ಸಿಂಧನೂರು: ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಕಿತ್ತೂರು ಚನ್ನಮ್ಮ ಅವರ ಕಂಚಿತ ಪುತ್ಥಳಿ ನಿರ್ಮಾಣಕ್ಕಾಗಿ ಎಲ್ಲ ಸಮುದಾಯ ಒಳಗೊಂಡಂತೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ಕಾರ್ಯಾಧ್ಯಕ್ಷ ಸಿದ್ರಾಮೇಶ ಮನ್ನಾಪುರ ಹೇಳಿದರು.
ನಗರದ ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ವೀರಭದ್ರಪ್ಪ ಗಸ್ತಿ ಅವರ ಕಚೇರಿಯಲ್ಲಿ ಗುರುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿಂಧನೂರು ನಗರಕ್ಕೆ ಕಿತ್ತೂರು ಚನ್ನಮ್ಮ ಸರ್ಕಲ್ ಹಿರಿಮೆಯಾಗಿದೆ. ಅಂತಹ ಜಾಗದಲ್ಲಿ ಕಂಚಿನ ಪುತ್ಥಳಿ ಸ್ಥಾಪನೆಯಾಗಬೇಕಿದೆ. ಚನ್ನಮ್ಮ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರು ಎಲ್ಲ ವರ್ಗದವರು ಗೌರವಿಸುವ ವೀರರಾಣಿ. ಅವರನ್ನು ಸ್ಮರಿಸಿಕೊಳ್ಳುವ ಭಾಗವಾಗಿ ಎಲ್ಲ ಸಮಾಜದವರ ಸಭೆ ಕರೆದು ಪುತ್ಥಳಿ ನಿರ್ಮಾಣಕ್ಕೆ ಧನ ಸಂಗ್ರಹ ಮಾಡಲಾಗುವುದು. ಪುತ್ಥಳಿ ಸ್ಥಾಪಿಸಿ ಭತ್ತದ ನಾಡಿನಲ್ಲಿ ಚನ್ನಮ್ಮನವರ ವಿಜಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಅಕ್ಟೋಬರ್ 23ರಂದು ಕಿತ್ತೂರು ಚನ್ನಮ್ಮನವರ ಜಯಂತ್ಯುತ್ಸವ ಇದೆ. ತಾಲೂಕಾಡಳಿತದಿಂದ ಮಿನಿ ವಿಧಾನಸೌಧದಲ್ಲಿ ಸರಳವಾಗಿ ಆಚರಿಸಿ, ನಂತರ ಚನ್ನಮ್ಮ ವೃತ್ತದಲ್ಲಿರುವ ಚನ್ನಮ್ಮನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಗುವುದು. ಕೋವಿಡ್ ನಿಯಮಗಳನ್ವಯ ಹೆಚ್ಚಿನ ಜನಸಂಖ್ಯೆ ಸೇರಬಾರದು ಎನ್ನುವುದನ್ನು ಪಾಲನೆ ಮಾಡಲಾಗುತ್ತದೆ. ನಾವು ಸಮಾಜದ ಸಂಘಟನೆಗೆ ಒತ್ತು ನೀಡಲಿದ್ದು, ಗ್ರಾಮೀಣ ಭಾಗದ ಪ್ರತಿ ಮನೆ-ಮನೆಗೆ ತೆರಳಲಾಗುವುದು. ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಚೈತನ್ಯ ಬಂದಿದೆ. ಹೆಸರುಗಳನ್ನು ಅ.23ರಂದು ಘೋಷಣೆ ಮಾಡಲಾಗುವುದು ಎಂದು ಸಮಾಜದ ನಿಯೋಜಿತ ಅಧ್ಯಕ್ಷ ಮಲ್ಲಿಕಾರ್ಜುನ ಕಲ್ಲೂರು ಹೇಳಿದರು.
ಇದನ್ನೂ ಓದಿ: ಡಿಎಪಿ ಸಿಗದೆ ಹಿಂಗಾರಲ್ಲಿ ಕಂಗಾಲಾದ ರೈತ!
ಸಮಾಜದ ಗೌರವಾಧ್ಯಕ್ಷ ವೀರಭದ್ರಪ್ಪ ಗಸ್ತಿ, ಪ್ರಧಾನ ಕಾರ್ಯದರ್ಶಿ ಬಸನಗೌಡ ಬುಕ್ಕನಟ್ಟಿ, ಕಾನೂನು ಸಲಹೆಗಾರ ವೀರಭದ್ರಪ್ಪ ವಕೀಲರು, ಶೇಖರಪ್ಪ ದೋಟಿಹಾಳ, ಶಿವುಕುಮಾರ, ನಾಗರಾಜ ಗಸ್ತಿ, ಅಮರೇಶ ಮುಳ್ಳೂರು, ಮಲ್ಲಿಕಾರ್ಜುನ ಪಲ್ಲೇದ್, ಬಸವರಾಜ ಸೇರಿದಂತೆ ಇತರರು ಇದ್ದರು.