Advertisement

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಪಸ್ವರ 

11:44 AM Nov 04, 2017 | |

ಮೈಸೂರು: 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತಿರುವ ನಡುವೆಯೂ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಡೆದಿರುವ ಹಗರಣಗಳ ತನಿಖೆ ಬಳಿಕವೇ ಸಮ್ಮೇಳನ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡಪರ ಸಂಘಟನೆಗಳು ನಿರ್ಧರಿಸಿವೆ.

Advertisement

ನಗರದ ನಾಗನವ ಕಲಾ ಸಾಹಿತ್ಯ ವೇದಿಕೆ ಹಾಗೂ ಸಿರಿಗನ್ನಡ ವೇದಿಕೆಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾಮಂಟಪದಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆಗಳ ಸದಸ್ಯರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು, ಅವ್ಯವಹಾರ ಮಾಡಿರುವ ತಂಡವೇ ಸಮ್ಮೇಳನ ನಡೆಸಲು ಮುಂದಾಗಿದೆ.

ಸಮ್ಮೇಳನದಲ್ಲೂ ಅವ್ಯವಹಾರ ನಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಜಿಲ್ಲಾ ಕಸಾಪದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು. ಇದಾದ ನಂತರವಷ್ಟೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಜಿಲ್ಲಾಡಳಿತ ಹಾಗೂ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು. 

10 ಕೋಟಿ ಏಕೆ?: ಮೈಸೂರಿನಲ್ಲಿ ಹತ್ತು ದಿನಗಳ ಕಾಲ ನಡೆಯುವ ನಾಡಹಬ್ಬ ದಸರೆಗಾಗಿ 10-14 ಕೋಟಿ ರೂ. ವೆಚ್ಚವಾಗಲಿದೆ. ಆದರೆ, 3 ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನಕ್ಕೆ 10 ಕೋಟಿ ರೂ.ಗಳ ಅಗತ್ಯವಿರುವ ಬಗ್ಗೆಯೂ ಚರ್ಚೆ ನಡೆಯಿತು. ಈ ವೇಳೆ ಸಮ್ಮೇಳನಕ್ಕೆ ಸರ್ಕಾರ 5 ಕೋಟಿ ರೂ.ಗಿಂತ ಹೆಚ್ಚು ನೀಡದಂತೆ ಒತ್ತಾಯಿಸಲಾಯಿತು.

ಅಲ್ಲದೆ ಭ್ರಷ್ಟಾಚಾರದ ಆರೋಪವಿದ್ದರೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ಒಗ್ಗೂಡಿ ಪರ್ಯಾಯ ಸಮ್ಮೇಳನ ನಡೆಸುವ ಬಗ್ಗೆ ಸಲಹೆಗಳು ವ್ಯಕ್ತವಾಯಿತು. ಆದರೆ ಪರ್ಯಾಯ ಸಮ್ಮೇಳನ ನಡೆಸಲು ಹೆಚ್ಚು ಕಾಲಾವಕಾಶ ಇಲ್ಲದ ಕಾರಣ ಈ ಸಲಹೆಯನ್ನು ಕೈ ಬಿಡಲಾಯಿತು.

Advertisement

ಇನ್ನು ಅವ್ಯವಹಾರ ತನಿಖೆ ನಡೆಸಲು ಆಸಕ್ತಿ ತೋರದೆ ಜಿಲ್ಲಾ ಕಸಾಪದಲ್ಲಿ ಅವ್ಯವಹಾರ ನಡೆದಿಲ್ಲ ಎಂದು ಹೇಳಿರುವ ಕಸಾಪ ರಾಜಾಧ್ಯಕ್ಷ ಮನು ಬಳಿಗಾರ್‌ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಸಭೆಯಲ್ಲಿ ಸಾಹಿತಿಗಳಾದ ಬನ್ನೂರು ಕೆ.ರಾಜು, ಜೋಗನಹಳ್ಳಿ ಗುರುಮೂರ್ತಿ, ಇತಿಹಾಸತಜ್ಞ ಪ್ರೊ.ನಂಜರಾಜೇ ಅರಸ್‌, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಸಿರಿಗನ್ನಡ ವೇದಿಕೆ ರಾಜಾಧ್ಯಕ್ಷ ವೆಂಕಟರಾಮಯ್ಯ, ಜಿಲ್ಲಾಧ್ಯಕ್ಷ ವಿಠಲಮೂರ್ತಿ ಮತ್ತಿತರರಿದ್ದರು.  

ಸಭೆಯಲ್ಲಿ ಕೇಳಿ ಬಂದ ವಿಷಯ
-ಜಿಲ್ಲಾ ಕಸಾಪದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಬೇಕು.
-ಅವ್ಯವಹಾರದ ಬಗ್ಗೆ ಸಚಿವರು, ಸಿಎಂಗೆ ಮನವಿ ಸಲ್ಲಿಸಲು ನಿರ್ಧಾರ.
-ಸರ್ಕಾರ ಮನವಿಗೆ ಸ್ಪಂದಿಸದಿದ್ದರೆ ಪ್ರತಿಭಟನೆ, ಕರಪತ್ರ ಮನೆ ಮನೆಗೆ ಹಂಚಲು ತೀರ್ಮಾನ.
-ಕಸಾಪ ರಾಜಾಧ್ಯಕ್ಷ ಮನು ಬಳಿಗಾರ್‌ ವಿರುದ್ಧ ಆಕ್ರೋಶ.

Advertisement

Udayavani is now on Telegram. Click here to join our channel and stay updated with the latest news.

Next