ಹಾಸನ: ಬಿತ್ತನೆ ಆಲೂಗಡ್ಡೆ ಮಾರಾಟ ಸೋಮವಾರದಿಂದ ಆರಂಭವಾಗಲಿದ್ದು, ಪಂಜಾಬ್ ನಿಂದ ಆಲೂಗಡ್ಡೆ ತರುವ ಲಾರಿಗಳು ಹಾಸನ ನಗರ ಪ್ರವೇಶಿಸದಂತೆ ನಿರ್ಬಂಧ ವಿಧಿಸುವುದೂ ಸೇರಿದಂತೆ ಆಲೂಗಡ್ಡೆ ಮಾರಾಟದ ವೇಳೆ ಗರಿಷ್ಠ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.
ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್. ಮಂಜೇಗೌಡರ ಅಧ್ಯಕ್ಷತೆಯಲ್ಲಿ ನಡೆದ ವರ್ತಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಆರ್. ಶ್ರೀನಿವಾಸಗೌಡ, ಬಿತ್ತನೆ ಆಲೂಗಡ್ಡೆ ಮತ್ತು ಈರುಳ್ಳಿ ಹೊತ್ತು ತರುವ ಹೊರ ರಾಜ್ಯಗಳ ಲಾರಿಗಳು ನೇರವಾಗಿ ಎಪಿಎಂಸಿ ಪ್ರಾಂಗಣಕ್ಕೆ ಬರುವಂತಿಲ್ಲ. ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿ ಗುರ್ತಿಸಿರುವ 10 ಎಕರೆ ಪ್ರದೇಶದಲ್ಲಿ ಹೊರ ರಾಜ್ಯಗಳಿಂದ ಸರಕು ಹೊತ್ತು ತಂದ ಲಾರಿಗಳು ನಿಲ್ಲಬೇಕು. ಅಲ್ಲಿಂದ ಸ್ಥಳೀಯ ಲಾರಿಗಳು ಹೋಗಿ ಬಿತ್ತನೆ ಆಲೂಗಡ್ಡೆ ಸೇರಿದಂತೆ ವಿವಿಧ ಸರಕು ತುಂಬಿಕೊಂಡು ಹಾಸನ ಎಪಿಎಂಸಿಗೆ ಬರಬೇಕು ಎಂದರು.
ಲಾರಿ ಚಾಲಕ, ಕ್ಲೀನರ್ ತಪಾಸಣೆ: ಹೊರ ರಾಜ್ಯಗಳಿಂದ ಬಂದ ಲಾರಿಯ ತಪಾಸಣೆ ಮಾಡಲಾಗುವುದು. ಲಾರಿ ಚಾಲಕ ಮತ್ತು ಕ್ಲೀನರ್ ಪರೀಕ್ಷೆಗೊಳಪಡಿಸಲು ಅಲ್ಲಿ ವೈದ್ಯ ಸಿಬ್ಬಂದಿ ಹಾಜರಿರುವರು. ಲಾರಿಯಲ್ಲಿ ಹೊರ ರಾಜ್ಯಗಳಿಂದ ಬಂದವರನ್ನು ಹಾಸನದ ಜನರೊಂದಿಗೆ ಬೆರೆಯಲು ಬಿಡುವುದಿಲ್ಲ. ಲಾರಿಯಲ್ಲಿ ಬಂದ ಚಾಲಕ ಮತ್ತು ಕ್ಲೀನರ್ ಸ್ಥಳೀಯ ಲಾರಿಗೆ ಅನ್‌ಲೋಡ್ ಮಾಡುವ ವರೆಗೂ ಲಾರಿಯಿಂದ ಕೆಳಗೆ ಇಳಿಯದಂತೆ ಕಟ್ಟೆಚ್ಚರ ವಹಿಸಲಾಗುವುದು ಎಂದು ಎಸ್ಪಿ ಶ್ರೀನಿವಾಸಗೌಡ ಸ್ಪಷ್ಟಪಡಿಸಿದರು.
ಹಾಸನ ಎಪಿಎಂಸಿ ಪ್ರಾಂಗಣದಲ್ಲಿ ಮುಂಜಾನೆಯಿಂದ 9 ಗಂಟೆವರೆಗೆ ತರಕಾರಿ ಸಗಟು ವಹಿವಾಟು ನಡೆಯಲಿದ್ದು, ಆನಂತರ ಬೆಳಗ್ಗೆ 10 ಗಂಟೆಯ ನಂತರ ಸಂಜೆ 5 ಗಂಟೆವರೆಗೆ ಮಾತ್ರ ಬಿತ್ತನೆ ಆಲೂಗಡ್ಡೆ ವ್ಯಾಪಾರ ನಡೆಸಲು ಅವಕಾಶ ನೀಡಲಾಗುವುದು. ಆಲೂಗಡ್ಡೆ ಖರೀದಿಸಲು ಬರುವ ರೈತರನ್ನು ತಂಡಗಳಾಗಿ ವಿಂಗಡಿಸಿ ಮಾರು ಕಟ್ಟೆಗೆ ಬಿಡಲಾಗುವುದು. ಕೆಲ ಸಮಯ ಮಾರುಕಟ್ಟೆಯಲ್ಲಿದ್ದು, ಆಲೂಗಡ್ಡೆ ಖರೀದಿಸಿ ಕೊಂಡು ರೈತರು ಹೊರಡಬೇಕು. ಆನಂತರ ಮತ್ತೂಂದು ರೈತರ ತಂಡ ಮಾರುಕಟ್ಟೆ ಪ್ರವೇಶಿಸಬೇಕು. ಸಂಜೆ 6.30ರ ನಂತರ ಮಾರುಕಟ್ಟೆಯಲ್ಲಿರಲು ಅವಕಾಶವಿಲ್ಲ ಎಂದರು.ಹೊರ ರಾಜ್ಯಗಳಿಂದ ಬಂದ ಲಾರಿಗಳಿಂದ ಆಲೂಗಡ್ಡೆ ಮತ್ತು ಈರುಳ್ಳಿ ತುಂಬಿಕೊಂಡು ಬರುವ ಲಾರಿಗಳು ಸಂಜೆ 6. 30 ರ ನಂತರ ರಾತ್ರಿ 12.30ರ ವರೆಗೂ ಎಪಿಎಂಸಿ ಪ್ರಾಂಗಣದೊಳಗೆ ಅನ್ ಲೋಡ್ ಮಾಡಲು ಅವಕಾಶ ಮಾಡಿಕೊಡಲಾಗುವುದು. ಮಾರುಕಟ್ಟೆಗೆ ಬರುವ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದರು.
ನಿಗದಿತ ದರದಲ್ಲೇ ಮಾರಾಟ: ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಅವರು ಮಾತನಾಡಿ, ಬಿತ್ತನೆ ಆಲೂಗಡ್ಡೆ ಖರೀದಿಗೆ ಆಗಮಿಸುವ ರೈತರಿಗೆ ಔಷಧ, ರಸಗೊಬ್ಬರವನ್ನೂ ಎಪಿಎಂಸಿ ಮಾರುಕಟ್ಟೆಯಲ್ಲಿಯೇ ಖರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು. ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ಗೋಪಾಲ್, ವರ್ತಕ ಸುರೇಶ್, ಎಪಿಎಂಸಿ ಕಾರ್ಯದರ್ಶಿ ಶ್ರೀ ಹರಿ, ಡಿವೈಎಸ್ಪಿ ಪುಟ್ಟಸ್ವಾಮಿ ಗೌಡ ಸಭೆಯಲ್ಲಿ ಹಾಜರಿದ್ದರು.