ಬರ್ಮಿಂಗಂ: ಆರು ಬಾರಿಯ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ವಿಜೇತ, ಕಳೆದ ವರ್ಷದ ಚಾಂಪಿಯನ್ ಚೀನದ ಲಿನ್ ಡಾನ್ ಸೆಮಿಫೈನಲ್ ಸೋಲಿನೊಂದಿಗೆ ತಮ್ಮ ಹೋರಾಟ ಮುಗಿಸಿದ್ದಾರೆ. ಅವರಿಗೆ ಚೀನದ ಶ್ರೇಯಾಂಕ ರಹಿತ ಆಟಗಾರ ಶಿ ಯುಕಿ ಕಂಟಕವಾಗಿ ಪರಿಣಮಿಸಿದರು.
ಶನಿವಾರ ರಾತ್ರಿ ನಡೆದ ಸೆಮಿಫೈನಲ್‌ನಲ್ಲಿ ಶಿ ಯುಕಿ 24-22, 21-10 ಅಂತರದಿಂದ ಲಿನ್ ಡಾನ್ ಆಟಕ್ಕೆ ತೆರೆ ಎಳೆದರು. ಇದರೊಂದಿಗೆ ಸೀನಿಯರ್ ಆಟಗಾರರಿಬ್ಬರ ನಡುವಿನ ಫೈನಲ್ ಅವಕಾಶ ತಪ್ಪಿಹೋಯಿತು. 34ರ ಹರೆಯದ ವಿಶ್ವದ ನಂ.1 ಆಟಗಾರ, ಮಲೇಶ್ಯದ ಲೀ ಚಾಂಗ್ ವೀ ಪ್ರಶಸ್ತಿ ಸುತ್ತಿಗೆ ನೆಗೆದಿದ್ದು, ಇವರನ್ನು 33ರ ಹರೆಯದ ಲಿನ್ ಡಾನ್ ಎದುರಿಸುವರೆಂಬ ನಿರೀಕ್ಷೆ ಬಲವಾಗಿತ್ತು. ಆದರೆ 21ರ ಹರೆಯದ ಶಿ ಯುಕಿ ಈ ಸಾಧ್ಯತೆಯನ್ನು ತಪ್ಪಿಸಿದರು.
ಶಿ ಯುಕಿ ಈವರೆಗೆ ಜೂನಿಯರ್ ಹಂತದಲ್ಲಿ ಗಮನಾರ್ಹ ಸಾಧನೆಗೈದರೂ ಸೀನಿಯರ್ ವಿಭಾಗದಲ್ಲಿ ಮೆರೆದದ್ದು ಇದೇ ಮೊದಲು. 2014ರ ಯುತ್ ಒಲಿಂಪಿಕ್ ಗೇಮ್ಸ್, ಅದೇ ವರ್ಷ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಹಾಗೂ 3 ಸಲ ಏಶ್ಯ ಜೂನಿಯರ್ ಚಾಂಪಿಯನ್‌ಶಿಪ್‌ಗ್ಳಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಶಿ ಯುಕಿ ಅವರದು. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಯುಕಿ ಹೊಸ ಇತಿಹಾಸ ಬರೆಯಬಹುದೇ ಎಂಬುದೊಂದು ಕುತೂಹಲ.
2011ರಿಂದ ಮೊದಲ್ಗೊಂಡು ಸತತ 4 ಬಾರಿ ಚಾಂಪಿಯನ್ ಆಗಿ ಮೂಡಿಬಂದ ಲೀ ಚಾಂಗ್ ವೀ ಅವರಿಗೂ ಸೆಮಿಫೈನಲ್ ಗೆಲುವು ಕಠಿನವಾಗಿತ್ತು. ಥೈವಾನ್‌ನ ಚಿಯು ಟೀನ್ ಚೆನ್ ವಿರುದ್ಧ ಮೊದಲ ಗೇಮ್ ಕಳೆದುಕೊಂಡ ಬಳಿಕ ಗೆಲುವಿನ ಲಯಕ್ಕೆ ಮರಳಿದ್ದರು. ಅಂತರ 10-21, 21-14, 21-9. ಇದು ವೀ ಕಾಣುತ್ತಿರುವ 7ನೇ ಫೈನಲ್.
“ನನ್ನ ದೇಹಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. ಆದರೆ ಈ ವಯಸ್ಸಿನಲ್ಲಿ ಎಂಥ ಪ್ರದರ್ಶನ ನೀಡಬೇಕೋ ಅದನ್ನು ಪ್ರದರ್ಶಿಸಿದ ತೃಪ್ತಿ ಇದೆ…’ ಎಂದು ಲಿನ್ ಡಾನ್ ಹೇಳಿದ್ದಾರೆ. ಸೆಮಿಫೈನಲ್‌ನಲ್ಲೂ ಡಾನ್ ಆಟ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ 3 ಗೇಮ್‌ಗಳ ಕಾದಾಟ ನಡೆಸಿ ಗೆಲುವು ಸಂಪಾದಿಸಿದ್ದರು.
ತೈವಾನಿಯರ ಫೈನಲ್: ವನಿತಾ ಸಿಂಗಲ್ಸ್ ಫೈನಲ್ ತೈವಾನಿನ ಇಬ್ಬರು ಅಗ್ರ ಆಟಗಾರ್ತಿಯರಾದ ತೈ ಜು ಯಿಂಗ್ ಮತ್ತು ರಚನೋಕ್ ಇಂತಾನನ್ ನಡುವೆ ನಡೆಯಲಿದೆ.ಸೆಮಿಫೈನಲ್‌ನಲ್ಲಿ ರಚನೋಕ್ ಇಂತಾನನ್ ಜಪಾನಿನ ಅಕಾನೆ ಯಮಗುಚಿ ಅವರನ್ನು 22-20, 21-16ರಿಂದ; ತೈ ಜು ಯಿಂಗ್ ಕೊರಿಯಾದ ಸುಂಗ್ ಜಿ-ಹ್ಯುನ್ ಅವರನ್ನು 11-21, 21-14, 21-14 ಅಂತರದಿಂದ ಪರಾಭವಗೊಳಿಸಿದರು.