Advertisement

ಆಲಂಕಾರು: ಬಿಕೋ ಎನ್ನುತ್ತಿದೆ ಹಸಿಮೀನು ಮಾರುಕಟ್ಟೆ 

11:09 AM Jul 16, 2018 | Team Udayavani |

ಆಲಂಕಾರು: ಇಲ್ಲಿನ ಗ್ರಾಮ ಪಂಚಾಯತ್‌ ವತಿಯಿಂದ ನಿರ್ಮಾಣವಾಗಿರುವ ಹಸಿ ಮೀನು ಮಾರುಕಟ್ಟೆ ಇದೀಗ ವ್ಯಾಪಾರ- ವ್ಯವಹಾರವಿಲ್ಲದೆ ಬಿಕೋ ಎನ್ನುತ್ತಿದೆ. ಆಲಂಕಾರು ಪೇಟೆಯಲ್ಲಿ ಶುಚಿತ್ವವನ್ನು ಕಾಪಾಡುವ ಮಹತ್ತರ ಉದ್ದೇಶವನ್ನಿಟ್ಟುಕೊಂಡು ನಿರ್ಮಾಣವಾದ ಹಸಿ ಮೀನು ಮಾರುಕಟ್ಟೆ ಸದ್ಯ ನಾಯಿಗಳ ವಿಶ್ರಾಂತಿ ಧಾಮವಾಗಿ ಮಾರ್ಪಾಡಾಗಿದೆ. ಮೂರು ವರ್ಷಗಳ ಹಿಂದೆ ಆಲಂಕಾರು ಪೇಟೆಯಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಹಸಿ ಮೀನು ಮಾರುಕಟ್ಟೆ ನಿರ್ಮಿಸಿ, ಮೀನು ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದರು. ಈ ಮಾರುಕಟ್ಟೆಯಿಂದ ಪೇಟೆಯಲ್ಲಿ ಶುಚಿತ್ವಕ್ಕೆ ತೊಡಕಾಗಿದೆ ಎಂಬ ಕಾರಣ ನೀಡಿ ಮಾರುಕಟ್ಟೆಯ ಪರವಾನಿಗೆಯನ್ನು ರದ್ದುಪಡಿಸಲಾಗಿತ್ತು. ಬಳಿಕ, ಗ್ರಾಮ ಪಂಚಾಯತ್‌ ತನ್ನ ಅಧೀನದ ಜಾಗದಲ್ಲಿ 2.15 ಲಕ್ಷ ರೂ. ವೆಚ್ಚದಲ್ಲಿ ಆಲಂಕಾರು ಎಪಿಎಂಸಿ ಕಟ್ಟಡದ ಬಳಿ ವ್ಯವಸ್ಥಿತ ನಾಲ್ಕು ಕೊಠಡಿಗಳ ಮಾರುಕಟ್ಟೆ ಕಟ್ಟಡವನ್ನು ನಿರ್ಮಿಸಿ ಟೆಂಡರ್‌ ಮೂಲಕ ವ್ಯಾಪಾರಕ್ಕೆ ಅನುವು ಮಾಡಿಕೊಟ್ಟಿತ್ತು.

Advertisement

ಸ್ಪರ್ಧಾತ್ಮಕ ಬಿಡ್‌
ಪ್ರಥಮ ವರ್ಷ ಮಾರುಕಟ್ಟೆಯು 1.20 ಲಕ್ಷ ರೂ.ಗೆ ಹರಜಾಗಿ, ಮೀನು ಮಾರಾಟವೂ ಸುಸೂತ್ರವಾಗಿ ನಡೆಯಿತು. 2017-18ನೇ ಸಾಲಿನ ವ್ಯಾಪಾರಕ್ಕೆ ಹರಾಜು ಪ್ರಕ್ರಿಯೆ ಸ್ಪರ್ಧಾತ್ಮಕವಾಗಿ ನಡೆದು ಕಟ್ಟಡದ ಎಲ್ಲ ಕೊಠಡಿಗಳನ್ನು ಒಬ್ಬರೇ ಬಿಡ್‌ದಾರರು ಬರೋಬ್ಬರಿ 5.20 ರೂ.ಗೆ ಹರಾಜಿನಲ್ಲಿ ಪಡೆದರು. ಕೆಲವು ದಿನಗಳಲ್ಲಿ ಪೆರಾಬೆ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಆಲಂಕಾರು ಪೇಟೆಯ ಸಮೀಪ ಖಾಸಗಿ ವ್ಯಕ್ತಿಯೊಬ್ಬರ ಜಾಗದಲ್ಲಿ ಹಸಿ ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿದ ಪರಿಣಾಮ, ಮೀನು ಮಾರಾಟ ಜಿದ್ದಾಜಿದ್ದಿನಲ್ಲಿ ನಡೆಯಿತು. ಈ ದರ ಸಮರದಲ್ಲಿ ಮಾರುಕಟ್ಟೆಯ ವ್ಯಾಪಾರಿ ನಷ್ಟ ಅನುಭವಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯ ಆಡಳಿತಕ್ಕೆ ಮನವಿ ಮಾಡಿದರು.

ತೆರೆದ ವಾಹನದಲ್ಲಿ ಮಾರಾಟ
ಮಾರುಕಟ್ಟೆಯ ವ್ಯಾಪಾರಿಯ ಮನವಿಗೆ ಸ್ಪಂದಿಸಿದ ಆಡಳಿತ ಮಂಡಳಿ, ಪೇಟೆಯ ಶುಚಿತ್ವದ ವಿಚಾರವನ್ನು ಮರೆತು ಆಲಂಕಾರು ಪೇಟೆಯಲ್ಲಿಯೇ ಎರಡು ವರ್ಷಗಳ ಬಳಿಕ ವಾಹನದಲ್ಲಿ ಮೀನು ಮಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು. ಕೆಲವು ದಿನಗಳ ಅನಂತರ ಶೆಡ್‌ ನಿರ್ಮಿಸಿ, ಮೀನು ಮಾರಾಟಕ್ಕೆ ಅವಕಾಶ ಕಲ್ಪಿಸಿತು. ಲೋಕೋಪಯೋಗಿ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದಾರೆ ಎಂಬ ವಿಚಾರ ತಿಳಿದ ತತ್‌ಕ್ಷಣ ಆರಂಭಶೂರತ್ವ ಪ್ರದರ್ಶಿಸಿದ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌, ಆಮೇಲೆ ತಣ್ಣಗಾದರು. ತಾತ್ಕಾಲಿಕ ಮಾರುಕಟ್ಟೆಯನ್ನು ತೆರವುಗೊಳಿಸುವುದಾಗಿ ಅಬ್ಬರಿಸಿದವರು ಜಾಣ ಮೌನಕ್ಕೆ ಜಾರಿದರು. ಈ ವರ್ತನೆ ಜನರಲ್ಲಿ ಸಂಶಯ ಮೂಡಿಸಿದೆ.

ಚರ್ಚಿಸಿ ಕ್ರಮ
ಆಗಸ್ಟ್‌ ತಿಂಗಳ ಅಂತ್ಯಕ್ಕೆ ಹಸಿ ಮೀನು ಮಾರುಕಟ್ಟೆಗೆ ಟೆಂಡರ್‌ ಕರೆಯಲಾಗುವುದು. ಪೇಟೆಯಲ್ಲಿ ಒಂದು ವರ್ಷದ ಅವಧಿಗಾಗಿ ಶೆಡ್‌ ನಿರ್ಮಿಸಿ ಮೀನು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದು ತಾತ್ಕಾಲಿಕ ಮಾರುಕಟ್ಟೆ. ಮುಂದಿನ ದಿನಗಳಲ್ಲಿ ಪೇಟೆಯಲ್ಲಿ ಮೀನು ಮಾರಾಟ ಕೇಂದ್ರ ಮಾಡುವ ವಿಚಾರವಾಗಿ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಮುಂದಿನ ಒಂದು ವರ್ಷಕ್ಕೆ ಇಡೀ ಆಲಂಕಾರು ಗ್ರಾಮದಲ್ಲಿ ತೆರೆದ ವಾಹನದಲ್ಲಿ ಮೀನು ಮಾರಾಟ ಮಾಡಲು ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತಿಸಲಾಗಿದೆ.
 - ಜಗನ್ನಾಥ ಶೆಟ್ಟಿ, 
ಆಲಂಕಾರು ಗ್ರಾ.ಪಂ. ಅಭಿವೃದ್ದಿ ಅಧಿಕಾರಿ

 ಸದಾನಂದ ಆಲಂಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next