Advertisement

Law: ಮುರುಘಾಶ್ರೀ ವಿರುದ್ಧದ ಎಲ್ಲ ಪ್ರಕರಣಕ್ಕೆ ತಡೆ

12:27 AM Nov 22, 2023 | Team Udayavani |

ಬೆಂಗಳೂರು: ಮುರುಘಾ ಶರಣರ ವಿರುದ್ಧದ ಎರಡನೇ ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನಿಲುವು ಹಾಗೂ ಸರಕಾರಿ ಅಭಿಯೋಜಕರ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಪ್ರಕರಣ ಯಾವುದು, ಯಾರದ್ದು ಎನ್ನುವುದು ಮುಖ್ಯವಲ್ಲ. ನ್ಯಾಯಾಂಗ ಶಿಸ್ತು ಮುಖ್ಯ ಎಂದು ಅಭಿಪ್ರಾಯಪಟ್ಟಿದೆ.

Advertisement

ಇದೇ ವೇಳೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ನ್ಯಾಯಾಧೀಶರ ಮುಂದೆ ವಿಚಾರಣೆಗಿರುವ ಮುರುಘಾ ಶ್ರೀಗಳ ಎಲ್ಲ ಪ್ರಕರಣಗಳಿಗೆ ತಡೆ ನೀಡಿ ಆದೇಶಿಸಿರುವ ಹೈಕೋರ್ಟ್‌, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ 2ನೇ ಅಪರ ಜಿಲ್ಲಾ ನ್ಯಾಯಾಲಯದಲ್ಲಿರುವ ಎಲ್ಲ ಕಡತಗಳನ್ನು ತರಿಸಿಕೊಂಡು ಪರಿಶೀಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ನಿರ್ದೇಶನ ನೀಡಿರುವ ಹೈಕೋರ್ಟ್‌, ಸ್ಥಳೀಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿರುದ್ಧ ತನಿಖೆ ನಡೆಸಲು ರಾಜ್ಯ ವಿಶೇಷ ಸರಕಾರಿ ಅಭಿಯೋಜಕರಿಗೆ ಆದೇಶಿಸಿದೆ.

ತಮ್ಮ ವಿರುದ್ಧದ ಪ್ರಕರಣಗಳನ್ನು ರದ್ದುಪಡಿಸುವಂತೆ ಕೋರಿ ಮುರುಘಾ ಶರಣರು ಸಲ್ಲಿಸಿರುವ ನಾಲ್ಕು ಕ್ರಿಮಿನಲ್‌ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮಂಗಳವಾರ ಈ ಆದೇಶ ನೀಡಿದೆ.

ಅಜ್ಞಾನ ಪ್ರದರ್ಶಿಸಿದ ಜಿಲ್ಲಾ ನ್ಯಾಯಾಧೀಶರು; ಅಸಮಾಧಾನ
ವಾದ-ಪ್ರತಿವಾದ ಆಲಿಸಿದ ನ್ಯಾಯ ಪೀಠ, ವಿಚಾರಣೆಗೆ ಹೈಕೋರ್ಟ್‌ನಲ್ಲಿ ತಡೆ ಇದ್ದರೂ, ಆರೋಪಿತ ಸ್ವಾಮೀಜಿಯನ್ನು ತರಾ ತುರಿಯಲ್ಲಿ ಬಂಧಿಸಿದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಆರೋಪಿಯನ್ನು ಬಿಡುಗಡೆ ಮಾಡಿದ ಜೈಲು ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಹೈಕೋರ್ಟ್‌ ಆದೇಶ ಪಾಲಿಸಿದ್ದಕ್ಕೆ ಈ ಕ್ರಮ ಸರಿಯಲ್ಲ. ಆರೋಪಿ ಯಾರೇ ಇರಲಿ ಅದು ನಮಗೆ ಮುಖ್ಯವಲ್ಲ. ನ್ಯಾಯಾಂಗ ಶಿಸ್ತು ನಮಗೆ ಮುಖ್ಯ. ಹೈಕೋರ್ಟ್‌ ಆದೇಶವನ್ನು ನಿಷ್ಫಲಗೊಳಿಸುವ ಪ್ರಯತ್ನ ಒಪ್ಪುವುದಿಲ್ಲ. ಹೈಕೋರ್ಟ್‌ ಆದೇಶದ ಬಗ್ಗೆ ಜಿಲ್ಲಾ ನ್ಯಾಯಾಧೀಶರು ಅಜ್ಞಾನ ಪ್ರದರ್ಶಿಸಿದ್ದಾರೆ, ಸಾಲು-ಸಾಲು ತಪ್ಪುಗಳನ್ನು ಮಾಡಿದ್ದಾರೆ ಎಂದು ನ್ಯಾಯಪೀಠ ಹೇಳಿದೆ.

ಪೂರ್ವಾಗ್ರಹಪೀಡಿತ ಕ್ರಮ
ಅರ್ಜಿದಾರರ ಪರ ಹಿರಿಯ ವಕೀಲ ಸಿ.ವಿ. ನಾಗೇಶ್‌ ಹಾಗೂ ಸಂದೇಶ ಚೌಟ ವಾದ ಮಂಡಿಸಿ, 2ನೇ ಅಪರ ಜಿಲ್ಲಾ ನ್ಯಾಯಾಧೀಶರಿಂದ ಪೂರ್ವಾಗ್ರಹಪೀಡಿತ ಕ್ರಮವಾಗಿದೆ ಎಂದು ಆರೋಪಿಸಿ ಸಾಕ್ಷಿ ವಿಚಾರಣೆ ಬೇರೆ ಕೋರ್ಟ್‌ಗೆ ವರ್ಗಾಯಿಸಲು ಮನವಿ ಮಾಡಿದರು.

Advertisement

ಹೈಕೋರ್ಟ್‌ ಜಾಮೀನು ನೀಡಿದಾಗಲೂ ತತ್‌ಕ್ಷಣ ಬಿಡುಗಡೆಗೆ ಆದೇಶಿಸಲಿಲ್ಲ. ಆದೇಶ ಹೊರಡಿಸಲು ವಿಳಂಬ ಮಾಡಿದ್ದಾರೆ. ಇದರಿಂದಾಗಿ 3 ದಿನ ಶ್ರೀಗಳು ಜೈಲಿನಲ್ಲಿ ರಬೇಕಾಯಿತು. ವಿಚಾರಣೆ ಮುಂದೂಡುವಂತೆ ಹೈಕೋರ್ಟ್‌ ಆದೇಶಿಸಿದ್ದರೂ, ವಿಚಾರಣೆ ನಡೆಸಲಾಗಿದೆ. ಚಿತ್ರದುರ್ಗಕ್ಕೆ ಬರದಂತೆ ಹೈಕೋರ್ಟ್‌ ನಿರ್ಬಂಧಿಸಿದ್ದರೂ, ವಾರೆಂಟ್‌ ಜಾರಿಗೊಳಿಸಿ ಚಿತ್ರದುರ್ಗ ಜಿಲ್ಲೆಗೆ ಕರೆತರುವಂತೆ 2ನೇ ಅಪರ ಜಿಲ್ಲಾ ನ್ಯಾಯಾಧೀಶರು ಆದೇಶಿಸಿದ್ದಾರೆ. ಪಾಸ್‌ಪೋರ್ಟ್‌ ವಶಕ್ಕೆ ನೀಡಿದಾಗಲೂ ಅದರ ಪರಿಶೀಲನೆಗೆ ಕಳುಹಿಸಿದರು. ಹೈಕೋರ್ಟ್‌ ಆದೇಶ ವಿಫ‌ಲಗೊಳಿಸಲು ಬಂಧನಕ್ಕೆ ಆದೇಶಿಸಿದ್ದಾರೆ ಎಂದರು. ಅರ್ಜಿದಾರರ ಪರ ವಕೀಲ ಕೆ.ಬಿ.ಕೆ. ಸ್ವಾಮಿ ವಕಾಲತ್ತು ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next