ಲಂಡನ್ : ಭಾರತದೆದುರಿನ ಐದು ಪಂದ್ಯಗಳ ಟೆಸ್ಟ್ ಕ್ರಿಕೆಟ್ ಸರಣಿಯನ್ನು 4-0 ಅಂತರದಲ್ಲಿ ಸೋತು ತೀವ್ರ ಮುಖಭಂಗ ಅನುಭವಿಸಿದ್ದ ಇಂಗ್ಲಂಡ್ ತಂಡದ ಪ್ರತಿಭಾವಂತ ನಾಯಕ ಅಲಿಸ್ಟರ್ ಕುಕ್, ಸೋಲಿನ ಹೊಣೆಗಾರಿಕೆ ಹೊತ್ತು ಇಂಗ್ಲಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಭಾರತ, ಒಂದು ಟೆಸ್ಟ್ ಪಂದ್ಯವನ್ನು, ನಾಯಕ ವಿರಾಟ್ ಕೊಹ್ಲಿ ಅವರ ಅತ್ಯಂತ ಸಹನೆಯ ಬ್ಯಾಟಿಂಗ್ ಫಲವಾಗಿ, ಸೋಲಿನ ದವಡೆಯಿಂದ ತಪ್ಪಿಸಿಕೊಂಡು ಡ್ರಾ ಮಾಡಿಕೊಂಡಿತ್ತು. ಕೊಹ್ಲಿ ಬ್ಯಾಟಿಂಗ್ ಅಲ್ಲದಿದ್ದರೆ ಇಂಗ್ಲಂಡ್ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದು ಬಹುತೇಕ ಖಚಿತವಿತ್ತು.
ಅಲಿಸ್ಟರ್ ಕುಕ್ ಇಂಗ್ಲಂಡ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿರುವುದನ್ನು ಇಂಗ್ಲಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತಪಡಿಸಿದೆ.
2012ರ ಆಗಸ್ಟ್‌ನಲ್ಲಿ ಇಂಗ್ಲಂಡ್ ತಂಡದ ನಾಯಕತ್ವ ವಹಿಸಿಕೊಂಡಿದ್ದ ತಮ್ಮ ಕಪ್ತಾನಿಕೆಯಲ್ಲಿ ಭಾರೀ ಯಶಸ್ಸನ್ನು ಸಾಧಿಸಿ 59 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಕುಕ್ ಅವರು 2013 ಮತ್ತು 2015ರಲ್ಲಿ ಆ್ಯಷಸ್ ಸರಣಿ, ತವರಿನಲ್ಲಿ ಭಾರತ ಹಾಗೂ ದ.ಆಫ್ರಿಕ ತಂಡವನ್ನು ಪರಾಭವಗೊಳಿಸಿ ತಮ್ಮ ಕಪ್ತಾನಿಕೆಯ ಪ್ರಾಬಲ್ಯವನ್ನು ಮೆರೆದಿದ್ದರು.
ಕುಕ್ ರಾಜೀನಾಮೆಯಿಂದ ತೆರವಾಗಿರುವ ಇಂಗ್ಲಂಡ್ ಟೆಸ್ಟ್ ನಾಯಕತ್ವದ ಸ್ಥಾನವನ್ನು ಈಗಿನ್ನು ಜೋ ರೂಟ್ ತುಂಬುವ ಸಾಧ್ಯತೆ ಇದೆ.