ಸುಮಾರು 9000 ಪೊಲೀಸರು, 1000 ಹೋಮ್‌ಗಾರ್ಡ್‌ಗಳು, 1000 ಮೀಸಲು ಪೊಲೀಸರು ಮತ್ತು ವಿಶೇಷ ಪಡೆಯ ಪೊಲೀಸರು, ಇವರಷ್ಟೇ ಅಲ್ಲದೆ ನೂರಾರು ಉನ್ನತ ಪೊಲೀಸ್ ಅಧಿಕಾರಿಗಳು. ಇದು ಒಂದು ರಾತ್ರಿಯ ಬೆಂಗಳೂರಿನ ಭದ್ರತೆಗಾಗಿ ಮಾಡಿಕೊಂಡಿರುವ ಏರ್ಪಾಡು. ಹಾಗೆಂದು ಬೆಂಗಳೂರಿಗೆ ಅಮೆರಿಕದ ಅಧ್ಯಕ್ಷ ಟ್ರಂಪ್ ಬರುತ್ತಿಲ್ಲ ಅಥವಾ ಪ್ರಧಾನಿ ಮೋದಿಯ ಸಾರ್ವಜನಿಕ ರ್ಯಾಲಿ ಆಯೋಜನೆಯಾಗಿಲ್ಲ. ಡಿ. 31ರ ರಾತ್ರಿ ನಡೆಯುವ ಹೊಸ ವರ್ಷಾಚರಣೆಗಾಗಿ ಈ ಪರಿಯ ಬಿಗು ಬಂದೋಬಸ್ತು. ಬೆಂಗಳೂರು ಎಂದಲ್ಲ ದಿಲ್ಲಿ, ಮುಂಬಯಿ ಸೇರಿದಂತೆ ಎಲ್ಲ ನಗರ , ಮಹಾನಗರಗಳಲ್ಲಿ ಇದೇ ರೀತಿ ಭದ್ರತೆಯ ವ್ಯವಸ್ಥೆ ಇರುತ್ತದೆ.
ಡಿ. 31ರ ರಾತ್ರಿ ಎನ್ನುವುದು ಪೊಲೀಸರ ಪಾಲಿಗೆ ಅಗ್ನಿ ಪರೀಕ್ಷೆಯೇ ಸರಿ. ಹೊಸ ವರ್ಷಾಚರಣೆ ಈಗ ಉನ್ಮಾದದ ರೂಪ ಪ ಡೆದುಕೊಂಡಿದ್ದು, ನಡುರಾತ್ರಿ ಹೆಣ್ಣು ಗಂಡು ಎಂಬ ಬೇಧವಿಲ್ಲದೆ ಕುಡಿದು ಕುಣಿದು ಕುಪ್ಪಳಿಸುವುದೇ ಹೊಸ ವರ್ಷವನ್ನು ಸ್ವಾಗತಿಸುವ ರೂಢಿಗತ ರೀತಿ ಎಂಬಂತಾಗಿದೆ. ಇಂತಹ ಸಂದರ್ಭಕ್ಕಾಗಿ ಹೊಂಚು ಹಾಕುತ್ತಿರುವ ಪುಂಡರು ರಾತ್ರಿ ಸಿಗುವ ಅವಕಾಶವನ್ನು ತಮ್ಮ ಚಪಲ ತೀರಿಸಿಕೊಳ್ಳಲು ಬಳಸಿ ಕೊಳ್ಳುತ್ತಿದ್ದಾರೆ.ಕಳೆದ ವರ್ಷ ಡಿ. 31ರ ರಾತ್ರಿ ಬೆಂಗಳೂರಿನಲ್ಲಿ ಪುಂಡರು ಗುಂಪಿನೊಳಗೆ ನುಸುಳಿ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಜಗತ್ತಿನಾದ್ಯಂತ ಸುದ್ದಿಯಾಗಿ ಹೆಣ್ಣು ಮಕ್ಕಳಿಗೆ ಅತ್ಯಂತ ಸುರಕ್ಷಿತ ಎಂಬ ಖ್ಯಾತಿ ಹೊಂದಿದ್ದ ನಗರದ ಮಾನ ಹರಾಜಾಗಿತ್ತು.
ಕೆಲ ವರ್ಷಗಳ ಹಿಂದೆ ಮುಂಬಯಿಯಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ದಿಲ್ಲಿಯಲ್ಲಿ ಹಗಲು ಹೊತ್ತಿನಲ್ಲೇ ಹೆಣ್ಣು ಮಕ್ಕಳಿಗೆ ರಕ್ಷಣೆಯಿಲ್ಲ. ಇನ್ನು ರಾತ್ರಿಯ ವಿಷಯ ಹೇಳುವುದೇ ಬೇಡ. ಹೊಸ ವರ್ಷಾಚರಣೆ ಸಂದರ್ಭದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಅಲ್ಲಿ ಏನಾದರೊಂದು ಅಹಿತಕರ ಘಟನೆ ಸಂಭವಿಸಿಯೇ ತೀರುತ್ತದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಈ ಘಟನೆ ಸಂಭವಿಸಿದಾಗ ಅಂದಿನ ಗೃಹ ಸಚಿವ ಪರಮೇಶ್ವರ್ ಅವರು ಪಾಶ್ಚಾತ್ಯ ಸಂಸ್ಕೃತಿಯ ಕುರುಡು ಅನುಕರಣೆಯೇ ಇಂತಹ ಘಟನೆಗಳಿಗೆ ಕಾರಣ ಎಂದಿದ್ದರು. ಆಗ ಅವರ ಹೇಳಿಕೆಗೆ ಪ್ರಗತಿಪರರು, ಮಹಿಳಾವಾದಿಗಳು, ಹೋರಾಟಗಾರರು ಎಂದು ಕರೆಸಿಕೊಳ್ಳುವವರಿಂದ ಭಾರೀ ವಿರೋಧ ವ್ಯಕ್ತವಾಗಿದ್ದರೂ ಪರಮೇಶ್ವರ್ ಹೇಳಿರುವುದು ಸುಳ್ಳಲ್ಲ. ಹಾಗೆ ನೋಡಿದರೆ ನಡುರಾತ್ರಿ ಬೀದಿಗಿಳಿದು ಹೊಸ ವರ್ಷವನ್ನು ಸ್ವಾಗತಿಸುವ ಪರಂಪರೆ ದೇಶದಲ್ಲಿ ಶುರುವಾಗಿರುವುದು ಸುಮಾರು ಎರಡು ದಶಕದ ಹಿಂದೆ. ಅದೂ ದೇಶ ಉದಾರೀಕರಣಕ್ಕೆ ತೆರೆದುಕೊಂಡು ಬಹುರಾಷ್ಟ್ರೀಯ ಕಂಪೆನಿಗಳು, ಕಾಲ್‌ಸೆಂಟರ್, ಐಟಿ- ಬಿಟಿ ಕಂಪೆನಿಗಳು ದಾಂಗುಡಿಯಿಡಲು ಶುರುವಾದ ಬಳಿಕ. ಇದಕ್ಕೂ ಮೊದಲು ಡಿ. 31 ಕಳೆದು ಜನವರಿ 1 ಬರುವುದು ವಿಶೇಷ ದಿನವೇನೂ ಆಗಿರಲಿಲ್ಲ.
ಪಾಶ್ಚಾತ್ಯ ಗಾಳಿ ಜೋರಾಗಿಯೇ ಬೀಸತೊಡಗಿದಾಗ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅದರಲ್ಲಿ ಹುಲುಸು ಬೆಳೆ ತೆಗೆಯುವ ಸಾಧ್ಯತೆ ಕಂಡಿತು. ಹೀಗೆ ಹೊಸ ವರ್ಷಾಚರಣೆಗೆ ಕಮರ್ಶಿಯಲ್ ಟಚ್ ಸಿಕ್ಕಿದ ಅನಂತರ ಅದು ನಿಯಂತ್ರಣ ಮೀರಿ ಬೆಳೆಯುತ್ತಿದೆ. ಹಾದಿ ಬೀದಿಯ ಮಾಮೂಲು ಟೀ ಅಂಗಡಿಗಳಿಂದ ಹಿಡಿದು ಪಂಚತಾರಾ ಹೊಟೇಲ್‌ಗಳ ತನಕ ಎಲ್ಲೆಡೆ ಹೊಸ ವರ್ಷಾಚರಣೆಯ ಸಂಭ್ರಮ. ಇಂತಹ ಉನ್ಮಾದದ ಕ್ಷಣಗಳಿಗೆ ಶರಾಬಿನ ನಶೆ ಸೇರಿದರೆ ಏನು ಆಗಬಾರದೋ ಅದು ಆಗುತ್ತಿದೆ.
ಒಟ್ಟಾರೆಯಾಗಿ ಹೊಸ ವರ್ಷಾಚರಣೆ ಎನ್ನುವುದು ಈಗ ಬಹುಕೋಟಿ ರೂಪಾಯಿ ವ್ಯವಹಾರ ನಡೆಯುವ ದಿನ. ಹೀಗಾಗಿಯೇ ಈ ಸಲ ಡಿ. 31ರಂದು ರಾತ್ರಿ ಮಧ್ಯ ಮಾರಾಟ ನಿಷೇಧಿಸಬೇಕೆಂದು ಆಗ್ರಹಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಲಾಗಿತ್ತು. ಆದರೆ ನ್ಯಾಯಾಲಯ ಈ
ಅರ್ಜಿಯನ್ನು ತಳ್ಳಿ ಹಾಕಿದೆ. ಒಂದೆಡೆ ಪೊಲೀಸರಿಗೆ ಗುಂಪಿನೊಳಗೆ ಸೇರಿಕೊಂಡು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುವ ಪುಂಡರನ್ನು ತಡೆಯುವ ಕೆಲಸವಾದರೆ ಇನ್ನೊಂದೆಡೆ ಹೊಸ ವರ್ಷಾಚರಣೆಯನ್ನೇ ವಿರೋಧಿಸುತ್ತಿರುವ ಕೆಲವು ಸಂಘಟನೆಗಳ ಪ್ರತಿಭಟನೆಯನ್ನು ಹತ್ತಿಕ್ಕುವ ತಲೆನೋವು. ಮಂಗಳೂರಿನಲ್ಲಿ ಈಗಾಗಲೇ ಬಲಪಂಥೀಯ ಸಂಘಟನೆಯೊಂದು ಹೊಸ ವರ್ಷಾಚರಣೆಗೆ ಅನುಮತಿ ಕೊಡಬಾರದೆಂದು ಪೊಲೀಸರಿಗೆ ಮನವಿ ಮಾಡಿದೆ. ಹಾಗೆಂದು ಹೊಸ ವರ್ಷಾಚರಣೆ ಮಾಡಬಾರದು ಎಂದಲ್ಲ. ಆದರೆ ಅದಕ್ಕೊಂದು ಮಿತಿಯಿರಬೇಕು. ನಡುರಾತ್ರಿ, ನಡುರಸ್ತೆಯಲ್ಲಿ ಕುಣಿದು ಕುಪ್ಪಳಿಸುವುದೇ ಆಚರಣೆಯಲ್ಲ. ಇದರಿಂದ ಸುಮ್ಮನೆ ಪೊಲೀಸರಿಗೆ ತೊಂದರೆ ಕೊಟ್ಟಂತಾಗುತ್ತದೆಯೇ ಹೊರತು ಬೇರೆ ಯಾವ ಪ್ರಯೋಜನವೂ ಇಲ್ಲ