Advertisement

ಹೃದಯಾಘಾತಕ್ಕೆ ಮುನ್ನ ಸಿಗುತ್ತೆ ಅಲರ್ಟ್‌ ಮೆಸೇಜ್‌!

07:55 AM Jan 26, 2018 | Team Udayavani |

ಹುಬ್ಬಳ್ಳಿ: ಜೀವ ನುಂಗುವ ಸೈಲೆಂಟ್‌ ಹೃದಯಾಘಾತ ಬಗ್ಗೆ ಸುಮಾರು ಆರು ತಾಸು ಮೊದಲೇ ಎಚ್ಚರಿಕೆಯ ಸಂದೇಶ ನೀಡಬಲ್ಲ ಸ್ಮಾರ್ಟ್‌ ವಾಚ್‌ ಮಾದರಿಯ ಸಾಧನ ಈ ವರ್ಷಾಂತ್ಯ ಮಾರುಕಟ್ಟೆ ಪ್ರವೇಶಿಸಲಿದೆ. ಬೆಂಗಳೂರು ಬಳಿಯ ಹೊಸೂರಿನಲ್ಲಿ ಪಿಯು ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಆಕಾಶ ಮನೋಜ್‌ ಈ ಸಾಧನ ಅಭಿವೃದ್ಧಿಪಡಿಸಿದ್ದಾರೆ. ಡಿಜಿಟಲ್‌ ಹಾಗೂ ಬೇಸಿಕ್‌ ಮಾದರಿಯ ಸಾಧನಗಳನ್ನು ಪರಿಚಯಿಸಲಾಗುತ್ತಿದ್ದು, ಬೇಸಿಕ್‌ ಮಾದರಿ ಕೇವಲ 900ರೂ.ಗಳಿಗೆ ಸಿಗಲಿದೆ.

Advertisement

ಸಂಶೋಧನೆ ಕಾರಣವೇನು?: ಸೈಲೆಂಟ್‌ ಹೃದಯಾಘಾತದಿಂದ ತಾತ ಮೃತಪಟ್ಟಾಗ ಈ ಸಾಧನ ಅಭಿವೃದ್ಧಿ ಪಡಿಸಬೇಕೆಂಬ ಚಿಂತನೆ ಮೂಡಿತು. ಸತತ ಮೂರು ವರ್ಷಗಳ ಸಂಶೋಧನೆ ನಂತರ ಇದು ಸಾಧ್ಯವಾಯಿತು. ಇದನ್ನು ಕೈ ಇಲ್ಲವೇ ಎದೆ ಭಾಗದಲ್ಲಿ ಧರಿಸಬಹುದಾಗಿದೆ. ಪ್ರತಿಯೊಬ್ಬರೂ ಈ ಸಾಧನವನ್ನು ಬಳಸಬಹುದು. ಆದರೆ ವಿಶೇಷವಾಗಿ ಸೈಲೆಂಟ್‌ ಹೃದಯಾಘಾತದ ಹೆಚ್ಚು ಸಾಧ್ಯತೆಯಿರುವ ಮಧುಮೇಹಿ, ಅಧಿಕ ರಕ್ತದೊತ್ತಡ ಹೊಂದಿದವರು, ವೃದ್ಧರಿಗೆ ವರದಾನ ಆಗಬಲ್ಲದು ಎನ್ನುತ್ತಾರೆ ಆಕಾಶ್‌.

ಹೃದಯಾಘಾತದಲ್ಲಿ ಎರಡು ಬಗೆ. ಹೃದಯಾಘಾತದ ಮೊದಲು ವ್ಯಕ್ತಿಗಳಿಗೆ ಕೆಲ ಲಕ್ಷಣಗಳು ಗೋಚರಕ್ಕೆ ಬರುತ್ತವೆ. ಇನ್ನೊಂದು ಯಾವುದೇ ಲಕ್ಷಣ ತೋರದೆ ಹೃದಯಾಘಾತವಾಗುತ್ತದೆ. ಇದನ್ನು ಸೈಲೆಂಟ್‌ ಹೃದಯಾಘಾತ ಎಂದೇ ಕರೆಯಲಾಗುತ್ತದೆ. ಇದರ ಬಗ್ಗೆ ಮಾಹಿತಿ ತಿಳಿಯುವಂತಾದರೆ ಅದೆಷ್ಟೋ ಜೀವಗಳನ್ನು ಉಳಿಸಬಹುದಲ್ಲ ಎಂಬ ಚಿಂತನೆ ಸಂಶೋಧನೆಗೆ ಕಾರಣವಾಯಿತು.

ಈ ಸಾಧನಗಳ ಪೈಕಿ ಡಿಜಿಟಲ್‌ ಮಾದರಿಯಲ್ಲಿ ಹೃದಯ ಬಡಿತ, ರಕ್ತದೊತ್ತಡ ಇನ್ನಿತರ ಮಾಹಿತಿ ಜತೆಗೆ ಹೃದಯಾಘಾತದ ಮುನ್ನೆಚ್ಚರಿಕೆ ದೊರೆಯುತ್ತದೆ. ಬೇಸಿಕ್‌ ಮಾದರಿ ಸಾಧನವನ್ನು ಅನಕ್ಷರಸ್ಥರು ಹಾಗೂ ಗ್ರಾಮೀಣ ಜನತೆ ದೃಷ್ಟಿಯಿಂದ ಮಾಡಲಾಗಿದೆ. ಹೃದಯಾ ಘಾತದ ಆರು ತಾಸು ಮೊದಲೇ ಸಾಧನ ವೈಬ್ರೆಷನ್‌ ಆರಂಭಿಸುತ್ತದೆ. ಇದರಿಂದ ರೋಗಿ ಎಚ್ಚೆತ್ತುಕೊಂಡು ವೈದ್ಯಕೀಯ ಚಿಕಿತ್ಸೆಗೆ ತೆರಳಲು ಸಹಕಾರಿ ಆಗಲಿದೆ ಎಂದು ಹೇಳುತ್ತಾರೆ. ಬಡವರಿಗೆ ಅನುಕೂಲವಾಗಲಿ ಗ್ರಾಮೀಣ ಬಡ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ಬೇಸಿಕ್‌ ಮಾದರಿ ಸಾಧನ  ವನ್ನು ಕೇವಲ 900ರೂ.ಗಳಿಗೆ ನೀಡಲಾಗುವುದು. ರಿಚಾರ್ಜ್‌ ಮಾಡಬಲ್ಲ ಸಾಧನ ಇದಾಗಿದ್ದು, 24 ಗಂಟೆಯೂ ಇದನ್ನು ಕಟ್ಟಿಕೊಳ್ಳಬೇಕಾಗಿದೆ. ಸಾಮಾನ್ಯವಾಗಿ ಬೆಳಗಿನ ಜಾವ ಮೂರರಿಂದ ಬೆಳಗ್ಗೆ ಹತ್ತು ಗಂಟೆಯೊಳಗೆ ಹೃದಯಾಘಾತ ಸಂಭವಿಸುವ ಸಾಧ್ಯತೆ ಅಧಿಕ. ಪ್ರತಿ ಮೂರು ತಾಸಿಗೊಮ್ಮೆ ರಕ್ತದೊತ್ತಡ, ರಕ್ತದಲ್ಲಿ ಸಕ್ಕರೆ ಪ್ರಮಾಣ, ರಕ್ತ ಸಂಚಲನ, ಹೃದಯ ಕಾರ್ಯನಿರ್ವಹಣೆ ಕುರಿತು ಈ ಸಾಧನ ವ್ಯಾಖ್ಯಾನಿಸುತ್ತದೆ. ಇನ್ನು ಈ ನೂತನ ಸಾಧನ ಕುರಿತು ವಿವರಣೆಗೆ
ಮುಂದಾದಾಗ ದಾಖಲೆ, ಸಾಕ್ಷಿ ಏನು, ವೈಜ್ಞಾನಿಕ ಪುರಾವೆ ಇದೆಯೇ ಎಂದೆಲ್ಲ ಕೆಲವರು ಕೇಳಿದ್ದರು. ಇನ್ನೂ ಕೆಲವರು ಟೀಕಿಸಿದ್ದರು. ಸುಮಾರು 254 ಜನರ ಮೇಲೆ ಈ ಸಾಧನದ ಪ್ರಯೋಗ ಮಾಡಿರುವ ಕುರಿತು ದಾಖಲೆ, ವೈಜ್ಞಾನಿಕ ವಿಶ್ಲೇಷಣೆ ಒದಗಿಸಿದ ಬಳಿಕ ಬಹುತೇಕ ಮಂದಿ ಸಮ್ಮತಿ ಸೂಚಿಸಿದರು. ದೆಹಲಿಯ ಏಮ್ಸ್‌ ಆಸ್ಪತ್ರೆ ಮೂಲಕ ಸಾಧನಗಳ ಪರಿಚಯ ಹಾಗೂ ಮಾರಾಟಕ್ಕೆ 
ಯೋಜಿಸಿದ್ದೇನೆ. ಅಲ್ಲದೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜತೆ ಒಡಂಬಡಿಕೆಗೆ ಸಹಿ ಹಾಕಿದ್ದೇನೆ. ಸಾಧನಕ್ಕೆ ಈಗಾಗಲೇ ಪೇಟೆಂಟ್‌ ಹೊಂದಿದ್ದೇನೆ ಎನ್ನುತ್ತಾರೆ ಆಕಾಶ್‌.

ಅಮರೇಗೌಡ ಗೋನವಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next