ಕಾಠ್ಮಂಡು: ನೇಪಾಳದ ರಾಜಧಾನಿ ಕಾಠ್ಮಂಡು ಮತ್ತು ಪ್ರವಾಸಿ ಪಟ್ಟಣ ಪೊಖರಾದಲ್ಲಿ ಸೀತೆಯನ್ನು “ಭಾರತದ ಮಗಳು” ಎಂದು ಉಲ್ಲೇಖಿಸುವುದು ಸೇರಿದಂತೆ ಅದರ ಸಂಭಾಷಣೆಯ ವಿವಾದದ ನಂತರ “ಆದಿಪುರುಷ್” ಸೇರಿದಂತೆ ಎಲ್ಲಾ ಹಿಂದಿ ಚಲನಚಿತ್ರಗಳನ್ನು ಸೋಮವಾರ ನಿಷೇಧಿಸಲಾಗಿದೆ.
ಕಾಠ್ಮಂಡುವಿನ 17 ಸಿನಿಮಾ ಹಾಲ್ ಗಳಲ್ಲಿ ಯಾವುದೇ ಹಿಂದಿ ಚಿತ್ರ ಪ್ರದರ್ಶನವಾಗದಂತೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
‘ಆದಿಪುರುಷ್’ ದಲ್ಲಿನ ‘ಜಾನಕಿ ಭಾರತದ ಮಗಳು’ ಎಂಬ ಸಂಭಾಷಣೆಯನ್ನು ನೇಪಾಳದಲ್ಲಿ ಮಾತ್ರವಲ್ಲದೆ ಭಾರತದಲ್ಲಿಯೂ ತೆಗೆದು ಹಾಕುವವರೆಗೆ ಕಾಠ್ಮಂಡು ಮೆಟ್ರೋಪಾಲಿಟನ್ ಸಿಟಿಯಲ್ಲಿ ಯಾವುದೇ ಹಿಂದಿ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾಠ್ಮಂಡು ಮೇಯರ್ ಬಾಲೇಂದ್ರ ಶಾ ಭಾನುವಾರ ಹೇಳಿದ್ದಾರೆ. ರಾಮಾಯಣದ ಸೀತೆ ಆಗ್ನೇಯ ನೇಪಾಳದ ಜನಕಪುರದಲ್ಲಿ ಜನಿಸಿದಳು ಎಂದು ಹಲವರು ನಂಬುತ್ತಾರೆ.
ವಿವಾದ ಹುಟ್ಟಿಸಿರುವ “ಆದಿಪುರುಷ್” ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದು, ಪ್ರಭಾಸ್ ಮತ್ತು ಕೃತಿ ಸನೋನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ:‘ಚಾಂದಿನಿ ಬಾರ್’ನಲ್ಲಿ 50 ದಿನ: ಸದ್ದಿಲ್ಲದೆ ಅರ್ಧಶತಕ ಬಾರಿಸಿದ ಹೊಸಬರ ಚಿತ್ರ
‘ಆದಿಪುರುಷ’ ಚಿತ್ರದ ಸಂಭಾಷಣೆಯಲ್ಲಿನ ಆಕ್ಷೇಪಾರ್ಹ ಪದಗಳನ್ನು ಇನ್ನೂ ತೆಗೆದುಹಾಕದ ಕಾರಣ, ಜೂನ್ 19, ಸೋಮವಾರದಿಂದ ಕಠ್ಮಂಡು ಮೆಟ್ರೋಪಾಲಿಟನ್ ಸಿಟಿಯಲ್ಲಿ ಎಲ್ಲಾ ಹಿಂದಿ ಚಲನಚಿತ್ರಗಳ ಪ್ರದರ್ಶನವನ್ನು ನಿರ್ಬಂಧಿಸಲಾಗುತ್ತದೆ” ಎಂದು ಕಾಠ್ಮಂಡು ಮೇಯರ್ ಭಾನುವಾರ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
‘ಸೀತೆ ಭಾರತದ ಮಗಳು’ ಎಂಬ ಆಕ್ಷೇಪಾರ್ಹ ಸಂಭಾಷಣೆಯ ಭಾಗವನ್ನು ಮೂರು ದಿನಗಳಲ್ಲಿ ಚಲನಚಿತ್ರದಿಂದ ತೆಗೆದುಹಾಕಲು ನಾವು ಈಗಾಗಲೇ ಮೂರು ದಿನಗಳ ಹಿಂದೆ ನೋಟಿಸ್ ನೀಡಿದ್ದೇವೆ” ಎಂದು ಅವರು ಹೇಳಿದರು.