ಹೊಸದಿಲ್ಲಿ : ಪಾಕ್ ಬೆಂಬಲಿತ ಉಗ್ರ ಸಮೂಹಗಳಿಂದ ಭಾರತದ ಮೇಲೆ ಇನ್ನೊಂದು ಉಗ್ರ ದಾಳಿ ನಡೆದರೆ ಅದಕ್ಕೆ ಪ್ರತೀಕಾರ ತೀರಿಸುವ ಎಲ್ಲ ಆಯ್ಕೆಗಳನ್ನು ಭಾರತ ಮುಕ್ತವಾಗಿ ಇರಿಸಿಕೊಂಡಿದೆ ಎಂಬ ದೃಢ ನಿಲುವನ್ನು ಭಾರತ ಸರಕಾರ ಇಂದು ಪುನರುಚ್ಚರಿಸಿದೆ.
ಪಾಕಿಸ್ಥಾನ ಸರಕಾರ ತನ್ನ ನೆಲದಲ್ಲಿನ ಉಗ್ರರ ಎಲ್ಲ ಮೂಲ ಸೌಕರ್ಯಗಳನ್ನು, ಶಿಬಿರಗಳನ್ನು, ಲಾಂಚ್ ಪ್ಯಾಡ್ ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಲು ದೃಡವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಡವನ್ನು ಭಾರತ ಸರಕಾರ ಮುಂದುವರಿಸಲಿದೆ ಎಂದು ಮೂಲಗಳು ಹೇಳಿವೆ.
ಭಾರತದ ವಿರುದ್ಧ ಪಾಕಿಸ್ಥಾನ ಎಫ್-16 ಫೈಟರ್ ಜೆಟ್‌ಗಳನ್ನು ಬಳಸಿರುವ ಸಾಕ್ಷ್ಯಗಳನ್ನು ಭಾರತ ಸರಕಾರ ಅಮೆರಿಕಕ್ಕೆ ನೀಡಿದೆ. ಅಂತೆಯೇ ಅಮೆರಿಕ ಈ ವಿಷಯವನ್ನು ಕೂಲಂಷವಾಗಿ ಪರಿಶೀಲಿಸುತ್ತಿದೆ. ತಾನು ಪಾಕಿಸ್ಥಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ನೀಡಿದುದು ಉಗ್ರರ ವಿರುದ್ಧದ ಹೋರಾಟಕ್ಕೆಯೇ ಹೊರತು ಭಾರತ ಸಹಿತ ಯಾವುದೇ ದೇಶದ ವಿರುದ್ಧ ಬಳಸಲು ಅಲ್ಲ ಎಂದು ಅಮೆರಿಕ ಈಗಾಗಲೇ ಹೇಳಿದೆ.
ಭಾರತದ ವಿರುದ್ಧ ಪಾಕಿಸ್ಥಾನದ ಬಳಸಿದ ಎಫ್-16 ಯುದ್ಧ ವಿಮಾನಗಳಲ್ಲಿ ಒಂದನ್ನು ಭಾರತದ ಧೀರ ಪೈಲಟ್ ಅಭಿನಂದನ್ ವರ್ಧಮಾನ್ ಚಲಾಯಿಸುತ್ತಿದ್ದ ಮಿಗ್ ಫೈಟರ್ ಜೆಟ್ ಹೊಡೆದುರುಳಿಸಿದ್ದು ಅದರ ಅವಶೇಷಗಳನ್ನು ಮತ್ತು ವಿದ್ಯುನ್ನಾನ ಹೆಗ್ಗುರುತನ್ನು ಭಾರತ ಅಮೆರಿಕಕ್ಕೆ ಸಾಕ್ಷ್ಯವಾಗಿ ನೀಡಿದೆ.
ಪಾಕಿಸ್ಥಾನದಲ್ಲಿ ಈಗಲೂ 16 ಸಕ್ರಿಯ ಉಗ್ರ ತರಬೇತಿ ಶಿಬಿರಗಳಿದ್ದು ಇವುಗಳಲ್ಲಿ 11 ಪಿಓಕೆಯಲ್ಲೂ ಉಳಿದ ಐದು ಮನ್‌ಶೇರಾ ವಲಯದಲ್ಲೂ ಇರುವುದಾಗಿ ಭಾರತೀಯ ಗುಪ್ತ ಚರ ದಳ ಇಂದು ಮುನ್ನೆಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಾಕ್ ಉಗ್ರ ಶಿಬಿರಗಳ ಮೇಲೆ ಮತ್ತೆ ವಾಯು ದಾಳಿ ನಡೆಸುವ ದೃಢ ಸಂಕಲ್ಪವನ್ನು ಭಾರತ ಸರಕಾರ ಇಂದು ಪುನರುಚ್ಚರಿಸಿರುವುದು ಗಮನಾರ್ಹವಾಗಿದೆ ಎಂದು ವರದಿಗಳು ಹೇಳಿವೆ.