Advertisement

ಮದ್ಯ ಸೇವಿಸಿದರೆ ವಾಹನ ಸ್ಟಾರ್ಟೇ ಆಗಲ್ಲ!

12:28 AM Nov 12, 2019 | Lakshmi GovindaRaju |

ಬೆಂಗಳೂರು: ನೀವು ಮದ್ಯ ಸೇವಿಸಿ ವಾಹನ ಚಾಲನೆ ಮಾಡಲು ಮುಂದಾದರೆ ಈ ಸಾಧನ ಅವಕಾಶ ನೀಡುವುದಿಲ್ಲ! ಅಷ್ಟೇ ಅಲ್ಲ, ಈ ಸಾಧನದ ಕಣ್ತಪ್ಪಿಸಿ ವಾಹನ ಚಾಲನೆ ಮಾಡುವುದು ಅಸಾಧ್ಯ. ಇಂಥದ್ದೊಂದು ಸಾಧನವನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ಖಾಸಗಿ ಸಂಸ್ಥೆಯ ಸಿಇಒ ರಾಮನಾಥ್‌ ಮಂದಲಿ ಎಂಬವರು ಆವಿಷ್ಕಾರ ಮಾಡಿದ್ದಾರೆ ಇದರ ಹೆಸರು “ಆಲ್ಕೋಲಾಕ್‌’.

Advertisement

ರಾಮನಾಥ ಮಂದಲಿ ಎಂಬ ಸಂಶೋಧಕರು ಹದಿನೈದು ವರ್ಷಗಳ ನಿರಂತರ ಪ್ರಯತ್ನದಿಂದ ಈ ಸಾಧನ ಅಭಿವೃದ್ಧಿ ಪಡಿಸಿದ್ದಾರೆ. ಚಾಲಕರು ವಾಹನ ಚಾಲು ಮಾಡುವ ಮುನ್ನ ಆಲ್ಕೊಲಾಕ್‌ ಸಾಧನಕ್ಕೆ ಒಮ್ಮೆ ಊದಬೇಕು. ಒಂದು ವೇಳೆ ಚಾಲಕ ಮದ್ಯ ಸೇವನೆ ಮಾಡಿದ್ದರೆ, ಕೂಡಲೇ ಆ್ಯಪ್‌ ಮುಖಾಂತರ ಮಾಲೀಕ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದು. ಒಂದು ವೇಳೆ ಚಾಲನೆ ವೇಳೆ ಚಾಲಕ ಮದ್ಯ ಸೇವಿಸಿದರೂ, ಅದು ಮಾಲೀಕನಿಗೆ ತಿಳಿಯುತ್ತದೆ.

ತಮ್ಮ ವಾಹನದ ಭದ್ರತಾ ದೃಷ್ಟಿಯಿಂದ ಈ ಸಾಧನ ಮಾಲೀಕರಿಗೆ ನೆರವಾಗಲಿದೆ. ಚಾಲಕನ ಸ್ಥಿತಿಗತಿಗಳ ಇಂಚಿಂಚೂ ಮಾಹಿತಿ ಮಾಲೀಕನ ಮೊಬೈಲ್‌ಗೆ ರವಾನೆಯಾಗುತ್ತದೆ. ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮನಾಥ್‌, ಇದು ವಾಹನಕ್ಕೆ ಭದ್ರತೆ ನೀಡುವ ಜತೆಗೆ ಚಾಲಕನ ಪ್ರಾಣವನ್ನೂ ರಕ್ಷಿಸುತ್ತದೆ. ಈ ಸಾಧನದಲ್ಲಿ ಸ್ಪೈ ಕ್ಯಾಮೆರಾ ಇದ್ದು, ಅದು ಚಾಲಕನ ಗಮನಕ್ಕೆ ಬರುವುದಿಲ್ಲ. ಚಾಲಕನ ಚಲನವಲನಗಳ ಮೇಲೂ ಇದು ನಿಗಾ ಇಡುವುದರ ಜತೆಗೆ ಮದ್ಯ ಸೇವನೆಯಿಂದ ಚಾಲಕರನ್ನು ಅಪಘಾತದಿಂದ ತಡೆಯಲಿದೆ ಎಂದರು.

ಮಾಲೀಕರು ಪಾನಮತ್ತ ಚಾಲಕರಿಂದ ತಮ್ಮ ವಾಹನವನ್ನು ರಕ್ಷಿಸಿಕೊಳ್ಳಬಹುದು. ಮೊಬೈಲ್‌ ಮೂಲಕವೇ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದಾಗಿದೆ. ಈ ಸಾಧನದ ಬೆಲೆ 9 ಸಾವಿರ ರೂ. ನಿಗದಿ ಮಾಡಲಾಗಿದ್ದು, ಇದನ್ನು ಕಾರು, ಟ್ರಕ್‌, ಲಾರಿಗಳಲ್ಲಿ ಬಳಸಬಹುದು. ಆಂಧ್ರಪ್ರದೇಶ ಸಾರ್ವಜನಿಕ ಬಸ್‌ಗಳಲ್ಲಿ ಈಗಾಗಲೇ ಈ ಸಾಧನ ಅಳವಡಿಸಲಾಗಿದೆ. ಸರಕು ಸಾಗಣೆ ವಾಹನಗಳಿಗೂ ಈ ಸಾಧನ ಹೆಚ್ಚು ಉಪಯುಕ್ತ ಎಂದರು.

ರಾಜ್ಯದ ಖಾಸಗಿ ಬಸ್‌ಗಳಲ್ಲೂ ಆಲ್ಕೋಲಾಕ್‌ ಬಳಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲೂ ಈ ಸಾಧನ ಅಳವಡಿಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಹಿತಿಗೆ 9916686615 ಸಂಪರ್ಕಿಸಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next