ಬೆಂಗಳೂರು: ಕೇಂದ್ರ ಸರ್ಕಾರವು ಸೆ. 7ರಿಂದ ಮೆಟ್ರೋ ಸೇವೆ ಪುನಾರಂಭಕ್ಕೆ ಅನುಮತಿ ನೀಡಿದೆ. ಸೆ. 5ರಂದು “ನಮ್ಮ ಮೆಟ್ರೋ’ದ ಎಲ್ಲ ರೈಲುಗಳು ಸಂಚರಿಸಲಿವೆ.
ಹೌದು, ಕೋವಿಡ್ ವೈರಸ್‌ಗೂ ಮುನ್ನ ಇದ್ದ ವೇಳಾಪಟ್ಟಿ ಪ್ರಕಾರ ಸೆ. 5ರಂದು ಎಲ್ಲ 50 ಮೆಟ್ರೋ ರೈಲುಗಳ ಪರೇಡ್ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ಧರಿಸಿದೆ. ಆದರೆ ಇದು ಪರೀಕ್ಷಾರ್ಥ ಸಂಚಾರ ಆಗಿರಲಿದ್ದು, ಯಾವುದಾದರೂ ತಾಂತ್ರಿಕ ಸಮಸ್ಯೆಗಳಿದ್ದರೆ ಈ ವೇಳೆ ಸರಿಪಡಿಸಲಾಗುವುದು. ಅಂದು ಬಹುತೇಕ ಎಲ್ಲ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ಬಿಎಂಆರ್‌ಸಿಎಲ್, ಅಧಿಕಾರಿಗಳ ಮಟ್ಟದ ಸಭೆ ನಡೆಸಿತು. ಈ ಸಂದರ್ಭದಲ್ಲಿ ಸೆ. 7ರಿಂದಲೇ ವಾಣಿಜ್ಯ ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳು ಏನು? ಶಿಷ್ಟಾಚಾರಗಳ ಪಾಲನೆ ಹೇಗೆ? ಬಿಬಿಎಂಪಿಯ ಕೋವಿಡ್ ಕರ್ತವ್ಯದಲ್ಲಿರುವ ಸುಮಾರು 550 ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವುದು ಸೇರಿದಂತೆ ವಿವಿಧ ವಿಷಯಗಳ ಚರ್ಚೆ ನಡೆಯಿತು.
ಅಧಿಕೃತ ನಿರ್ದೇಶನ ಸಾಧ್ಯತೆ : “ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದಿಂದ ಒಂದೆರಡು ದಿನಗಳಲ್ಲಿ ಅಧಿಕೃತ ನಿರ್ದೇಶನ ಬರುವ ಸಾಧ್ಯತೆ ಇದೆ. ಜತೆಗೆ ಸೋಂಕು ನಿಯಂತ್ರಣಕ್ಕೆ ಗುಣಮಟ್ಟದ ಕ್ರಮಗಳ (ಎಸ್‌ಒಪಿ) ಬಗ್ಗೆಯೂ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಪೂರ್ವಸಿದ್ಧತೆಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು. ಸೆ. 5ರಂದು ವೇಳಾಪಟ್ಟಿ ಪ್ರಕಾರ ಪರೀಕ್ಷಾರ್ಥವಾಗಿ ಎಲ್ಲ ಮೆಟ್ರೋ ರೈಲುಗಳನ್ನು ಓಡಿಸಲಾಗುವುದು. “ಪೀಕ್ ಅವರ್’ನಲ್ಲಿ 5 ನಿಮಿಷಕ್ಕೊಂದು ಹಾಗೂ ಉಳಿದ ಅವಧಿಯಲ್ಲಿ 10-15 ನಿಮಿಷಗಳ ಅಂತರದಲ್ಲಿ ಈ ರೈಲುಗಳು ಸಂಚರಿಸಲಿವೆ. ಸುಮಾರು 90 ಸುತ್ತುಗಳು ಆಗಬಹುದು’ ಎಂದು ಹೆಸರು ಹೇಳಲಿಚ್ಛಿಸದ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
“ಐದು ತಿಂಗಳ ನಂತರ ವಾಣಿಜ್ಯ ಸೇವೆ ಪುನಾರಂಭಗೊಳ್ಳುತ್ತಿದೆ. ಈ ಅವಧಿಯಲ್ಲಿ ನಿತ್ಯ ಎರಡೂ ಮಾರ್ಗಗಳಲ್ಲಿ ಎರಡು ರೈಲುಗಳು ಪರೀಕ್ಷಾರ್ಥ ಸಂಚಾರ ನಡೆಸುತ್ತಿದ್ದವು. ಆದಾಗ್ಯೂ ಸುರಕ್ಷತೆ ದೃಷ್ಟಿಯಿಂದ ಈ ಪ್ರಯೋಗ ನಡೆಯುತ್ತದೆ ಎಂದೂ ಹೇಳಿದರು.