Advertisement

Udupi: ಅ. 24 ರಿಂದ ಮೂರೂ ದಿನಗಳ ಕಾಲ ಶ್ರೀ ಕೃಷ್ಣನ ಉಡುಪಿಯಲ್ಲಿ ಜ್ಞಾನದ ಹಬ್ಬ

03:37 PM Oct 14, 2024 | Team Udayavani |

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ಶ್ರೀಪಾದರ ಅನುಗ್ರಹದೊಂದಿಗೆ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅಕ್ಟೋಬರ್ 24, 25 ಮತ್ತು 26 ರಂದು ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ (All India Oriental Conference) ನಡೆಯಲಿದೆ.

Advertisement

ಈ ಸಮ್ಮೇಳನದಲ್ಲಿ ಪೇಜಾವರ ಶ್ರೀಪಾದರು, ವಿದ್ಯಾಶ್ರೀಶ ಶ್ರೀಪಾದರು, ಸುಬುಧೇಂದ್ರ ತೀರ್ಥಶ್ರೀಪಾದರು(ಮಂತ್ರಾಲಯ), ಪತಂಜಲಿಯ ಶ್ರೀ ಬಾಬಾ ರಾಮದೇವ, ಶ್ರೀ ಆಚಾರ್ಯ ಬಾಲಕೃಷ್ಣ ಮುಂತಾದ ವಿದ್ವಾಂಸ ಸನ್ಯಾಸಿಗಳೂ ಉಪಸ್ಥಿತರಿರುತ್ತಾರೆ.

ಪತಂಜಲಿಯ ಬಾಬಾ ರಾಮದೇವ್, ಶ್ರೀ ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಮೂರು ದಿನಗಳ ಕಾಲ ಮುಂಜಾನೆ 6ರಿಂದ 7ರ ವರೆಗೆ ಯೋಗ-ಧ್ಯಾನಾದಿ ತರಗತಿಗಳೂ ನಡೆಯುತ್ತವೆ.

ಸುತ್ತಮುತ್ತಲಿನ ಅಷ್ಟಮಠಗಳ ಆವರಣ, ಸಂಸ್ಕೃತ ಕಾಲೇಜು ಮುಂತಾದ ಸ್ಥಳಗಳಲ್ಲಿ ಏಕಕಾಲದಲ್ಲಿ ಶಿಕ್ಷಣ, ಬಾಲಸಾಹಿತ್ಯ, ಕನ್ನಡ, ಸಂಸ್ಕೃತ, ಪಾಲಿ, ಉರ್ದು, ಯೋಗ, ಆಯುರ್ವೇದ ಮುಂತಾದ ಒಟ್ಟು 23 ವಿಷಯಗಳಲ್ಲಿ ಪ್ರತ್ಯೇಕ ವಿಚಾರಸಂಕಿರಣಗಳು ನಡೆಯಲಿವೆ.

ಭಗವದ್ಗೀತೆಯ ವಿಷಯದಲ್ಲಿ ಹಿರಿಯ ವಿದ್ವಾಂಸರಿಂದ ವಿಚಾರ ಮಂಡನೆ ನಡೆಯಲಿದೆ. ಹಾಗೂ ಐ.ಕೆ.ಎಸ್ ಮುಂತಾದ ವಿಷಯಗಳಲ್ಲಿಯೂ ಉನ್ನತ ಸ್ತರದಲ್ಲಿ ವಿಚಾರ ಮಂಡನೆಯ (Plenary Session) ಗಳು ನಡೆಯಲಿವೆ.

Advertisement

ತರುಣರ ಕವಿಗೋಷ್ಠಿ, ಯುವ ವಿದ್ವಾಂಸ-ವಿದುಷಿಯರಿಂದ ವಾಕ್ಯಾರ್ಥ ಗೋಷ್ಠಿಗಳು, ಹಿರಿಯ ಪ್ರಸಿದ್ಧ ವಿದ್ವಾಂಸರಿಂದ ಶಾಸ್ತ್ರಾರ್ಥ ಸಭೆಗಳು ನಡೆಯಲಿವೆ.

ಕರ್ನಾಟಕದ ಪ್ರಸಿದ್ಧ ಅಭಿನವ ನೃತ್ಯ ಅಕಾಡೆಮಿಯಿಂದ ’ತದ್ಭಾರತಂ’ ನೃತ್ಯ, ಉಡುಪಿಯವರಿಂದ ಯಕ್ಷನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಭಾರತದ ಹಲವು ವಿಶ್ವವಿದ್ಯಾಲಯಗಳಿಂದ 18 ಕುಲಪತಿಗಳು ಉಪಸ್ಥಿತರಿರುತ್ತಾರೆ. ಅವರೊಂದಿಗೆ ಸಂವಾದ ಕಾರ್ಯಕ್ರಮಗಳೂ ನಡೆಯಲಿದೆ. ಅಷ್ಟು ಮಾತ್ರವಲ್ಲದೆ ಭಾರತದ ಪ್ರಸಿದ್ಧ ಪ್ರಕಟಣಾ ಸಂಸ್ಥೆಗಳಿಂದ ಪುಸ್ತಕ ಪ್ರದರ್ಶನ, ಮಾರಾಟವೂ ನಡೆಯಲಿದೆ. ಪ್ರಸಿದ್ಧ ವಿದ್ವಾಂಸರ 25 ನೂತನ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಗಳೂ ನಡೆಯಲಿದೆ.

ಭಾರತದ ಹಲವು ಭಾಗಗಳಿಂದ ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದ 2000ಕ್ಕೂ ಹೆಚ್ಚು ಶ್ರೇಷ್ಠ ವಿದ್ವಾಂಸರು ಆಗಮಿಸಿ, ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.

ಅಖಿಲ ಭಾರತ ಪ್ರಾಚ್ಯವಿದ್ಯಾ ಸಮ್ಮೇಳನ (All India Oriental Conference) ಪ್ರಾರಂಭವಾಗಿ ಇಲ್ಲಿಗೆ 102 ವರ್ಷಗಳು ಸಂದಿವೆ. ಅನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಸಂಸ್ಥೆಯ ಅಧಿವೇಶನ ಭಾರತದ ವಿವಿಧ ಸ್ಥಳಗಳಲ್ಲಿ ನಡೆದು ಬಂದಿದೆ. ಇಲ್ಲಿಯ ತನಕ 50 ಅಧಿವೇಶನಗಳು ನಡೆದಿದ್ದು, 51ನೇ ಅಧಿವೇಶನ ಇದೀಗ ಉಡುಪಿಯಲ್ಲಿ ನಡೆಯುತ್ತಿದೆ. ಇಲ್ಲಿಯತನಕ ಕೇವಲ ಉತ್ತರಭಾರತದಲ್ಲಿಯೇ ನಡೆಯುತ್ತಿದ್ದ ಈ ಸಮ್ಮೇಳನ ಪ್ರಪ್ರಥಮ ಭಾರಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವುದು, ಅದರಲ್ಲೂ ಕರ್ನಾಟಕದ ಆಚಾರ್ಯಮಧ್ವರ ಅವತಾರ ಭೂಮಿಯಾದ ಉಡುಪಿಯಲ್ಲಿ ನಡೆಯುತ್ತಿರುವುದು ವಿಶೇಷವಾಗಿದೆ. ಇದೊಂದು ಅಕ್ಷರಶಃ ಅಕ್ಷರ ಹಬ್ಬವಾಗಿದೆ.

ಬೆಂಗಳೂರಿನ ಭಾರತೀಯ ವಿದ್ವತ್ ಪರಿಷತ್ತು, ಪರ್ಯಾಯ ಶ್ರೀಪುತ್ತಿಗೆ ಮಠ ಮತ್ತು ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ. ಹಲವು ದಶಕಗಳ ಅನಂತರ ಈ ಸಮ್ಮೇಳನವು ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ನಡೆಯುತ್ತಿರುವುದು ಬಹಳ ಮುಖ್ಯ ವಿಷಯವಾಗಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next