ಒಬ್ಬೊಬ್ಬರದ್ದು ಒಂದೊಂದು ಖಯಾಲಿ. ಅದು ಸಿನಿಮಾರಂಗದಲ್ಲಂತೂ ಅತಿಯಾಗಿರುತ್ತೆ. ಆ ಸಾಲಿಗೆ “ದರ್ಪಣ’ ಎಂಬ ಚಿತ್ರ ನಿರ್ದೇಶಕ ಹೊಸ ಸೇರ್ಪಡೆ ಅನ್ನಬಹುದು. ಇಲ್ಲೀಗ ಹೇಳ ಹೊರಟಿರುವ ವಿಷಯ, ನಿರ್ದೇಶಕ 16 ವಿಭಾಗದಲ್ಲೂ ಕೆಲಸ ಮಾಡುವ ಸೈ ಎನಿಸಿಕೊಂಡಿದ್ದಾರೆ. ಗಿನ್ನಿಸ್ ಬುಕ್‌ಗೆ ಅರ್ಹ ಅಂತ ಅರ್ಜಿಯನ್ನೂ ಹಾಕಿದ್ದಾರೆ.
ಆದರೆ, ಆ ಕಡೆಯಿಂದ ಇನ್ನೂ ಸಿಗ್ನಲ್ ಸಿಕ್ಕಿಲ್ಲ. ಇರಲಿ, ದೇವರು ಹಾಗೂ ವಿಜ್ಞಾನ ವಿಷಯ ಕುರಿತು ಹೆಣೆದಿರುವ “ದರ್ಪಣ’ ಚಿತ್ರಕ್ಕೆ ಸಂಗೀತ, ಸಂಕಲನ, ಛಾಯಗ್ರಹಣ, ನೃತ್ಯ, ವಸ್ತ್ರಾಂಲಕಾರ, ಕಲಾ ನಿರ್ದೇಶನ, ಸಾಹಸ, ಸಾಹಿತ್ಯ, ನಿರ್ದೇಶನ ಸೇರಿದಂತೆ 16 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ ಕಾರ್ತಿಕ್ ವೆಂಕಟೇಶ್.
ನಿರ್ದೇಶಕರು ಇಲ್ಲಿ 80 ವರ್ಷದ ವ್ಯಕ್ತಿಯ ಮೆದುಳನ್ನು 20ರ ಯುವಕನಿಗೆ ಅಳವಡಿಸಿದಾಗ ಅವನ ನೆನಪುಗಳು ಮರುಕಳಿಸುತ್ತವೆಯೋ ಇಲ್ಲವೋ ಎಂಬುದು ಕುತೂಹಲದ ವಿಷಯ. ಅಂತಹ ವಿಷಯ ಇಲ್ಲಿದೆ. ಆ ಪ್ರಯತ್ನದಲ್ಲಿ ಹೊಸತನ ಇಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ ನಿರ್ದೇಶಕರು.
ಚಿತ್ರದಲ್ಲಿ ಅರವಿಂದ್ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಮೊದಲರ್ಧದಲ್ಲಿ ಪೊಲೀಸ್ ಅಧಿಕಾರಿಯಾದರೆ, ದ್ವಿತಿಯಾರ್ಧದಲ್ಲಿ ಹೊಸಬಗೆಯ ಗೆಟಪ್‌ನಲ್ಲಿ ಕ್ಯಾಮೆರಾ ಮುಂದೆ ಬರಲಿದ್ದಾರಂತೆ. ಇನ್ನು, ಯತಿರಾಜ್ ನಾಯಕನ ತಂದೆ ಸ್ನೇಹಿತನಾಗಿ ಇಲ್ಲಿ ನಟಿಸಿದ್ದಾರೆ. ದುಬೈ ರಫೀಕ್, ಸಂದೀಪ್ ಮಲಾನಿ, ಕಿರುತೆರೆ ನಟ ಶ್ರೀರಾಮ್ ಇಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ. ಚೈತ್ರಾ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಅವರಿಗೆ ಇದು ಮೊದಲ ಸಿನಿಮಾ. ಎಡ್ವಿನ್ ಡಿಸೋಜ ನಿರ್ಮಾಣ ಮಾಡಿದ್ದಾರೆ. ವಿಶೇಷವೆಂದರೆ, ಇತ್ತೀಚೆಗೆ ಸಾಹಿತ್ಯ ಪರಿಷತ್‌ನಲ್ಲಿ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಲಹರಿ ಸಂಸ್ಥೆ ಈ ಆಡಿಯೋ ಹಕ್ಕು ಖರೀದಿಸಿದ್ದು, ಚಿತ್ರದಲ್ಲಿ ಆರು ಹಾಡುಗಳು ಹೊಸತನದಿಂದ ಕೂಡಿವೆ ಎಂದು ಹೇಳಿಕೊಂಡರು ವೇಲು.