆದರೆ, ಬಿಜೆಪಿಯ ವಿರೋಧಿಗಳು. ಕಾಂಗ್ರೆಸ್ ಸೇರಿದಂತೆ ಯಾವ ಪಕ್ಷದ ಪರವಾಗಿಯೂ ಇಲ್ಲ. ನಮ್ಮದು ಹುಟ್ಟು ವಿರೋಧಪಕ್ಷ. ಬಿಜೆಪಿಯ ಆಜನ್ಮ ವಿರೋಧಿಗಳು. ರಾಜಕೀಯ ಕಾರಣಕ್ಕಾಗಿ ಅಲ್ಲ. ಭಾವನಾತ್ಮಕ ಕಾರಣಕ್ಕೆ ಲಿಂಗಾಯತ ಧರ್ಮದ ಅಗತ್ಯವಿದೆ.
-ಜಿ.ಕೆ.ಗೋವಿಂದ್‌ರಾವ್, ಹಿರಿಯ ನಟ ವಚನದಲ್ಲಿ ಬಸವಣ್ಣ ಲಿಂಗಾಯತ ಪದ ಬಳಿಸಿದ್ದರೆ ಕಾಡಿಗೆ ಹೋಗುತ್ತೇನೆ
ಬೆಂಗಳೂರು: ಬಸವಣ್ಣ ಅವರು ಯಾವ ವಚನದಲ್ಲೂ ಲಿಂಗಾಯತ ಪದ ಬಳಸೇ ಇಲ್ಲ. ಒಂದು ವೇಳೆ ಎಲ್ಲಾದರೂ ಬಳಸಿದ್ದು ಕಂಡರೆ ನಾನು ಮಠ ಬಿಟ್ಟು ಕಾಡಿಗೆ ಹೋಗುತ್ತೇನೆ ಎಂದು ವಿಭೂತಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಂಗಳವಾರ ಪುರಭವನದ ಎದುರು ಅಖೀಲ ಭಾರತ ವೀರಶೈವ ಲಿಂಗಾಯಿತ ಯುವ ಸಭಾದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಾತೇ ಮಹಾದೇವಿ ಅವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಧರ್ಮದ ಕುರಿತು ಮತ್ತು ವಿವಿಧ ಮಠಗಳ ಸ್ವಾಮೀಜಿಗಳ ಕುರಿತು ಅವರು ಬಾಯಿಗೆ ಬಂದಂತೆ ಮಾತನಾಡಬಾರದಿತ್ತು. ಬಸವಣ್ಣ ಅವರು ತಮ್ಮ ಯಾವ ವಚನದಲ್ಲೂ ಲಿಂಗಾಯತ ಪದ ಬಳಿಸಿಲ್ಲ. ಒಂದು ವೇಳೆ ಎಲ್ಲಾದರೂ ಬಳಸಿದ್ದು ಕಂಡುಬಂದರೆ ನಾನು ಮಠ ಬಿಟ್ಟು ಕಾಡಿಗೆ ಹೋಗುತ್ತೇನೆ,’ ಎಂದು ಹೇಳಿದರು. ಕೊಳದ ಮಠದ ಶಾಂತವೀರ ಸ್ವಾಮೀಜಿ ಮಾತನಾಡಿ, ವೀರಶೈವ ಹಾಗೂ ಲಿಂಗಾಯತ ಸಮುದಾಯ ಒಂದೇ ಆಗಿದ್ದು, ಪ್ರತ್ಯೇಕ ಧರ್ಮದ ಹೋರಾಟದ ಹಿಂದೆ ಕಾಣದ ಕೈಗಳಿವೆ. ಮುಂದಿನ ದಿನಗಳಲ್ಲಿ ಈ ಕುರಿತು ಸಭೆ ನಡೆಸಿ ನಮ್ಮೆಲ್ಲರ ನಿಲುವು ಪ್ರಕಟಿಸುತ್ತೇವೆ. ಆದರೆ, ಮಾತೆ ಮಹಾದೇವಿ ಗುರುದ್ರೋಹಿಯಾಗಿದ್ದು, ಲಿಂಗಾಯಿತ ಮತ್ತು ವೀರಶೈವರು ಬೇರೆ ಬೇರೆ ಎಂದಿದ್ದಾರೆ ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಸಿದ್ಧರಬೆಟ್ಟದ ವೀರಭದ್ರ ಸ್ವಾಮೀಜಿ, ಚಕ್ರುಭಾವಿ ಮಠದ ಸ್ವಾಮೀಜಿಗಳು, ರಾಜಾಪುರ ಮಠದ ಡಾ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಮೈಸೂರು ಜಿಲ್ಲೆಯ ಧನಗುರು ಶ್ರೀಗಳು, ರಾಮನಗರದ ರೇವಣ್ಣಸಿದ್ಧೇಶ್ವರ ಶಿವಾಚಾರ್ಯರು, ಕೋಲಾರದ ತೇಜೇಶಲಿಂಗ ಶಿವಾಚಾರ್ಯರು (ನಾಗಲಾಪುರ ಮಠ) ಸೇರಿದಂತೆ ಹಲವಾರು ಸ್ವಾಮೀಜಿಗಳು ಮತ್ತು ಅಖೀಲ ಭಾರತ ವೀರಶೈವ ಲಿಂಗಾಯಿತ ಯುವ ಸಭಾ ಅಧ್ಯಕ್ಷ ನಂಜುಂಡೇಶ್ ಮತ್ತಿತರರು ಪಾಲ್ಗೊಂಡಿದ್ದರು.