ಉಡುಪಿ/ಮಂಗಳೂರು: ಕರಾವಳಿಯಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಎಲ್ಲ ಚರ್ಚುಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು ಯೇಸುವಿನ ಜನನವನ್ನು ಸಾರುವ ಗೋದಲಿ ತಯಾರಾಗುತ್ತಿದೆ. ಎಲ್ಲ ಚರ್ಚ್‌ಗಳ ಎದುರು ಬೃಹದಾಕಾರದ ನಕ್ಷತ್ರವನ್ನು ತೂಗು ಹಾಕಲಾಗಿದೆ.
ಡಿ. 24ರ ರಾತ್ರಿ ಕ್ರಿಸ್ಮಸ್ ಕ್ಯಾರಲ್ಸ್ (ಕ್ರಿಸ್ಮಸ್ ಗೀತೆಗಳ ಗಾಯನ)ದೊಂ ದಿಗೆ ಹಬ್ಬದ ಸಂಭ್ರಮ ಆರಂಭಗೊಳ್ಳು ತ್ತದೆ. ಬಳಿಕ ಚರ್ಚ್‌ಗಳಲ್ಲಿ ಧರ್ಮ ಗುರುಗಳಿಂದ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಬಲಿಪೂಜೆ ನಡೆಯಲಿದೆ.
ಉಡುಪಿ ಧರ್ಮಪ್ರಾಂತದ ಕ್ರಿಸ್ಮಸ್ ಆಚರಣೆ ಭಾಗವಾಗಿ ಧರ್ಮಾಧ್ಯಕ್ಷರಾದ ರೈ| ರೆ| ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಶನಿವಾರ ರಾತ್ರಿ ಅರ್ಪಿಸಲಿದ್ದಾರೆ.
2 ವರ್ಷಗಳ ಕೊರೊನಾದಿಂದ ಹಬ್ಬವನ್ನು ಸರಳವಾಗಿ ಆಚರಿಸಿದ್ದ ಕ್ರೈಸ್ತರು ಈ ಬಾರಿ ವಿಶೇಷವಾಗಿ ಆಚರಿಸಲು ಸಿದ್ಧತೆ ಮಾಡಿಕೊಂಡ ಬೆನ್ನಲ್ಲೇ ಮತ್ತೆ ಕೊರೊನಾ ಭೀತಿ ಎದುರಾಗಿರುವುದರಿಂದ ಸರಕಾರದ ನಿಯಮಾವಳಿ ಪಾಲಿಸಿಕೊಂಡೇ ಆಚರಣೆಗೆ ಅಣಿಯಾಗಿದ್ದಾರೆ.