Advertisement

ಅಯ್ಯೋ…ದೇವರೇ ಮಳೆ ನಿಲ್ಲಿಸಪ್ಪ!

07:57 AM Oct 17, 2017 | |

ಬೆಂಗಳೂರು: ಅಯ್ಯೋ ದೇವರೇ ಈ ಮಳೆರಾಯನ ಕಾಟ ನಿಲ್ಲಿಸಿಬಿಡಪ್ಪ…! ಮಳೆ ಸುರಿ ಸಲು ಪ್ರಾರ್ಥನೆ, ಯಾಗಗಳು ನಡೆಯುವುದು ಸಾಮಾನ್ಯ. ಆದರೆ, ಈಗ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದ ಹೈರಾಣವಾರುವ ಬೆಂಗಳೂರು ಮತ್ತು ರಾಜ್ಯದ ಹಲವೆಡೆ ಜನರು ಮಳೆ ನಿಲ್ಲಿಸಲು ಪ್ರಾರ್ಥನೆಗೆ ಮೊರೆ ಹೋಗಬೇಕಾದ ಕಾಲ ಬಂದಿದೆ! ಬೆಂಗಳೂರಿನ ಮಳೆ ದುರಂತ ಗಮನಿಸಿ ಅಮೆರಿಕದಲ್ಲಿ ನೆಲೆಸಿರುವ ಕನ್ನಡತಿಯೊಬ್ಬರು ಶರಭೇಶ್ವರ ಜಪ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

Advertisement

ಮಳೆ ನಿಯಂತ್ರಣಕ್ಕೆ ಬಂದು, ಜನರ ಪ್ರಾಣ ಉಳಿಯಲಿ ಎಂಬ ಉದ್ದೇಶದಿಂದ ಈ ಜಪ ಆರಂಭಿಸಿದ್ದಾರೆ. ಅಮೆರಿಕದ ಫ್ಲೋರಿಡಾ ಟ್ಯಾಂಪಾದಲ್ಲಿ ಜಪನಿರತ ಮಹಿಳೆ ಹೆಸರು ಶೈಲಾ. ಅವರಿಗೆ ಈ ವಿಶಿಷ್ಟ ಪ್ರಯೋಗವನ್ನು ತಿಳಿಸಿದ್ದು ಮಂತ್ರತಂತ್ರ ಮುದ್ರಾ ಗುರುಗಳೆಂದು ಜನಪ್ರಿಯರಾಗಿರುವ, ಶಿರ್ಡಿ ಸಾಯಿ ಭಿಕ್ಷಾ ಕೇಂದ್ರದ ಸಂಸ್ಥಾಪಕರಾಗಿರುವ ಲಕ್ಷ್ಮೀ ಶ್ರೀನಿವಾಸ ಅವರು. ಬೆಂಗಳೂರಿನಲ್ಲೇ ಇರುವ ಈ ಮಹಿಳೆಯ ಗುರುಗಳಾದ ಲಕ್ಷ್ಮೀ ಶ್ರೀನಿವಾಸ ಇನ್ನು ಮೂರು ದಿನ ಕಾದು ಶರಭ ಪ್ರಯೋಗ ಮಾಡಲು ನಿರ್ಧರಿಸಿದ್ದಾರೆ. ಟ್ಯಾಂಪಾದ ಮೆಟ್‌ಲೆçಫ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಶೈಲಾ ರಾಜ್ಯದ ಕೋಲಾರದವರು. 1980 ರಿಂದ ಅಮೆರಿಕದಲ್ಲೇ ನೆಲೆಸಿದ್ದಾರೆ. 

“”ಒಂದೆರಡು ತಿಂಗಳ ಹಿಂದೆ ಅಮೆರಿಕದ ಫ್ಲೋರಿಡಾಕ್ಕೆ ಆ್ಯಂಡ್ರೂ ಹರಿಕೇನ್‌ ಅಪ್ಪಳಿಸಿತ್ತು. ಪರಿಣಾಮ ಇಡೀ ಫ್ಲೋರಿಡಾ ಮುಳುಗುವ ಅಪಾಯ ಎದುರಾಗಿತ್ತು. ಆಗಲೂ ಗುರುಗಳ ಮಾರ್ಗದರ್ಶನದಂತೆ ಶರಭ ಜಪ ಮಾಡಿದ್ದೇನೆ, ಅದು ಫ‌ಲಕಾರಿಯೂ ಆಗಿದೆ. ಬೆಂಗಳೂರಿನ ಜನತೆ ಈ ಜಪ ಮಾಡಲಿ, ಅದು ನಿಜಕ್ಕೂ ಪರಿಸ್ಥಿತಿಯನ್ನು ಸುಧಾರಿಸುತ್ತದೆ” ಎನ್ನುತ್ತಾರೆ ಶೈಲಾ. ಸಾಮಾನ್ಯವಾಗಿ ಮಳೆ ಬರಲಿ ಎಂದು ಪರ್ಜನ್ಯ ಜಪ ನಡೆಸಲಾಗುತ್ತದೆ. ಮಳೆ ದೇವತೆ ಎಂದು ಖ್ಯಾತನಾಗಿರುವ ಶೃಂಗೇರಿ ಸಮೀಪದ ಕಿಗ್ಗಾ ಋಷ್ಯಶೃಂಗನಿಗೆ ಪ್ರಾರ್ಥನೆ ಮಾಡಲಾಗುತ್ತದೆ. ವರುಣ ಹೋಮವನ್ನೂ ಮಾಡಲಾಗುತ್ತದೆ. ಕಪ್ಪೆಗಳ ಮದುವೆಯಂಥ ಜಾನಪದ ಆಚರಣೆಗಳೂ ನಮ್ಮಲ್ಲಿವೆ. ಆದರೆ, ಮಳೆ ನಿಲ್ಲಿಸುವ ಆಚರಣೆ ಬಲು ಅಪರೂಪ.

ಏನಿದು ಶರಭೇಶ್ವರ ಜಪ?
ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ ಶಿರ್ಡಿ ಸಾಯಿ ಬಾಬಾ ಅವರು ಈ ಜಪ ಮಾಡಿದ್ದರಂತೆ. ಶಿವನ ಒಂದು ಅವತಾರ ಶರಭೇಶ್ವರ ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ. ಭಗವಾನ್‌ ವಿಷ್ಣು ಉಗ್ರ ನರಸಿಂಹಾವತಾರ ಎತ್ತಿದಾಗ ಅವನನ್ನು ಸಾಂತ್ವನಗೊಳಿಸಲು ಶಿವ ಈ ರೂಪ ಧರಿಸಿದನಂತೆ. 8 ಕಾಲಿರುವ, ಮುಖ ಸಿಂಹದಂತಿರುವ, ಹಕ್ಕಿಯ ರೆಕ್ಕೆಗಳನ್ನು ಈ ರೂಪ ಹೊಂದಿದೆ. ಶರಭೇಶ್ವರ, ಪಂಚಭೂತಗಳನ್ನು ನಿಯಂತ್ರಿಸಬಲ್ಲ ಶಕ್ತಿ ಹೊಂದಿದ್ದಾನೆ ಎಂಬ ನಂಬಿಕೆ ಇದ್ದು, ಅವನನ್ನು ಓಂ ನಮೋ ಭಗವತೇ ಶರಭಾಯ ಜ್ವಲ ಜ್ವಲ ಪ್ರಜ್ವಲ ಪ್ರಜ್ವಲ ಸಹಾಯ  ಸಹಾಯ ರಕ್ಷ ರಕ್ಷ ಸರ್ವ ಭೂತೋಬ್ಯಾಂ ಫ‌ಟ್‌ ಸ್ವಾಹಾ ಎಂಬ ಬೀಜಾಕ್ಷರಿಯಿಂದ ಜಪಿಸಬೇಕು.ಪ್ರತಿ 9 ಜಪಕ್ಕೆ ಒಂದು ಅಕ್ಷತೆ ಕಾಳು, ಹೂ ಅರ್ಪಿಸಬೇಕೆನ್ನುವುದು ತಂತ್ರವಿಧಿಯಾಗಿದೆ. 

●ಪೃಥ್ವಿಜಿತ್‌ ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next