Advertisement

ಆಲಂಕಾರು ಪೇಟೆ: ಕುಡಿಯುವ ನೀರಿಗೂ ಹಾಹಾಕಾರ !

05:38 AM Feb 25, 2019 | |

ಆಲಂಕಾರು : ಕಡಬ ತಾ| ನ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಆಲಂಕಾರು ಗ್ರಾಮ ಮತ್ತು ಪೇಟೆ ಹಲವು ಗ್ರಾಮಗಳ ಸಂಪರ್ಕಕ್ಕೆ ರಹದಾರಿಯನ್ನೇ ನಿರ್ಮಿಸಿದೆ. ಇಂತಹ ಪಟ್ಟಣದಲ್ಲೇ ಸಾರ್ವಜನಿಕರು ಕುಡಿಯುವ ನೀರಿಗಾಗಿ ಬವಣೆ ಪಡುವಂತಾಗಿದೆ.

Advertisement

ಕುಮಾರಧಾರಾ ನದಿಗೆ ಶಾಂತಿಮೊಗರು ಸೇತುವೆ ಸಂಪರ್ಕಕ್ಕೆ ಮುಕ್ತವಾದ ಬಳಿಕ ಆಲಂಕಾರು ಪೇಟೆಯು ಹಲವು ಗ್ರಾಮಗಳನ್ನು ಸಂಪರ್ಕಿಸುವ ಕೇಂದ್ರವಾಗಿದೆ. ನೆಲ್ಯಾಡಿ, ಕುಂತೂರು, ಪೆರಾಬೆ ಮೊದಲಾದ ಪ್ರದೇಶಗಳಿಂದ ಪುತ್ತೂರಿಗೆ ಹೋಗುವ ಜನ ಆಲಂಕಾರು ಪೇಟೆಯಾಗಿಯೇ ಪ್ರಯಾಣ ಬೆಳೆಸುತ್ತಾರೆ. 

ಈ ಕಾರಣದಿಂದಾಗಿ ಆಲಂಕಾರು ಪೇಟೆಯು ಬೆಳಗ್ಗೆಯಿಂದ ಸಂಜೆವರೆಗೆ ಜನಸಂದಣಿಯಿಂದ ತುಂಬಿರುತ್ತದೆ. ಅವರು ಪೇಟೆಯಲ್ಲಿರುವ ಹೊಟೇಲ್‌ಗ‌ಳಿಗೆ ಧಾವಿಸಿ ನೀರು ಕುಡಿಯಬೇಕು ಅಥವಾ ಬಾಟಲಿ ನೀರು ಖರೀದಿಸಿ ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಿಯಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಟ್ಯಾಂಕ್‌ ನಿರ್ಮಾಣವಾಗಿಲ್ಲ
ಕೆಲ ವರ್ಷಗಳ ಹಿಂದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಲಂಕಾರು ಗ್ರಾಮದ ಒಕ್ಕೂಟಗಳು ಪೇಟೆ ಪ್ರವೇಶ ದ್ವಾರದ ಬಳಿ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ ಅನ್ನು ನಿರ್ಮಿಸಿ ಜನತೆಗೆ ನೀಡಿತ್ತು. ಇದಕ್ಕೆ ಗ್ರಾಮ ಪಂಚಾಯತ್‌ ಉಚಿತ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ ಯೋಜನೆಯ ಉದ್ದೇಶವನ್ನು ಯಶಸ್ವಿಗೊಳಿಸಿತ್ತು. ಆದರೆ ರಸ್ತೆ ದುರಸ್ತಿಯ ನೆಪದಲ್ಲಿ ತೆರವಾದ ಟ್ಯಾಂಕ್‌ ಅನ್ನು
ಮರು ಸ್ಥಾಪಿಸಲು ಯಾವ ಸಂಘಟನೆಯಾಗಲೀ, ಸ್ಥಳೀಯಾಡಳಿತ ಮಂಡಳಿಯಾಗಲೀ, ನೀರಿನ ಟ್ಯಾಂಕ್‌ ಅಳವಡಿಸಲು ಮುತುವರ್ಜಿ ವಹಿಸದಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಅಂದು ಇದ್ದ ನೂರು ಲೀಟರ್‌ನ ಸಿಂಟೆಕ್ಸ್‌ ಡ್ರಂ ಸಹ ಇಂದು ಮಾಯವಾಗಿದೆ.

ಮುಂದೆ ಬಾರದ ಸಂಘಟನೆಗಳು
ಆಲಂಕಾರು ವ್ಯಾಪ್ತಿಯಲ್ಲಿ ಕಾರ್ಯಾಚರಿಸುವ ವಿವಿಧ ಸಂಘಟನೆಗಳು ಸ್ಥಳೀಯಾಡಳಿತದೊಂದಿಗೆ ಸದಾ ಕೈ ಜೋಡಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ. ಆದರೆ ಈ ಸುಡು ಬಿಸಿಲಿನ ತಾಪಕ್ಕೆ ಆಲಂಕಾರು ಪೇಟೆಯನ್ನು ಸಂಪರ್ಕಿಸುವ ಸಾರ್ವಜನಿಕರು ಕುಡಿಯುವ ನೀರಿನ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ ಎನ್ನುವುದು ಯಾವ ಸಂಘಟನೆಗೂ ಇನ್ನೂ ಮನವರಿಕೆಯಾಗದಿರುವುದು ವಿಶೇಷವಾಗಿದೆ. ಈ ವಿಚಾರ ಆಲಂಕಾರಿನಲ್ಲಿ ಕಾರ್ಯಾಚರಿಸುವ ಯಾವುದೇ ಸಂಘಟನೆಗಳಿಗೆ ಈ ಮೊದಲೇ ತಿಳಿದಿದ್ದರೆ ಸ್ಥಳಿಯಾಡಳಿತವನ್ನು ಕಾಯದೆ ಯಾವಾಗಲೂ ನೀರಿನ ಟ್ಯಾಂಕ್‌ ನಿರ್ಮಾಣ ಆಗುತ್ತಿತ್ತು ಎಂದು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

Advertisement

ನೀರಿನ ವ್ಯವಸ್ಥೆ: ಚರ್ಚೆ
ಪೇಟೆಯಲ್ಲಿ ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎನ್ನುವ ವಿಚಾರ ಮನವರಿಕೆಯಾಗಿದೆ. ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದ್ದರೂ, ನೀರು ಪೂರೈಕೆಗೆ ಕಂಪೆನಿ ವಿಳಂಬ ನೀತಿ ಅನುಸರಿಸುತ್ತಿದೆ. ಯಾವುದೇ ಸಂಘ ಸಂಸ್ಥೆಗಳು ಟ್ಯಾಂಕ್‌ ಅಳವಡಿಕೆಗೆ ಮುಂದಾದರೆ ಗ್ರಾಮ ಪಂಚಾಯತ್‌ನಿಂದ ಉಚಿತ ನೀರು ಸರಬರಾಜು ಮಾಡಲಾಗುವುದು. ಅಲ್ಲದೆ ಈ ಬಗ್ಗೆ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. 
– ಸುನಂದಾ ಬಾರ್ಕುಲಿ
ಆಲಂಕಾರು ಗ್ರಾ.ಪಂ. ಅಧ್ಯಕ್ಷೆ 

ಸದಾನಂದ ಆಲಂಕಾರು

Advertisement

Udayavani is now on Telegram. Click here to join our channel and stay updated with the latest news.

Next