ಕಾಸರಗೋಡು: ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಉತ್ತಮ ಆದರ್ಶ ಮತ್ತು ಶ್ರೇಷ್ಠ ಜೀವನಶೈಲಿಯು ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಆದುದರಿಂದ ಅವರ ತತ್ವಾದರ್ಶಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಅಲ್ಲದೆ ಪಕ್ಷವನ್ನು ಬಲಿಷ್ಠಗೊಳಿಸಲು ಅವಿರತ ಶ್ರಮಿಸಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ, ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ.
ಭಾರತೀಯ ಜನಸಂಘದ ಅಧ್ಯಕ್ಷರಾಗಿದ್ದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮದಿನಾಚರಣೆಯ ಅಂಗವಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಜಿಲ್ಲಾ ಕಾರ್ಯಾ ಲಯದಲ್ಲಿ ಜರಗಿದ ಸಂಸ್ಮರಣ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಸಕ, ಸಂಸದರ ಸಹಿತ ಯಾವುದೇ ರಾಜಕೀಯ ಅಧಿಕಾರ ಕೇಂದ್ರದಲ್ಲಿ ದೀನ್‌ದಯಾಳ್ ಅವರು ಕಾರ್ಯವೆಸಗಲಿಲ್ಲ. ಅಲ್ಲದೆ ಅದಕ್ಕಾಗಿ ಆಸೆಪಟ್ಟವರೂ ಅಲ್ಲ. ಇಂದು ದೇಶದ ಹಲವೆಡೆ ಹಲವಾರು ಮಾಜಿ ಪ್ರಧಾನಿಗಳನ್ನು ನೆನಪಿಸುತ್ತಿಲ್ಲ.
ಆದರೆ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರನ್ನು ರಾಷ್ಟ್ರದಾದ್ಯಂತ ಸ್ಮರಿಸಲಾಗುತ್ತಿದೆ. ಇದಕ್ಕೆ ಅವರ ಉನ್ನತ ವ್ಯಕ್ತಿತ್ವ ಮತ್ತು ನಿಷ್ಕಲ್ಮಶ ಜೀವನೇ ಕಾರಣ ಎಂದರವರು.ಭಾರತದ ಅಖಂಡತೆ ಬಿಜೆಪಿ ಗುರಿ ಯಾಗಿದೆ. ಈ ನಿಟ್ಟಿನಲ್ಲಿ ಪಕ್ಷವು ಅವಿರತ ಶ್ರಮಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಕೇಂದ್ರ ಸರಕಾರದ ಜನಪರ ಹಾಗೂ ಅಭಿವೃದ್ಧಿಪರ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸೇವೆ ಸಲ್ಲಿಸಬೇಕು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದೇಶವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಿರುವುದು ಎಲ್ಲೆಡೆಯಿಂದಲೂ ಶ್ಲಾಘನೆಗೆ ಕಾರಣ ವಾಗಿದೆ ಎಂದು ತಿಳಿಸಿದರು.
ದೀನ್‌ದಯಾಳ್‌ಜೀ ಅವರು ತಮ್ಮ ಬದುಕನ್ನು ದೇಶಕ್ಕಾಗಿ ಸಮರ್ಪಿಸಿ ದ್ದರು. ಅವರು ಕಮ್ಯೂನಿಸಂ ಹಾಗೂ ಬಂಡವಾಳ ಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಓರ್ವ ಧೀಮಂತ ನೇತಾರ. ಏಕಾತ್ಮತಾ ಮಾನವವಾದ ದರ್ಶನವನ್ನು ಎತ್ತಿಹಿಡಿದು ಭಾರತೀಯ ನೈತಿಕತೆ ಮತ್ತು ಮಾನವೀಯ ಬೆಳಕನ್ನು ಜಗತ್ತಿನ ಮುಂದೆ ಪ್ರಚುರಪಡಿಸಿದ ಪ್ರಮುಖ ಎಂದರು.
ಜನಸಂಘವನ್ನು ಉನ್ನತ ಶ್ರೇಣಿಗೆ ತಲುಪಿಸುವಲ್ಲಿ ಅವರು ಅವಿರತ ಪ್ರಯತ್ನ ನಡೆಸಿದ್ದಲ್ಲದೆ ಪ್ರಮುಖ ಪಾತ್ರವನ್ನೂ ವಹಿಸಿದ್ದಾರೆ. ಇದಲ್ಲದೆ ನಾಯಕತ್ವ ಬೆಳೆಸುವಲ್ಲಿಯೂ ಮುಖ್ಯ ಪಾತ್ರ ವಹಿಸಿದ್ದಾರೆ. ಬಿಜೆಪಿ ಇಂದು ನಮ್ಮ ದೇಶದ ಅತೀ ದೊಡ್ಡ ಪಕ್ಷವಾಗಿ ಬೆಳೆಯಲು ಪಂಡಿತ್ ಉಪಾಧ್ಯಾಯರ ಪಾತ್ರ, ತ್ಯಾಗ ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ನಾವು ಅವರ ದೇಣಿಗೆಯನ್ನು ಮರೆಯುವಂತಿಲ್ಲ ಎಂದು ಕೆ. ಶ್ರೀಕಾಂತ್ ಹೇಳಿದರು.
ಬಿಜೆಪಿ ಕೇರಳ ರಾಜ್ಯ ಉಪಾಧ್ಯಕ್ಷೆ ಪ್ರಮೀಳಾ ಸಿ. ನಾೖಕ್, ರಾಜ್ಯ ಸಮಿತಿಯ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ರಮೇಶ್ ಮಾತನಾಡಿದರು. ಪ್ರಮುಖರಾದ ನ್ಯಾಯವಾದಿ ಎ. ಸದಾನಂದ ರೈ, ಶಿವಕೃಷ್ಣ ಭಟ್ ಬಳಕ್ಕ, ಸವಿತಾ ಟೀಚರ್, ಜಿ. ಚಂದ್ರನ್ ಕಡಪ್ಪುರ, ಕೋಳಾರು ಸತೀಶ್ಚಂದ್ರ ಭಂಡಾರಿ, ಸರೋಜಾ ಆರ್. ಬಲ್ಲಾಳ್, ಎಸ್. ಕುಮಾರ್, ಎ.ಪಿ. ಹರೀಶ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಬಾಲರಾಜ್ ವಂದಿಸಿದರು.