Advertisement

Mangaluru: ರಾಜ್ಯಾದ್ಯಂತ ಮತ್ತೆ ಮೂಲ ಮರುಸರ್ವೇಗೆ ಚಾಲನೆ

09:29 AM Mar 07, 2024 | Team Udayavani |

ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶತಮಾನದ ಬಳಿಕ ಆರಂಭವಾಗಿ ಅರ್ಧಕ್ಕೆ ನಿಂತಿದ್ದ ಭೂ ಮರುಸರ್ವೆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲು ರಾಜ್ಯ ಸರಕಾರ ತೀರ್ಮಾನಿಸಿದೆ.

Advertisement

ಇದಕ್ಕೆ ನಿಗದಿಪಡಿಸಲಾಗಿದ್ದ ಗುತ್ತಿಗೆದಾರ ಕಂಪೆನಿ ಸರ್ವೇ ಮಧ್ಯೆ ಸ್ಥಗಿತಗೊಳಿಸಿದ ಕಾರಣ ಡ್ರೋನ್‌ ಸಮೀಕ್ಷೆ ನಡೆದಿಲ್ಲ. ಹೀಗಾಗಿ ಮುಂದೆ ಸ್ವಾಮಿತ್ವ ಯೋಜನೆಯ ಡ್ರೋನ್‌ ಸಮೀಕ್ಷೆಯನ್ನೇ ಮರುಸರ್ವೇಗೆ ಕೂಡ ಬಳಸಿ ಕೊಳ್ಳುವ ತೀರ್ಮಾನಕ್ಕೆ ಭೂಮಾಪನ ಇಲಾಖೆ ಬಂದಿದೆ.

ಕರಾವಳಿಯಲ್ಲಿ ಸ್ವಾಮಿತ್ವ ಹಾಗೂ ಮರು ಮೂಲ ಸರ್ವೇ ಒಂದೇ ಸಮಯದಲ್ಲಿ ಆರಂಭಗೊಂಡಿತ್ತು. ಸ್ವಾಮಿತ್ವದಲ್ಲಿ ಜಿಲ್ಲೆಯ ಎಲ್ಲ ಭೂಭಾಗದ ಬದಲಾಗಿ 10 ಕ್ಕಿಂತ ಹೆಚ್ಚು ಗುಂಪು ಮನೆ ಇರುವಲ್ಲಿ ಮಾತ್ರವೇ ಸಮೀಕ್ಷೆ ನಡೆಸಿ ಅವರಿಗೆ ಹೇಗೆ ಭೂಮಿ ಬಂದಿದೆ ಎಂಬು ದನ್ನು ಪರಿಶೀಲಿಸಿ ದಾಖಲೆ ಸಂಗ್ರಹಿಸಿ ಮಾಲಕರಿಗೆ ಪಿ.ಆರ್‌. ಕಾರ್ಡ್‌ ಕೊಡಲಾಗುತ್ತದೆ.ಮರು ಸರ್ವೇಯಲ್ಲಿ ಪೂರ್ತಿ ಭೂಭಾಗದ ಸಮೀಕ್ಷೆ ನಡೆಸಲಾಗುತ್ತದೆ.

5 ಜಿಲ್ಲೆಗಳಲ್ಲಿ ಆರಂಭ

ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರು ಸರ್ವೆಗಾಗಿ ರಿಸರ್ವೇಗಾಗಿ ಅಮ್ಟಾಡಿಯಲ್ಲಿ ಕೋರ್ (ಕಂಟಿನ್ಯೂವಸ್‌ ಆಪರೇಟಿಂಗ್‌ ರೆಫರೆನ್ಸ್‌) ಸ್ಟೇಷನ್‌ ನಿರ್ಮಿಸಲಾಗಿದೆ. ಸರ್ವೇ ಕೈಗೊಳ್ಳುವಾಗ ಇದನ್ನೇ ಜಿಪಿಎಸ್‌ ಬೇಸ್‌ ಸ್ಟೇಷನ್‌ ಆಗಿ ಪರಿ ಗಣಿಸಲಾಗುತ್ತದೆ. ರೋವರ್‌ ಗಳನ್ನು ಬಳಸಿ ಗಡಿಗುರುತು ಮಾಡಿ ಡ್ರೋನ್‌ ಚಿತ್ರೀಕರಣವನ್ನೂ ಓವರ್‌ ಲ್ಯಾಪ್‌ ಮಾಡಿಕೊಳ್ಳುವುದು ಸಾಧ್ಯ.

Advertisement

ಪ್ರಾಯೋಗಿಕವಾಗಿ ರಾಮನಗರದ ಉಯ್ಯಂಬಳ್ಳಿ ಹೋಬಳಿಯಲ್ಲಿ ನಡೆದ ಸರ್ವೆ ಯಶಸ್ವಿಯಾಗಿದೆ. ಪ್ರಸ್ತುತ ಸ್ವಾಮಿತ್ವ ಸಮೀಕ್ಷೆಗಾಗಿ ಡ್ರೋನ್‌ ಹಾರಿಸು ವಾಗಲೇ ಇಡೀ ಪ್ರದೇಶದ ಸರ್ವೇ ನಡೆಸಲಾಗುವುದು. ಮಂಡ್ಯದ ಮದ್ದೂರು, ಬೆಳಗಾವಿಯ ಖಾನಾ ಪುರ ಸೇರಿದಂತೆ ಪ್ರತೀ ಜಿಲ್ಲೆಯ ಕನಿಷ್ಠ 2 ಗ್ರಾಮಗಳಲ್ಲಿ ಪೂರ್ವ ಸಿದ್ಧತೆ ಮಾಡಲಾಗಿದೆ. ಡ್ರೋನ್‌ ದೃಶ್ಯಗಳನ್ನು ಬಳಸುವ ಬಗ್ಗೆ ಭೂಮಾಪನ ಇಲಾಖೆಯಲ್ಲಿ ಮಾಹಿತಿ ಹೊಂದಿರುವವರ ತಂಡ ಸಿದ್ಧವಾಗುತ್ತಿದೆ.

ದ.ಕ.ದಲ್ಲಿ ಈಗಾಗಲೇ ಜಿಯೋ ರೆಫರನ್ಸ್‌ ಮಾಡಲಾಗಿದೆ (ಕೋರ್ ಸ್ಟೇಷನ್‌ ಮೂಲಕ). ಮುಂದೆ ಡ್ರೋನ್‌ ಗಳನ್ನೇ ರೋವರ್‌ ಆಗಿ ಬಳಸಿ ದತ್ತಾಂಶ ವನ್ನು ಕೋರ್ಗೆ ಸೇರಿಸಲಾಗುತ್ತದೆ. ಬಳಿಕ ಗುಣಮಟ್ಟ ಪರಿಶೀಲಿಸಿ ಅಂತಿಮಗೊಳಿಸಲಾಗುತ್ತದೆ.

ಐದು ಜಿಲ್ಲೆಗಳಲ್ಲಿ ಆರಂಭ

ಪ್ರಸ್ತುತ ತುಮಕೂರು, ಬೆಳಗಾವಿ, ರಾಮನಗರ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಮೂಲಸರ್ವೇ ಕೆಲಸ ನಡೆಯಲಿದೆ. ಬಳಿಕ ಹಂತ ಹಂತವಾಗಿ ಇತರ ಜಿಲ್ಲೆಗಳಲ್ಲೂ ಕೈಗೆತ್ತಿಕೊಳ್ಳಲಾಗುತ್ತದೆ.

ಈ ಕಾರ್ಯಕ್ಕಾಗಿಯೇ ಹೆಚ್ಚುವರಿಯಾಗಿ 364 ಸರಕಾರಿ ಭೂಮಾಪಕರು, ಹಾಗೂ 27 ಎಡಿಎಲ್‌ಆರ್‌ ಗಳ ನೇಮಕವಾಗಲಿದೆ. 1,200 ಮಂದಿ ಪರವಾನಿಗೆ ಸಹಿತ ಸರ್ವೇಯರ್‌ಗಳನ್ನು ಹೊರಗುತ್ತಿಗೆ ಪಡೆಯಲಾಗುವುದು. ಮುಂದಿನ ತಿಂಗಳಿಂದ ನೇಮಕಾತಿ ನಡೆಯುವ ಸಂಭವವಿದೆ.

100 ವರ್ಷದ ಬಳಿಕ!

1920ರಲ್ಲಿ ಬ್ರಿಟಿಷ್‌ ಆಡಳಿತದಲ್ಲಿ ಮೂಲ ಸರ್ವೇ ನಡೆಸಲಾಗಿತ್ತು. ಬಳಿಕ ನಡೆದಿಲ್ಲ. ಈ 100 ವರ್ಷಗಳಲ್ಲಿ ಭೌಗೋಳಿಕ ಲಕ್ಷಣಗಳಲ್ಲಿ ವ್ಯತ್ಯಾಸ ಗಳಾಗಿವೆ. ಗುಡ್ಡದ ಮೇಲೆ ಸಂಕೋಲೆ ಎಳೆದು ಅಳತೆ ಮಾಡಿದ್ದರೆ ಈಗ ಆ ಗುಡ್ಡವೇ ಇರದು. ಹಾಗಾಗಿ ಈ ಸಮೀಕ್ಷೆಗೆ ಅತ್ಯಂತ ಮಹತ್ವ ಬಂದಿದೆ.

ರಾಮನಗರದ ಉಯ್ಯಂಬಳ್ಳಿಯಲ್ಲಿ ಡ್ರೋನ್‌ ಆಧರಿತ ಪ್ರಾಯೋಗಿಕ ಸಮೀಕ್ಷೆ ಯಶಸ್ವಿಯಾಗಿದೆ. ಹಾಗಾಗಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಅದಕ್ಕಾಗಿ ಸರ್ವೇಯರ್‌ಗಳ ನೇಮಕಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. –ಕೃಷ್ಣ ಭೈರೇಗೌಡ, ಕಂದಾಯ ಸಚಿವರು

ವೇಣುವಿನೋದ್‌ ಕೆ.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next