ತಿಂಗಳುಗಳಿಂದ ಬಲಿಜ ಪಕ್ಷಿ ಶೇಖರಿಸಿದ್ದ ಆಹಾರ ಮಳೆ- ಗಾಳಿಗೆ ಮಣ್ಣು ಸೇರಿತು. ಅದರಿಂದ ಒಳ್ಳೆಯದೇ ಆಗಿತ್ತು!
ಆನಂದವನ ಎಂಬ ಕಾನನವು ಹಸಿರು ಮರಗಳಿಂದ ಕೂಡಿತ್ತು. ಅಲ್ಲಿ ಪ್ರಾಣಿ ಪಕ್ಷಿಗಳಿಗೆ ಆಹಾರಕ್ಕೇನು ಕೊರತೆ ಇರಲಿಲ್ಲ. ಜೀವಿಗಳು ಸುಖ ಸಂತೋಷದಿಂದ ಬದುಕುತ್ತಿದ್ದವು.
ಅಲ್ಲಿ, ಒಂದು ಅರಳಿ ಮರದ ಮೇಲೆ ಬಲಿಜ ಮತ್ತು ಸಮುರ ಎಂಬ ಎರಡು ಪಕ್ಷಿಗಳು ವಾಸ ಮಾಡುತ್ತಿದ್ದವು. ಬಲಿಜ ಪಕ್ಷಿಗೆ ಆಹಾರವನ್ನು ಶೇಖರಿಸಿ ಇಡುವ ಗುಣವಿತ್ತು. ಆದರೆ ಸಮುರ ಪಕ್ಷಿಗೆ ಕಾಡಿನಲ್ಲಿ ಯಥೇತ್ಛವಾಗಿ ಆಹಾರ ಲಭ್ಯ ಇರುವುದರಿಂದ ಶೇಖರಿಸುವುದು ಏಕೆ ಎಂಬ ಅಭಿಪ್ರಾಯವಿತ್ತು. ಹೀಗಾಗಿ ಅದು ಬಲಿಜ ಪಕ್ಷಿಯನ್ನು ದಡ್ಡಶಿಖಾಮಣಿ ಎಂದೇ ಆಡಿಕೊಳ್ಳುತ್ತಿತ್ತು. ಬಲಿಜ “ಕಾಡಿನಲ್ಲಿ ಅಕಾಲಿಕ ಮಳೆ ಬಂದರೆ ಆಹಾರ ಸಿಗದೇಹೋಗಬಹುದು. ಅದಕ್ಕೆ ಆಹಾರ ಶೇಖರಿಸಿಡುತ್ತಿದ್ದೇನೆ’ ಎನ್ನುತ್ತಿತ್ತು.
ಕೆಲ ದಿನಗಳ ನಂತರ ಜೋರು ಮಳೆ ಸುರಿಯತೊಡಗಿತು. ಜೋರಾಗಿ ಗಾಳಿ ಬೀಸಿದ್ದರಿಂದ ಬಲಿಜ ಸಂಗ್ರಹಿಸಿದ್ದ ಕಾಳು ಕಡಿಗಳೆಲ್ಲಾ ನೆಲಕ್ಕೆ ಚೆಲ್ಲಿ ಮಣ್ಣುಪಾಲಾದವು. ಬಲಿಜನಿಗೆ ತುಂಬಾ ಬೇಜಾರಾಯಿತು. ಸಮುರ “ನೋಡಿದೆಯಾ ನೀನು ಅಷ್ಟು ಕಷ್ಟಪಟ್ಟು ಕೂಡಿಟ್ಟದ್ದೆಲ್ಲಾ ವ್ಯರ್ಥವಾಯಿತು.’ ಎಂದು ಹೇಳಿತು. ಆಗ ಬಲಿಜ “ಪರವಾಗಿಲ್ಲ ಸ್ನೇಹಿತ. ಇದರಿಂದ ನಾನು ಆಹಾರ ಕೂಡಿಡುವುದನ್ನು ತಪ್ಪಿಸುವುದಿಲ್ಲ. ಕಷ್ಟಪಟ್ಟಿದ್ದು ಯಾವತ್ತೂ ವ್ಯರ್ಥವಾಗದು’ ಎಂದಿತು.
ಕೆಲವು ದಿನಗಳ ನಂತರ ಅರಳಿ ಮರದ ಕೆಳಗೆ ಅನೇಕ ಸಣ್ಣ ಸಣ್ಣ ಸಸ್ಯಗಳು ಚಿಗುರೊಡೆದವು. ಅವು ಬಲಿಜ ಶೇಖರಿಸಿದ್ದ ಕಾಳುಕಡ್ಡಿಗಳು ಮಣ್ಣು ಸೇರಿದ್ದರ ಫಲವಾಗಿತ್ತು. ಬರಬರುತ್ತಾ ಆ ಸಸಿಗಳು ಗಿಡಗಳಾಗಿ ಕಾಳಿನ ತೆನೆಗಳನ್ನು ಬಿಡಲು ಪ್ರಾರಂಭಿಸಿದವು. ಬಲಿಜ ಮತ್ತು ಸಮುರ ಪಕ್ಷಿಗಳಿಗೆ ಇದನ್ನು ಕಂಡು ತುಂಬಾ ಸಂತೋಷವಾಯಿತು. ಸಮುರನಿಗೆ ಕಡೆಗೂ ಬಲಿಜ ಪಕ್ಷಿ ಹೇಳಿದ್ದರಲ್ಲಿ ಸತ್ಯಾಂಶ ಕಂಡಿತು. ಸಮುರ “ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತೆ ಎಂಬುದನ್ನು ನೀನು ಸಾಬೀತು ಮಾಡಿದೆ’ ಎಂದು ಬಲಿಜನನ್ನು ಅಭಿನಂದಿಸಿತು.
– ವೆಂಕಟೇಶ ಚಾಗಿ