Advertisement

ಮಹಾ ಗಡಿಯಲ್ಲಿ ಕಟ್ಟೆಚ್ಚರ

06:45 PM Jun 28, 2021 | Team Udayavani |

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಪರಿಣಾಮ ರಾಜ್ಯದ ಗಡಿ ಭಾಗದಲ್ಲಿ ಪೊಲೀಸ್‌ ಹಾಗೂ ಕಂದಾಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿ ಮಹಾರಾಷ್ಟ್ರದ ಸಂಪರ್ಕ ರಸ್ತೆಗಳನ್ನು ಬಂದ್‌ ಮಾಡಿದೆ.

Advertisement

ರಾಜ್ಯದಿಂದ ಮಹಾರಾಷ್ಟ್ರಕ್ಕೆ ಸಂಪರ್ಕ ರಸ್ತೆಗಳಾದ ಗಡಿ ಭಾಗದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ-ದತ್ತವಾಡ, ಮಲಿಕವಾಡ-ಧಾನವಾಡ, ಸದಲಗಾ-ಧಾನವಾಡ ರಸ್ತೆಗಳನ್ನು ತಾಲೂಕಾಡಳಿತ ರವಿವಾರ ಬಂದ್‌ ಮಾಡಿದೆ. ರಾಜ್ಯದ ಗಡಿ ಹತ್ತಿರ ಹರಿಯುವ ದೂಧಗಂಗಾ ನದಿ ಸೇತುವೆ ಮೇಲೆ ರಸ್ತೆಗಳ ಮೇಲೆ ಮಣ್ಣು-ಮುಳ್ಳುಗಳಿಂದ ರಸ್ತೆ ಬಂದ್‌ ಮಾಡಲಾಗಿದೆ.

ನಿಪ್ಪಾಣಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೊಗನ್ನೊಳ್ಳಿ ಚೆಕ್‌ ಪೋಸ್ಟ್‌, ನಿಪ್ಪಾಣಿ ರಾಧಾನಗರಿ ರಸ್ತೆ ಚೆಕ್‌ ಪೋಸ್ಟ್‌, ಚಿಕ್ಕೋಡಿ-ಇಚಲಕರಂಜಿ ರಾಜ್ಯ ಹೆದ್ದಾರಿಯ ಬೋರಗಾಂವ ಬಳಿ ಪೊಲೀಸ್‌ ಇಲಾಖೆ ಚೆಕ್‌ ಪೋಸ್ಟ್‌ ಸ್ಥಾಪಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ನೆರೆಯ ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣದಿಂದ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರು ಆರ್‌.ಟಿ.ಪಿ.ಸಿ.ಆರ್‌. ನೆಗೆಟಿವ್‌ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಕೋವಿಡ್‌ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತದೆ. ರಾಜ್ಯದ ಸಾರ್ವಜನಿಕರು ಅನಗತ್ಯವಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಪ್ರವೇಶ ಮಾಡಬಾರದು ಎಂದು ಡಿವೈಎಸ್‌ಪಿ ಮನೋಜ ನಾಯಿಕ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಹೆಚ್ಚುತ್ತಿದೆ ಸೋಂಕು: ಇಡೀ ರಾಜ್ಯದಲ್ಲಿ ಎರಡನೆ ಅಲೆ ಇಳಿಮುಖವಾಗುತ್ತಿದೆ. ಆದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕಿನಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಗಡಿ ಜನರಲ್ಲಿ ಆತಂಕ ಹೆಚ್ಚುತ್ತಿದೆ. ಎರಡನೆ ಅಲೆಯ ಸೋಂಕು ಕಡಿಮೆ ಆಗುತ್ತಿಲ್ಲ, ಆಗಲೇ ಮೂರನೆ ಅಲೆ ಸದ್ದು ಮಾಡುತ್ತಿರುವುದು ಗಡಿ ಜನರ ನಿದ್ದೆಗೆಡಿಸಿದೆ. ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿ ಪೊಲೀಸ್‌ ಇಲಾಖೆ ಕಟ್ಟೆಚ್ಚರ ವಹಿಸಿದರೂ ಕೂಡಾ ಕಳ್ಳ ರಸ್ತೆ ಮೂಲಕ ಮಹಾರಾಷ್ಟ್ರದ ಜನರು ರಾಜ್ಯ ಪ್ರವೇಶ ಮಾಡುತ್ತಿರುವುದು ಸೋಂಕು ಹೆಚ್ಚಾಗಲು ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next