Advertisement

ಸಿಲಿಕಾನ್‌ ಸಿಟಿಯಲ್ಲಿ ಸರ್ವವೂ ಸ್ತ್ರೀಮಯ

11:52 AM Mar 09, 2018 | Team Udayavani |

ಬೆಂಗಳೂರು: ನಗರದ ವಿವಿಧೆಡೆ ಮಹಿಳಾ ದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಮೆಟ್ರೋ, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣ, ಸರ್ಕಾರಿ ಕಚೇರಿಗಳು, ಖಾಸಗಿ ಕಂಪೆನಿಗಳು ಮಹಿಳಾಮಯ ಆಗಿದ್ದವು. 

Advertisement

ನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಾಣಸವಾಡಿ ರೈಲ್ವೆ ನಿಲ್ದಾಣವನ್ನು ಸಂಪೂರ್ಣ ಮಹಿಳೆಯರೇ ನಿರ್ವಹಣೆ ಮಾಡಿದರೆ, ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಮಹಿಳಾ ಸಿಬ್ಬಂದಿಯನ್ನು ಗೌರವಿಸಲಾಯಿತು. ಬಿಬಿಎಂಪಿ, “ನಮ್ಮ ಮೆಟ್ರೋ’ ಬೈಯಪ್ಪನಹಳ್ಳಿಯಲ್ಲಿ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.  

ಕೆಎಸ್‌ಆರ್‌ಟಿಸಿ: ನಿಗದಮ ಎಲ್ಲ ಬಸ್‌ ನಿಲ್ದಾಣಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ಹಾಗೂ ಮಕ್ಕಳ ಪೋಷಣಾ ಕೇಂದ್ರ ಸೌಲಭ್ಯ ಕಲ್ಪಿಸಲಾಗುವುದು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಉಮಾಶಂಕರ್‌ ತಿಳಿಸಿದ್ದಾರೆ.

ನೌಕರರ ಆರೋಗ್ಯ ಭದ್ರತೆ ದೃಷ್ಟಿಯಿಂದ 40 ವರ್ಷ ಮೇಲ್ಪಟ್ಟ ನೌಕರರಿಗೆ ಪ್ರತಿ ವರ್ಷ ಹೃದ್ರೋಗ ತಪಾಸಣೆ ಮಾಡಿಸಲು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೊಂದಿಗೆ ಐದು ವರ್ಷಗಳ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ನಿಗಮದ 15 ಸಾವಿರಕ್ಕೂ ಅಧಿಕ ನೌಕರರಿಗೆ ಉಚಿತ ಆರೋಗ್ಯ ಸೌಲಭ್ಯ ಲಭ್ಯವಾಗಲಿದೆ ಎಂದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ಮಾತನಾಡಿದರು.

ಇದೇ ವೇಳೆ ಕೆಎಸ್‌ಆರ್‌ಟಿಸಿಯಿಂದ ಜಯದೇವ ಹೃದ್ರೋಗ ಆಸ್ಪತ್ರೆಗೆ “2ಡಿ ಕಲರ್‌ಡೋಪ್ಲರ್‌ ಎಕೋಕಾರ್ಡಿಯೋಗ್ರಾಮ್‌ ಯಂತ್ರ’ ಖರೀದಿಗೆ 40 ಲಕ್ಷ ರೂ. ದೇಣಿಗೆ ನೀಡಲಾಯಿತು. ನಿಗಮದ ಸಿಬ್ಬಂದಿ ಮತ್ತು ಪರಿಸರ ವಿಭಾಗದ ನಿರ್ದೇಶಕ ಶ್ರೀನಿವಾಸ್‌, ಅಧ್ಯಕ್ಷ ಗೋಪಾಲ ಪೂಜಾರಿ, ಸೂಲಗಿತ್ತಿ ನರಸಮ್ಮ, ಶಿಕ್ಷಕಿ ಅನಿತಾ ಮೇರಿ ಮತ್ತಿತರರು ಉಪಸ್ಥಿತರಿದ್ದರು.

Advertisement

ಮಹಿಳಾ ದಿನಾಚರಣೆ ಅಂಗವಾಗಿ ಕೆಎಸ್‌ಆರ್‌ಟಿಸಿಯು ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರಿಗೆ 25 ಸಾವಿರ ನಗದು ಜತೆಗೆ ಜೀವಿತಾವಧಿಯ ಉಚಿತ ಪ್ರಯಾಣಕ್ಕೆ “ಗೋಲ್ಡನ್‌ ಪಾಸು’ ನೀಡಿ ಗೌರಿವಿಸಲಾಯಿತು. ಭದ್ರಾವತಿ ಸರ್ಕಾರಿ ಶಾಲಾ ಶಿಕ್ಷಕಿ ಅನಿತಾ ಮೇರಿ ಅವರಿಗೆ 25 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ ನಿಗಮದ ವಿವಿಧ ವಿಭಾಗಗಳ 50 ಮಂದಿ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಬಿಎಂಟಿಸಿ: ಸಂಸ್ಥೆಯಲ್ಲಿ ಕಾರ್ಯನಿರ್ವಸುತ್ತಿರುವ 57 ಉತ್ತಮ ಕಾರ್ಯಕ್ಷಮತೆ ಹೊಂದಿರುವ ಮಹಿಳಾ ಸಿಬ್ಬಂದಿಗೆ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಅಧ್ಯಕ್ಷ ಎಂ. ನಾಗರಾಜು (ಯಾದವ್‌), ಹಣಕಾಸು ಇಲಾಖೆ (ವೆಚ್ಚ) ಕಾರ್ಯದರ್ಶಿ ಏಕ್‌ರೂಪ್‌ ಕೌರ್‌, ವ್ಯವಸ್ಥಾಪಕ ನಿರ್ದೇಶಕ ವಿ. ಪೊನ್ನೂರಾಜ್‌, ನಿರ್ದೇಶಕರಾದ ಎ.ಎನ್‌. ಪ್ರಕಾಶ್‌ಗೌಡ, ಲಲಿತಮ್ಮ ಮತ್ತಿತರರು ಉಪಸ್ಥಿರಿದ್ದರು. 

ನೈರುತ್ಯ ರೈಲ್ವೆ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮೂರು ಪಾಳಿಯಲ್ಲಿ ಬಾಣಸವಾಡಿ ರೈಲ್ವೆ ನಿಲ್ದಾಣವನ್ನು ಮಹಿಳಾ ಸಿಬ್ಬಂದಿ ನಿರ್ವಹಿಸಿದರು. ಟಿಕೆಟ್‌ ವಿತರಣೆ, ಹಳಿ ತಪಾಸಣೆ, ರಿಸರ್ವೇಶನ್‌, ಭದ್ರತೆ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದಾರೆ. ಅಂತೆಯೆ ಸದಾ ಪುರುಷ ಸಿಬ್ಬಂದಿ ಕಾರ್ಯ ನಿರ್ವಹಿಸುವ ಬೆಂಗಳೂರು-ಖಾನಾಪುರ ನಡುವೆ ಸಂಚರಿಸುವ ಸಂಗಮಿತ್ರಾ ಎಕ್ಸ್‌ಪ್ರೆಸ್‌ ರೈಲಿನಲ್ಲೂ ಮಹಿಳಾ ಸಿಬ್ಬಂದಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. 

ಕೌಶಲ್ಯಾಭಿವೃದ್ಧಿ ಮಂಡಳಿ: ನಗರದ ಬಸವನಗುಡಿಯಲ್ಲಿ ಆರ್‌.ವಿ. ದೇವರಾಜ್‌ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಡಳಿ ಅಧ್ಯಕ್ಷ ಆರ್‌.ವಿ. ದೇವರಾಜ್‌, ರಾಜ್ಯದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹಳ ಪ್ರಮುಖ ಎಂದರು. ಪ್ರತಿಷ್ಠಾನದ ಅಧ್ಯಕ್ಷೆ ಮಮತಾ ದೇವರಾಜ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next