Advertisement

ಶುಕ್ರವಾರದ  ಪ್ರದರ್ಶನಗಳೆಲ್ಲಾ ಹೌಸ್‌ಫುಲ್‌; ಗೋವಾ ಚಿತ್ರೋತ್ಸವದಲ್ಲಿ ವಾರಾಂತ್ಯ ಮ್ಯಾಜಿಕ್‌

12:47 PM Nov 25, 2019 | Nagendra Trasi |

ಪಣಜಿ: ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಇಫಿ] ಯಲ್ಲಿ ಮೂರನೇ ದಿನವಾದ ಶುಕ್ರವಾರದ ಬಹುತೇಕ ಪ್ರದರ್ಶನಗಳು ಹೌಸ್‌ಫುಲ್‌ ಆಗಿವೆ.

Advertisement

ಎರಡನೆ ದಿನವಾದ ಗುರುವಾರ ಚಟುವಟಿಕೆಗಳು ಹೆಚ್ಚಿದ್ದರೂ ಸಿನಿ ಪ್ರೇಕ್ಷಕರು ಬಹಳ ದೊಡ್ಡ ಸಂಖ್ಯೆಯಲ್ಲಿ ಕಂಡು ಬರಲಿಲ್ಲ. ಸ್ಥಳೀಯರ ಪಾಲ್ಗೊಳ್ಳುವಿಕೆಯೂ ಕಡಿಮೆ ಇತ್ತು. ಶುಕ್ರವಾರದಿಂದ ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. ಶುಕ್ರವಾರ, ಶನಿವಾರ ಮತ್ತು ಭಾನುವಾರ ವಾರಾಂತ್ಯವಾಗಿರುವ ಕಾರಣ, ಸ್ಥಳೀಯರು ಮತ್ತು ಹೊರಗಿನ ಪ್ರತಿನಿಧಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಹೌಸ್‌ಫುಲ್‌

ಗುರುವಾರ ಬೆಳಗ್ಗೆಯೇ ಟಿಕೆಟ್‌ ಕೌಂಟರ್‌ಗಳಲ್ಲಿ ಶುಕ್ರವಾರದ ಬುಕ್ಕಿಂಗ್‌ ಗೆ ಸಾಕಷ್ಟು ಸಂಖ್ಯೆಯ ಪ್ರೇಕ್ಷಕರಿದ್ದರೂ ಆಯೋಜಕರಿಂದ ಬರುತ್ತಿದ್ದ ಒಂದೇ ಉತ್ತರವೆಂದರೆ ‘ಹೌಸ್‌ಫುಲ್‌‘. ಮಧ್ಯಾಹ್ನದ ಹೊತ್ತಿಗೆ ಟಿಕೆಟ್‌ ಕೌಂಟರ್‌ ಎದುರು ಟಿಕೆಟ್‌ ಲಭ್ಯವಿಲ್ಲದ ಸಿನಿಮಾಗಳ ಕ್ರಮ ಸಂಖ್ಯೆಯನ್ನು ಬರೆಯಲಾಗಿತ್ತು. ಸಂಜೆಯ ಹೊತ್ತಿಗೆ ಇಡೀ ವೇಳಾಪಟ್ಟಿಯನ್ನು ತೂಗಿ ಹಾಕಿ, ಅದರಲ್ಲಿ ಪ್ರಮುಖ ಐದು ಚಿತ್ರಮಂದಿರಗಳ [ಐನಾಕ್ಸ್‌ ಒಂದರಿಂದ ೪ ಮತ್ತು ಕಲಾ ಅಕಾಡೆಮಿ] ಲ್ಲಿ ಲಭ್ಯವಿದ್ದ ಬಹುತೇಕ ಎಲ್ಲ ಚಿತ್ರಗಳಿಗೂ ಹೌಸ್‌ಫುಲ್‌ ಎಂದು ಬರೆಯಲಾಗಿತ್ತು.

ಒಳ್ಳೆ ಸಿನಿಮಾಗಳು : ಟಿಕೆಟ್‌ ಇಲ್ಲ

Advertisement

ಶುಕ್ರವಾರ ಸಾಕಷ್ಟು ಒಳ್ಳೆಯ ಸಿನಿಮಾಗಳಿವೆ, ಆದರೆ ಟಿಕೆಟ್‌ ಸಿಗುತ್ತಿಲ್ಲ ಎಂದು ಹೇಳಿದವರು ಮುಂಬಯಿಯ ಸಿನಿ ಉತ್ಸಾಹಿಯೊಬ್ಬರು.‘ನಾವು ಹಲವು ವರ್ಷಗಳಿಂದ ಉತ್ಸಾಹದಿಂದ ಭಾಗವಹಿಸುತ್ತಿದ್ದೇವೆ. ನಮಗೆ ಆನ್‌ಲೈನ್‌ ಇತ್ಯಾದಿ ಬಾರದು. ಹಾಗಾಗಿ ಟಿಕೆಟ್‌ ಕೌಂಟರ್‌ಗಳಿಗೇ ಬಂದು ಮಾಡಬೇಕು. ಮನೆಯಲ್ಲಿ ಲೆಕ್ಕ ಹಾಕಿಕೊಂಡು, ಗುರುತು ಹಾಕಿಕೊಂಡು ಇಲ್ಲಿಗೆ ಬರುವಾಗ ಅವೆಲ್ಲವೂ ಹೌಸ್‌ಫುಲ್‌ ಆಗಿರುತ್ತದೆ..ಆಗ ಏನು ಮಾಡುವುದು?’ ಎಂದು ಪ್ರಶ್ನಿಸುತ್ತಾರೆ. ಈ ಅಭಿಪ್ರಾಯ ಬಹುತೇಕರಿಂದ ವ್ಯಕ್ತವಾಯಿತು.

ಕಾಸ್ತಾ ಗವ್ರಾಸ್‌ ಅತಿ ನಿರೀಕ್ಷಿತ ಸಿನಿಮಾ

ಶುಕ್ರವಾರದ ಮಾಸ್ಟರ್‌ ಫ್ರೇಮ್ಸ್‌ ವಿಭಾಗದಲ್ಲಿ ಪ್ರದರ್ಶಿತಗೊಳ್ಳುತ್ತಿರುವುದು ನಿರ್ದೇಶಕ ಕಾಸ್ತಾ ಗವ್ರಾಸ್‌ ನ ಅಡಲ್ಟ್ಸ್‌ ಇನ್‌ ದಿ ರೂಮ್‌ ಚಿತ್ರ. ಇದು ಅವನ ಹೊಸ ಚಿತ್ರವೂ ಹೌದು. ತನ್ನ ಝೆಡ್‌ ಸಿನಿಮಾದ ಮೂಲಕ ಸಿನಿ ಆಸಕ್ತರ ಮನಪಟಲದಲ್ಲಿ ಶಾಶ್ವತವಾಗಿ ಉಳಿದಿರುವ ಕಾಸ್ತಾರ ಸಿನಿಮಾ ಕಟ್ಟುವಿಕೆಯೇ ತೀರಾ ವಿಭಿನ್ನವಾದುದು. ಅದರಲ್ಲೂ ರಾಜಕೀಯ ನೆಲೆಯ ಸಿನಿಮಾಗಳಲ್ಲಿ ಎತ್ತಿದಕೈ. ಹಾಗಾಗಿ ಅವರ ಸಿನಿಮಾದ ಟಿಕೆಟ್‌ ಬಿಸಿ ಮಸಾಲೆದೋಸೆಯಂತೆಯೇ ಮಾರಾಟವಾಗಿದೆ. ಗುರುವಾರ ಮಧ್ಯಾಹ್ನದ ಹೊತ್ತಿಗೇ ಅಡಲ್ಟ್ಸ್‌ ಇನ್‌ ದಿ ರೂಮ್‌ ನ ಟಿಕೆಟ್‌ಗಳು ಖಾಲಿಯಾಗಿದ್ದವು.

ಈ ವಿಭಾಗಗಳಿಗೆ ಸ್ವಲ್ಪ ಹೆಚ್ಚು

ಎರಡು ದಿನಗಳ ಉತ್ಸವದ ಲಕ್ಷಣ ಕಂಡರೆ, ಎಂದಿನಂತೆ ಇರಾನ್‌ ಮತ್ತು ಟರ್ಕಿ ದೇಶಗಳ ಸಿನಿಮಾಗಳಿಗೆ ಜನರು ಮುಗಿಬಿದ್ದಿದ್ದಾರೆ. ಗುರುವಾರವಿದ್ದ ಇರಾನ್‌ ಮತ್ತು ಟರ್ಕಿ ದೇಶಗಳ ಸಿನಿಮಾಗಳು ಹೌಸ್‌ಫುಲ್‌ ಆಗಿದ್ದವು. ಕಲಾ ಅಕಾಡೆಮಿಯಲ್ಲಿ ತಡರಾತ್ರಿ [೧೦.೪೫] ಪ್ರದರ್ಶಿತವಾದ ಮೆಹದಿ ವರ್ಸೋವ್‌ ನ ‘ಸನ್‌‘ ಚಿತ್ರಕ್ಕೆ ಬಹುತೇಕ ಫುಲ್‌ ಆಗಿತ್ತು. ಅದಲ್ಲದೇ ಮಧ್ಯಾಹ್ನವಿದ್ದ ಟರ್ಕಿಯ ‘ಕಮಿಟ್‌ಮೆಂಟ್‌’ ಹಾಗೂ ಸಂಜೆಯ ಇರಾನಿನ ‘ಸನ್‌-ಮದರ್‌’ ಚಿತ್ರ ಹೌಸ್‌ಫುಲ್‌ ಆಗಿತ್ತು.

ಅದಲ್ಲದೇ ಎರಡನೇ ದಿನ ಭಾರತೀಯ ಪನೋರಮಾ ವಿಭಾಗ ಉದ್ಘಾಟನೆಗೊಂಡಿತು. ಆ ಹಿನ್ನೆಲೆಯಲ್ಲಿ ಉದ್ಘಾಟನಾ ಚಿತ್ರ ಗುಜರಾತಿಯ ಹೆಲೆರೋಗೆ ಜನ ಕಂಡು ಬಂದಿತು. ಕಂಟ್ರಿಫೋಕಸ್‌ [ರಷ್ಯಾ] ವಿಭಾಗಕ್ಕೆ ಪ್ರೇಕ್ಷಕರು ತೋರುತ್ತಿರುವ ಉತ್ಸಾಹಕ್ಕಿಂತ ಫೆಸ್ಟಿವಲ್‌ ಕೆಲಡೊಸ್ಕೋಪ್‌, ಇಂಟರ್‌ನ್ಯಾಷನಲ್‌ ಕಾಂಪಿಟೇಷನ್‌. ಮಾಸ್ಟರ್‌ ಫ್ರೇಮ್ಸ್‌ ನ ಆಯ್ಕೆ ಹೆಚ್ಚಿದೆ.

ಇದನ್ನು ಪುಷ್ಟೀಕರಿಸುವ ಕೇರಳದ ಸಿನಿ ಉತ್ಸಾಹಿಯೊಬ್ಬರು, ‘ನಾವು ನೋಡಲು ಬರುವುದೇ ಇಂಟರ್‌ ನ್ಯಾಷನಲ್‌ ಕಾಂಪಿಟೇಷನ್‌ ಮತ್ತು ಮಾಸ್ಟರ್‌ ಸ್ಟ್ರೋಕ್ಸ್‌ [ಈ ಬಾರಿ ಮಾಸ್ಟರ್‌ ಫ್ರೇಮ್ಸ್‌ ಎಂದಾಗಿದೆ] ಸಿನಿಮಾಗಳಿಗಾಗಿ. ನಮ್ಮಂಥವರು ಅನೇಕರಿದ್ದಾರೆ’ ಎನ್ನುತ್ತಾರೆ.

ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಸಿನಿ ಪ್ರತಿನಿಧಿಗಳು ನೋಂದಣಿ ಮಾಡಿಸಿದ್ದಾರೆ. ಕಳೆದ ವರ್ಷ 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ನೋಂದಾಯಿಸಿದ್ದರು. ಈ ಬಾರಿ ದಿನಂಪ್ರತಿ ಬಂದು ನೋಂದಾಯಿಸಿಕೊಳ್ಳುವವರ ಸಂಖ್ಯೆ ಹೊರತುಪಡಿಸಿ [ಇದು ವಾರಾಂತ್ಯ ದಿನಗಳಲ್ಲಿ ಕೊಂಚ ಇರುತ್ತದೆ] ಸುಮಾರು 9, 300 ಮಂದಿ ನೋಂದಾಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next