ಉಡುಪಿ: ಉಡುಪಿಯಲ್ಲಿ ಮದ್ಯಪ್ರಿಯರು ರಾಜ್ಯ ಸರಕಾರದ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯ ಕಾಂಗ್ರೆಸ್ ಚುನಾವಣೆ ಪೂರ್ವ ನೀಡಿದ ಉಚಿತ ಗ್ಯಾರಂಟಿ ಯೋಜನೆಗಳನ್ನು ಹಂತಹಂತವಾಗಿ ಜಾರಿ ಮಾಡುತ್ತಿದೆ. ಈ ನಡುವೆ ಮದ್ಯವನ್ನು ಉಚಿತವಾಗಿ ನೀಡುವಂತೆ ಮದ್ಯಪ್ರಿಯರು ಸರಕಾರದ ವಿರುದ್ಧ ಪ್ರತಿಭಟನೆ ನಡೆಸಿ, ಮನವಿ ಮಾಡಿದರು.
ಉಡುಪಿ ನಾಗರಿಕ ಸಮಿತಿ ಸಹಕಾರದಲ್ಲಿ ಮದ್ಯಪ್ರಿಯರು ಮಂಗಳವಾರ ಬೆಳಗ್ಗೆ ಚಿತ್ತರಂಜನ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮದ್ಯದ ಬಾಟಲಿಗೆ ಹೂಗಳಿಂದ ಅಲಂಕರಿಸಿ, ಆರತಿ ಬೆಳಗಿ, ಡೋಲು ಬಡಿದು ಗಮನ ಸೆಳೆದರು.
ನಾಗರಿಕ ಸಮಿತಿ ನಿತ್ಯಾನಂದ ಒಳಕಾಡು, ಗೋವಿಂದ ಶೆಟ್ಟಿ ಮಾತನಾಡಿ, ಸರಕಾರ ಉಚಿತ ಯೋಜನೆ ಮಾದರಿಯಲ್ಲಿ ಮದ್ಯಪ್ರಿಯರಿಗೂ ಬೆಳಗ್ಗೆ 90 ಎಂಎಲ್, ಸಂಜೆ 90 ಎಂಎಲ್ ಮದ್ಯ ಉಚಿತವಾಗಿ ನೀಡುವಂತೆ ಒತ್ತಾಯಿಸಿದರು. ಸರಕಾರಕ್ಕೆ ಹೆಚ್ಚು ಆರ್ಥಿಕ ಬಲ ನೀಡುವುದು ಮದ್ಯಪ್ರಿಯರ ಸುಂಕದಿಂದ. ಇದರಿಂದಾಗಿ ಉಚಿತ ಯೋಜನೆ ಜಾರಿಗೆ ಅನುಕೂಲವಾಗಿದೆ. ಇಷ್ಟೆಲ್ಲಾ ಸರಕಾರಕ್ಕೆ ಲಾಭವಾಗಿರುವ ಮಧ್ಯಪ್ರಿಯರಿಗೆ ಸರಕಾರ ಬಜೆಟ್ ನಲ್ಲಿ ಬೆಲೆ ಏರಿಕೆ ಮಾಡಿ ಅನ್ಯಾಯ ಮಾಡಿದೆ. ಒಂದೇ ಉಚಿತ ನೀಡಿ, ಇಲ್ಲವೇ ಮದ್ಯ ಬಂದ್ ಮಾಡಿ ಎಂದು ಮದ್ಯಪ್ರಿಯರು ಸರಕಾರವನ್ನು ಒತ್ತಾಯಿಸಿದರು.
ಶಂಕರ, ಶೇಖರ, ಹನುಮಂತ, ನೀಲಪ್ಪ, ಮಂಜು, ಕನಕಪ್ಪ ಮೊದಲಾದವರು ಇದ್ದರು.