ವಿಜಯಪುರ: ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕಿತರು, ಶಂಕಿತರು ಕಂಡುಬಂದರೂ ವಿಜಯಪುರ ಜಿಲ್ಲೆಯಿಂದ ಕಳಿಸಿದ್ದ 50 ಜನರ ಗಂಟಲು ದ್ರವ ಪರೀಕ್ಷೆಯಲ್ಲಿ ಎಲ್ಲ ವರದಿ ನೆಗೆಟಿವ್ ಬಂದಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.
ದೆಹಲಿ ತಬ್ಲೀಘಿ ಧರ್ಮ ಸಭೆಯಲ್ಲಿ ಪಾಲ್ಗೊಂಡು ಬಂದಿರುವವರು ಸೇರಿದಂತೆ ಜಿಲ್ಲೆಯಿಂದ ಈವರೆಗೆ 50 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಈಗಾಗಲೇ 27 ವರದಿ ಬಂದಿದ್ದವು, ಬಾಕಿ ಇದ್ದ 23 ಜನರ ವರದಿಗಳು ಬಂದಿದ್ದು, ಎಲ್ಲಾ 50 ಜನರ ವರದಿಗಳು ನೆಗೆಟಿವ್ ಬಂದಿವೆ ಎಂದರು.
ವಿಜಯಪುರ ಜಿಲ್ಲೆಯ ಸುತ್ತಲೂ ಗಡಿಗೆ ಹೊಂದಿಕೊಂಡಿರುವ ಕಲಬುರಗಿ, ಬಾಗಲಕೋಟೆ, ಬೆಳಗಾವಿ ಜಿಲ್ಲೆಯಲ್ಲೂ ಶಂಕಿತರಿದ್ದಾರೆ. ಗಡಿಯಲ್ಲಿ ಇರುವ ಮಹಾರಾಷ್ಟ್ರ ರಾಜ್ಯದ ಜಿಲ್ಲೆಗಳಲ್ಲೂ ಕೋವಿಡ್-19 ಕೊರೊನಾ ಹಾವಳಿ ಕಂಡು ಬಂದಿದೆ .
ಆದರೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್-19 ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗಿದೆ. ವಿದೇಶದಿಂದ ಬಂದವರು ಮಾತ್ರವಲ್ಲದೇ ಹೊರ ರಾಜ್ಯ-ಜಿಲ್ಲೆಯಿಂದ ಬಂವರ ಮೇಲೂ ನಿಗಾ ಇರಿಸಲಾಗಿದೆ, ಎಲ್ಲರನ್ನೂ ಹೋಂ ಕ್ವಾರಂಟೈನ್, ಮೆಡಿಕಲ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ ಎಂದು ವಿವರಿಸಿದ್ದಾರೆ.
ಜಿಲ್ಲೆಯ ಗಡಿಯಲ್ಲಿ 27 bಚೆಕ್ ಪೋಸ್ಟ್ ನಲ್ಲಿ ಹೊರ ಜಿಲ್ಲೆ, ರಾಜ್ಯಗಳಿಂದ ಬರುವವರಿಗೆ ನಿರ್ಬಂಧ ಹೇರಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಹೊರತಾಗಿ ಇತರೆ ವಾಹನಗಳ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದಿದ್ದಾರೆ.