Advertisement

ಆಲಂಕಾರು: ಸಾರ್ವಜನಿಕ ಶೌಚಾಲಯ ಕಾಮಗಾರಿ ಸ್ಥಗಿತ

01:40 AM Feb 17, 2022 | Team Udayavani |

ಆಲಂಕಾರು: ಮರು ನಿರ್ಮಾಣದ ಉದ್ದೇಶದಿಂದ ತೆರವು ಗೊಳಿಸಿದ್ದ ಸಾರ್ವಜನಿಕ ಶೌಚಾಲಯದ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

Advertisement

ಆಲಂಕಾರು ಪೇಟೆಯ ಬಸ್‌ ತಂಗು ದಾಣದ ಬಳಿಯಿದ್ದ ತನ್ನ ಅಧೀನದ ಶೌಚಾಲಯವನ್ನು ಗ್ರಾಮ ಪಂಚಾ ಯತ್‌ ಒಂದು ತಿಂಗಳ ಮೊದಲು ತೆರವುಗೊಳಿಸಿತ್ತು. ಇದೀಗ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ಮೀನಮೇಷ ಎಣಿಸುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

ಆರಂಭದಲ್ಲೇ ಕಳಪೆ
ಕಾಮಗಾರಿ
ಸುಮಾರು ಹತ್ತು ವರ್ಷಗಳ ಹಿಂದೆ ಈ ಶೌಚಾಲಯವನ್ನು ನಿರ್ಮಿಸಲಾಗಿತ್ತು. ನಿರ್ಮಾಣದ ಕಾಮಗಾರಿಯು ಕಳಪೆ ಯಾಗಿದೆ ಎಂದು ಆರೋಪಿಸಿ ಆರಂಭ ದಲ್ಲೇ ಸಾರ್ವಜನಿಕರು ನಿರ್ಮಾಣಕ್ಕೆ ತಡೆಹಿಡಿದ್ದರು. ಬಳಿಕ ಗುತ್ತಿದಾರರು ಪಂಚಾಂಗವನ್ನು ಮರುನಿರ್ಮಿಸಿ ಕಾಮಗಾರಿಯ ಗುಣಮಟ್ಟ ಕಾಯ್ದು ಕೊಳ್ಳುವ ಬಗ್ಗೆ ಭರವಸೆ ನೀಡಿದ ಬಳಿಕ ಮುಂದುವರಿಸಲಾಗಿತ್ತು. ಆದರೆ ಶೌಚಾಲಯದ ಗುಂಡಿ ಆಳವಾಗಿರದ ಪರಿಣಾಮ ಒಂದು ವರ್ಷದಲ್ಲಿಯೇ ಶೌಚಾಲಯ ತುಂಬಿ ತುಳುಕಿತ್ತು. ಮಳೆಗಾಲದಲ್ಲಿ ಈ ಶೌಚಾಲಯ ನೀರು ತುಂಬಿ ಬರುವ ಕಾರಣ ಸಾರ್ವಜನಿಕರು ಬಳಸದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ದುರಸ್ತಿಗೊಳಿಸುವಂತೆ ಸಾರ್ವಜನಿಕರು ಸ್ಥಳಿಯಾಡಳಿತಕ್ಕೆ ಒತ್ತಡ ಹೇರಿದ್ದರು. ಒಂದು ತಿಂಗಳ ಹಿಂದೆ ಹಳೆಯ ಕಟ್ಟಡವನ್ನು ಕೆಡವಿ ಹಾಕಲಾಗಿತ್ತು. ಬೃಹತ್‌ ಶೌಚಾಲಯದ ಗುಂಡಿಯನ್ನು ಬಸ್‌ ತಂಗುದಾಣದ ಪಕ್ಕದಲ್ಲೇ ನಿರ್ಮಾಣ ಮಾಡಲಾಗಿದೆ. ಇದರಿಂದ ಯಾವ ಕ್ಷಣದಲ್ಲಿಯೂ ಅಪಾಯ ಸಂಭವಿಸಬಹುದಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆಲಂಕಾರು ಪೇಟೆಗೆ ಬಂದ ಜನರು ಶೌಚಾಲಯಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ. ಯಾವುದಾದರು ಕಚೇರಿ ಅಥವಾ ಅಂಗಡಿಗಳ ಶೌಚಾಲಯಕ್ಕೆ ಮೊರೆ ಹೋಗಬೇಕಾದ ಅನಿವಾರ್ಯತೆ ಇದೆ.

ಇಚ್ಛಾ ಶಕ್ತಿಯ ಕೊರತೆ
ಶೌಚಾಲಯದ ಕಾಮಗಾರಿಯನ್ನು ಸಮರ್ಪಕವಾಗಿ ನಿರ್ವಹಿಸಬಲ್ಲ ಗುತ್ತಿಗೆದಾರರಿಗೆ ನೀಡದಿರುವುದು ವಿಳಂಬಕ್ಕೆ ಕಾರಣ. ಸ್ಥಳಿಯಾಡಳಿತ ವಿವಿಧ ಅನುದಾನಗಳನ್ನು ಬಳಸಿ ಕೊಂಡು ಇನ್ನಿತರ ಅಭಿವೃದ್ದಿ ಕಾರ್ಯ ಗಳನ್ನು ಮುತುವರ್ಜಿಯಿಂದ ಮುಂದುವರಿಸುತ್ತಿದೆ. ಆದರೆ ಸಾರ್ವ ಜನಿಕವಾಗಿ ಉಪಯೋಗಕ್ಕೆ ಬರುವಂತಹ ಶೌಚಾಲಯದ ಕಾಮಗಾರಿಗೆ ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಪರಿಣಾಮ ಸಾರ್ವಜನಿಕರು ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವುದರ ಮೂಲಕ ಪೇಟೆಯ ಸ್ವತ್ಛತೆ ಕಡಿಮೆಯಾಗಿ ಗಬ್ಬು ವಾಸನೆ ಬರುತ್ತಿದೆ ಎಂದು ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಪುರಂದರ ಗೌಡ ಆರೋಪಿಸಿದರು.

ಗುತ್ತಿಗೆದಾರರಿಗೆ ಸೂಚನೆ
ತಾ.ಪಂ. , ಗ್ರಾ.ಪಂ.ನ ಜಂಟಿ ಅನುದಾನಗಳನ್ನು ಬಳಸಿ ಕೊಂಡು ಸುಸಜ್ಜಿತ ಶೌಚಾಲಯ ನಿರ್ಮಿಸಲಾಗುವುದು. 1.82 ಲಕ್ಷ ರೂ. ಅನುದಾನದಲ್ಲಿ ಈ ಕಾಮಗಾರಿ ನಡೆಯಲಿದ್ದು, ಗುತ್ತಿಗೆದಾರರು ವಿಳಂಬ ನೀತಿ ಅನುಸರಿಸದೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕೆಂದು ಸೂಚಿಸಲಾಗಿದೆ.
-ಸದಾನಂದ ಆಚಾರ್ಯ,
ಗ್ರಾ.ಪಂ. ಅಧ್ಯಕ್ಷರು, ಅಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next