Advertisement

ಪಶ್ಚಿಮಘಟ್ಟ ಪರಿಸರ ಸೂಕ್ಷ್ಮ ವಲಯ: 6 ತಿಂಗಳಲ್ಲಿ ಅಧಿಸೂಚನೆ ಹೊರಡಿಸಿ

06:00 AM Sep 02, 2018 | Team Udayavani |

ಹೊಸದಿಲ್ಲಿ: ಪ. ಘಟ್ಟದಲ್ಲಿ ಘೋಷಿತ ಪರಿಸರ ಸೂಕ್ಷ್ಮ ವಲಯದ ಪ್ರಮಾಣ ಕಡಿಮೆ ಮಾಡದಂತೆ ಮತ್ತು ಇನ್ನು 6 ತಿಂಗಳಲ್ಲಿ ಅಧಿ ಸೂಚನೆ ಹೊರಡಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (ಎನ್‌ಜಿಟಿ) ಆದೇಶಿಸಿದೆ. ಕೇರಳ ಹಾಗೂ ಕೊಡಗಿನಲ್ಲಿ ಉಂಟಾದ ಪ್ರವಾಹ ಮತ್ತು ಭೂ
ಕುಸಿತಕ್ಕೆ ಪ. ಘಟ್ಟದಲ್ಲಿ ಉಂಟಾ ಗಿರುವ ಪರಿಸರ ಹಾನಿಯೇ ಕಾರಣ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಎನ್‌ಜಿಟಿ ಈ ಆದೇಶ ನೀಡಿದೆ. ಸದ್ಯ ಕರ್ನಾಟಕ ಸಹಿತ ಆರು ರಾಜ್ಯಗಳಲ್ಲಿನ 56,825 ಚದರ ಕಿ.ಮೀ. ಭೂ ಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಪರಿಗಣಿಸಲಾಗಿದೆ. ಅಲ್ಲದೆ ಕರಡು ಅಧಿಸೂಚನೆ ಯಲ್ಲಿ ಯಾವುದೇ ಬದಲಾವಣೆ ಮಾಡದೆ ಮುಂದಿನ ಆರು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದೂ ಎನ್‌ಜಿಟಿ ಆದೇಶಿಸಿದೆ. ಗೋವಾ ಫೌಂಡೇಶನ್‌ ಸಲ್ಲಿಸಿದ ದೂರಿನ ವಿಚಾರಣೆ ವೇಳೆ ಈ ಆದೇಶ ನೀಡಿರುವ ಎನ್‌ಜಿಟಿ, ಗುರುತಿಸಲಾದ ಭೂಭಾಗದಲ್ಲಿ ಇಳಿಕೆ ಮಾಡುವುದಾದಲ್ಲಿ ಮೊದಲು ತನ್ನ ಅನುಮತಿ ಪಡೆಯಬೇಕು ಎಂದೂ ಸೂಚಿಸಿದೆ. 

Advertisement

ಪ. ಘಟ್ಟ ವಲಯ ಸಂರಕ್ಷಣೆ ಕುರಿತಂತೆ ಡಾ| ಕಸ್ತೂರಿರಂಗನ್‌ ವರದಿ ಆಧರಿಸಿ 2017ರ ಫೆ.27 ರಂದು ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು 56,825 ಚ.ಕಿ.ಮೀ. ವ್ಯಾಪ್ತಿಯ ಭೂಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂಬುದಾಗಿ ಘೋಷಿಸುವ ಕುರಿತು ಕರಡು ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಪ. ಘಟ್ಟ ವ್ಯಾಪ್ತಿಗೆ ಬರುವ ಕರ್ನಾಟಕ, ಗುಜರಾತ್‌, ಕೇರಳ, ಮಹಾರಾಷ್ಟ್ರ, ಗೋವಾ ಹಾಗೂ ತಮಿಳುನಾಡು ರಾಜ್ಯಗಳಿಂದ ಆಕ್ಷೇಪಣೆ ಕೇಳಿತ್ತು. ಇಸ್ರೋ ಮಾಜಿ ಮುಖ್ಯಸ್ಥ ಕೆ. ಕಸ್ತೂರಿರಂಗನ್‌ ಸಮಿತಿ 2013ರಲ್ಲಿ ಸಲ್ಲಿಸಿದ್ದ ವರದಿಯಲ್ಲಿ 59,940 ಚ. ಕಿ.ಮೀ. ಭೂಭಾಗವನ್ನು ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಲಾಗಿತ್ತಾದರೂ 2017ರಲ್ಲಿ ಕರಡು ಅಧಿಸೂಚನೆ ಹೊರಡಿಸು ವಾಗ ಈ ಪೈಕಿ ಕೆಲವು ಪ್ರದೇಶಗಳನ್ನು ಕೈಬಿಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next