Advertisement

ಕಾರ್ಗೋ ಕಮಾಲ್‌

09:16 AM Apr 25, 2019 | Hari Prasad |

ಯುದ್ಧಭೂಮಿಯಲ್ಲಿ, ಶಸ್ತ್ರಾಸ್ತ್ರಗಳನ್ನು, ನಕ್ಷೆ, ಧಾನ್ಯಗಳನ್ನು ಮತ್ತಿತರ ಸಾಮಗ್ರಿ ಹೊತ್ತೂಯ್ಯಲು ಬಳಕೆಯಾಗುತ್ತಿದ್ದ ಪ್ಯಾಂಟ್‌ ಇದು. ಇಂದು ಫ್ಯಾಷನ್‌ ಲೋಕದಲ್ಲಿ ಜಾಗ ಪಡೆದಿದೆ. ಇದರ ಜೇಬುಗಳು ಅಗಲವಾಗಿರುವುದರಿಂದ ಇವನ್ನು ಪರ್ಸ್‌ನಂತೆಯೂ ಬಳಸಬಹುದು. ಬಿಗಿಯಾಗಿರದ ಕಾರಣ, ಇವುಗಳನ್ನು ತೊಟ್ಟು ನಡೆಯುವುದು, ಓಡುವುದು ಸುಲಭ.

Advertisement

90ರ ದಶಕದ ಕಾರ್ಗೋ ಪ್ಯಾಂಟ್‌ಗಳು ಮತ್ತೆ ಬರುತ್ತಿವೆ. ಪ್ಯಾಂಟ್‌ ತುಂಬಾ ದೊಡ್ಡ ದೊಡ್ಡ ಜೇಬುಗಳಿರುವ ಈ ದಿರಿಸು ಮತ್ತೆಬರಲು ಕಾರಣವೇ ಈ ಬೇಸಿಗೆಯ ಉರಿಬಿಸಿಲಿನ ಕಾವು. ಸಡಿಲವಾದ ಈ ಪ್ಯಾಂಟ್‌ ಮೈಗೆ ಅಂಟುವುದಿಲ್ಲ. ಅಲ್ಲದೆ ಇದರಲ್ಲಿ ತುಂಬಾ ಜೇಬುಗಳಿರುವ ಕಾರಣ ಇದಕ್ಕೆ ಬೇಡಿಕೆಯೂ ಹೆಚ್ಚಾಗಿದೆ. ಆದರೆ ಈ ಕಾರ್ಗೋ ಪ್ಯಾಂಟ್‌ ಒಂದು ಚಿಕ್ಕ ಮೇಕ್‌ಓವರ್‌ ಪಡೆದಿದೆ. ಬೂಟ್‌ ಕಟ್‌ ಇರುತ್ತಿದ್ದ ಈ ಕಾರ್ಗೋ ಪ್ಯಾಂಟ್‌ನ ಕಾಲತುದಿಗಳಿಗೆ ಈಗ ಎಲಾಸ್ಟಿಕ್‌ ಬಂದಿದೆ. ಹಾಗಾಗಿ ಇವು ಜೀನೀ ಪ್ಯಾಂಟ್‌, ಹ್ಯಾರೆಂ ಪ್ಯಾಂಟ್‌, ಧೋತಿ ಪ್ಯಾಂಟ್‌ ಮತ್ತು ಜೆಗ್ಗಿಂಗ್ಸ್‌ಅನ್ನು ಹೋಲುತ್ತವೆ.

ಹುಟ್ಟಿದ್ದು ಯುದ್ಧಭೂಮಿಯಲ್ಲಿ
ಕಾರ್ಗೋ ಪ್ಯಾಂಟ್‌ಗಳನ್ನು ಮೊದಲು ತೊಟ್ಟವರಾರು? ಯುದ್ಧಭೂಮಿಯಲ್ಲಿ, ಶಸ್ತ್ರಾಸ್ತ್ರಗಳನ್ನು, ನಕ್ಷೆ, ಧಾನ್ಯಗಳನ್ನು ಮತ್ತು ಇತರ ಸಾಮಗ್ರಿ ಹೊತ್ತೂಯ್ಯಲು ಜೇಬುಗಳಿದ್ದ ಇಂಥ ಪ್ಯಾಂಟ್‌ಗಳು ತುಂಬಾ ಉಪಕಾರಿಯಾಗಿದ್ದವು. ಬಿಗಿಯಾಗಿರದೆ ಇದ್ದ ಕಾರಣ, ಇವುಗಳನ್ನು ತೊಟ್ಟು ನಡೆಯುವುದು, ಓಡುವುದು, ಓಡಾಡುವುದು ಕೂಡಾ ಸುಲಭವಾಗಿರುತ್ತಿತ್ತು.1938ರಲ್ಲಿ, ಬ್ರಿಟಿಷ್‌

ಶಸ್ತ್ರಪಡೆಗಳು ಈ ಪ್ಯಾಂಟ್‌ಗಳನ್ನು ಮೊದಲು ತೊಟ್ಟವು. ನಂತರ 1940ರಲ್ಲಿ, ಎರಡನೇ ವಿಶ್ವಸಮರದ ವೇಳೆ, ಈ ಬ್ಯಾಟಲ್‌ ಡ್ರೆಸ್‌ಗಳು ಅಮೇರಿಕಕ್ಕೆ ಕಾಲಿಟ್ಟವು. ಅಲ್ಲಿನವರು ಇನ್ನೂ ಹೆಚ್ಚಿನ ವಸ್ತುಗಳನ್ನು ಪ್ಯಾಂಟ್‌ನಲ್ಲಿ ತುಂಬಿಕೊಳ್ಳಲು ಸಾಧ್ಯವಾಗುವಂತೆ ಜೇಬುಗಳ ಗಾತ್ರವನ್ನು ಹೆಚ್ಚಿಸಿದರು. ಅಲ್ಲಿಂದ ಆ ಬ್ಯಾಟಲ್‌ ಡ್ರೆಸ್‌ಗಳು ಕಾರ್ಗೊ ಪ್ಯಾಂಟ್‌ ಎಂದು ಕರೆಯಲ್ಪಟ್ಟವು.

ಪ್ಯಾಂಟ್‌ ಹೋಗಿ ಶಾರ್ಟ್ಸ್ ಆಯ್ತು!
ಜೇಬನ್ನು ತೆರೆಯಲು ಹಾಗೂ ಮುಚ್ಚಲು ಸುಲಭವಾಗಲೆಂದು ಬಟನ್‌ (ಗುಂಡಿ), ವೆಲ್ಕ್ರೋ, ಮ್ಯಾಗ್ನೆಟ್‌ ಗಳನ್ನು (ಅಯಸ್ಕಾಂತ) ಪ್ಯಾಂಟಿನ ಜೇಬಿನಲ್ಲಿ ಉಪಯೋಗಿಸುತ್ತಿದ್ದರು. ಇನ್ನೂ ಕೆಲವು ವಿನ್ಯಾಸಗಳಲ್ಲಿ, ಪ್ಯಾಂಟಿನ ಹೊರಬದಿ ಎಲ್ಲೂ ಜೇಬುಗಳು ಕಾಣಿಸುವುದಿಲ್ಲ. ಕೇವಲ ಪ್ಯಾಂಟ್‌ಗಳಲ್ಲಿ ತೊಡೆ ಮತ್ತು ಕಾಲುಗಳ ಒಳಬದಿಯಲ್ಲಿ ಜೇಬುಗಳು ಇರುತ್ತಿದ್ದವು.

Advertisement

ವಸ್ತುಗಳನ್ನು ಕದ್ದು ಸಾಗಿಸಲು ಅಥವಾ ಶತ್ರುಗಳಿಗೆ ಕಾಣಿಸದೆ ಇರಲು ಜೇಬುಗಳನ್ನು ಪ್ಯಾಂಟಿನ ಈ ಭಾಗದಲ್ಲಿ ಇರಿಸಲಾಗುತ್ತಿತ್ತು. ಇವುಗಳಲ್ಲಿ ಮೊಣಕಾಲವರೆಗೆ ಬರುವ ಕಾರ್ಗೋ ಪ್ಯಾಂಟನ್ನು ಕಾರ್ಗೋ ಶಾರ್ಟ್ಸ್ ಎನ್ನಲಾಗುತ್ತದೆ. 1980ರಲ್ಲಿ,ಇವುಗಳನ್ನು ಕ್ರೀಡಾಪಟುಗಳು ಮತ್ತು ಮೀನುಗಾರರು ತೊಡಲು ಶುರುಮಾಡಿದರು. 1990ರಲ್ಲಿ, ಇವು ಪುರುಷರ ಫ್ಯಾಷನ್‌ನಲ್ಲಿ ಬಹುಬೇಡಿಕೆ ಪಡೆದುಕೊಂಡವು.

ಪುರುಷರ ಉಡುಪಾದ ಈ ಕಾರ್ಗೋ ಪ್ಯಾಂಟ್‌, ಕ್ರಮೇಣ ಮಹಿಳೆಯರಿಗೂ ಇಷ್ಟ ಆಗಲು ಶುರುವಾಯಿತು. ಧರಿಸಲು ಆರಾಮ ಮಾತ್ರವಲ್ಲದೆ ಸ್ಟೈಲಾಗಿಯೂ ಕಾಣುವು­ದರಿಂದ ಮಹಿಳೆಯರು ಇವನ್ನು ತೊಡಲು ಆರಂಭಿಸಿದರು. ಹಾಗಾಗಿ ಫ್ಯಾಷನ್‌ ಲೋಕದಲ್ಲಿ ಇದು ಯುನಿಸೆಕ್ಸ್ (ಪುರುಷರು, ಮಹಿಳೆಯರು, ಇಬ್ಬರೂ ತೊಡಬಹುದಾದ) ಉಡುಪಾಗಿ ಹೊರ ಬಂತು!

ಟೂ ಇನ್‌ ಒನ್‌ ಪ್ಯಾಂಟ್‌
ಇನ್ನೂ ಕೆಲವು ಕಾರ್ಗೋ ಪ್ಯಾಂಟ್‌ಗಳನ್ನು ಇ.ಎಂ.ಟಿ ಪ್ಯಾಂಟ್‌ ಎನ್ನಲಾಗುತ್ತದೆ. ಈ ಪ್ಯಾಂಟ್‌ಗಳಲ್ಲಿ ಮೊಣಕಾಲಿಂದ ಸ್ವಲ್ಪ ಕೆಳಕ್ಕೆ ಜಿಪ್‌ ಇರುತ್ತದೆ. ಜಿಪ್‌ ಹಾಕಿದರೆ ಮುಕ್ಕಾಲು ಪ್ಯಾಂಟ್‌ (ತ್ರೀ ಫೋರ್ಥ್) ಆಗುತ್ತದೆ. ಜಿಪ್‌ ಬಿಡಿಸಿದರೆ ಫ‌ುಲ್‌ ಲೆಂಥ್‌ ಪ್ಯಾಂಟ್‌ ಆಗುತ್ತದೆ. ಅಷ್ಟೊಂದು ಜೇಬುಗಳಿರುವ ಕಾರಣ, ಗ್ಯಾರೇಜಿನಲ್ಲಿ ಕೆಲಸ ಮಾಡುವವರು, ಮರದ ಕೆಲಸ ಮಾಡುವವರು ಮತ್ತು ಪೇಂಟಿಂಗ್‌ (ಬಣ್ಣ ಬಳಿಯುವುದು) ಕೆಲಸ ಮಾಡುವವರು ಇಂಥ ಪ್ಯಾಂಟ್‌ಗಳನ್ನು ತೊಡಲು ಶುರು ಮಾಡಿದರು.

— ಅದಿತಿಮಾನಸ. ಟಿ. ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next